ಕಾರವಾರ/ಬೆಳಗಾವಿ: ಮಾವೋವಾದಿಗಳು ಸೋಮವಾರ ಬೆಳಗ್ಗೆ ಛತ್ತೀಸ್‌ಗಡದ ಬಸ್ತರ್ ವಿಭಾಗದ ಕಾಂಕೇರ್ ಎಂಬಲ್ಲಿ ಸ್ಪೋಟಿಸಿದ ಸುಧಾರಿತ ನೆಲಬಾಂಬ್‌ಗೆ ರಾಜ್ಯದ ಇಬ್ಬರು ಬಿಎಸ್‌ಎಫ್ ಯೋಧರು ಬಲಿಯಾಗಿದ್ದಾರೆ. ಕಾರವಾರದ ವಿಜಯಾನಂದ ಸುರೇಶ್ ನಾಯ್ಕ(28), ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಹಲಗಾ ಗ್ರಾಮದ ಸಂತೋಷ ಲಕ್ಷ್ಮಣ ಗುರವ(27) ಹುತಾತ್ಮರಾದವರು.
ಮಾರ್‌ಬಿಡಾ ಎಂಬ ಬಿಎಸ್‌ಎಫ್ ಕ್ಯಾಂಪ್‌ನಲ್ಲಿದ್ದ 7 ಕಿ.ಮೀ. ದೂರದ ತಡಬುಲಿ ಎಂಬಲ್ಲಿ ಮಾವೋವಾದಿಗಳಿರುವ ಮಾಹಿತಿ ತಿಳಿಯುತ್ತಿದ್ದಂತೆ ಯೋಧರು ಅಲ್ಲಿಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಆಗ ಸುಧಾರಿತ ನೆಲಬಾಂಬ್ ಸ್ಪೋಟದಿಂದ ಬೈಕ್‌ನಲ್ಲಿದ್ದ ವಿಜಯಾನಂದ ನಾಯ್ಕ ಮತ್ತು ಸಂತೋಷ ಗುರವ್ ತೀವ್ರ ಗಾಯಗೊಂಡರು. ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತಾದರೂ ಬದುಕುಳಿಯಲಿಲ್ಲ ಎಂದು ಬಿಎಸ್‌ಎಫ್ ಮೂಲಗಳು ಹೇಳಿವೆ.
ವಿಜಯಾನಂದ ನಾಯ್ಕ 2014ರಲ್ಲಿ ಬಿಎಸ್‌ಎಫ್‌ನಲ್ಲಿ ಕಾನ್‌ಸ್ಟೆàಬಲ್ ಆಗಿ ಕೆಲಸಕ್ಕೆ ಸೇರಿದ್ದರು. ಬಿಎಸ್‌ಎಫ್‌ನ 121ನೇ ಬೆಟಾಲಿಯನ್‌ನಲ್ಲಿ ಕಾನ್‌ಸ್ಟೆಬಲ್ ಆಗಿದ್ದ ವಿಜಯಾನಂದ ಅವರನ್ನು ಮಾವೋವಾದಿಗಳ ಉಪಟಳ ಇರುವ ಬಸ್ತರ್ ಕಾಂಕೇರ ಪ್ರದೇಶಕ್ಕೆ ಡೆಪ್ಯೂಟ್ ಮಾಡಲಾಗಿತ್ತು. ಮಾವೋವಾದಿ ನಿಗ್ರಹದಳದ ಮಾಹಿತಿ ಮೇರೆಗೆ ಛತ್ತೀಸಗಡ ಮತ್ತು ಮಹಾರಾಷ್ಟ್ರ ಮಧ್ಯೆ ಇರುವ ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆದಿತ್ತು. ವಿಜಯಾನಂದ ಸಾವಿನ ಸುದ್ದಿ ಕೇಳಿ ಇಡೀ ಕುಟುಂಬ ದುಃಖತಪ್ತವಾಗಿದೆ.
ಕಾರವಾರಕ್ಕೆ ಮೃತದೇಹ: ಜಿಲ್ಲಾಡಳಿತಕ್ಕೆ ಬಂದ ಮಾಹಿತಿಗಳ ಪ್ರಕಾರ ವಿಜಯಾನಂದ ಅವರ ಪಾರ್ಥಿವ ಶರೀರ ಬುಧವಾರ ಬೆಳಗ್ಗೆ 7ಕ್ಕೆ ಜಿಲ್ಲಾಧಿಕಾರಿ ಕಚೇರಿ ತಲುಪಲಿದೆ. ಅಲ್ಲಿ ಸರ್ಕಾರಿ ಗೌರವ ನೀಡಿ, ಪಾರ್ಥಿವ ಶರೀರವನ್ನು ಅವರ ಮನೆಗೆ ಕೊಂಡೊಯ್ಯಲಾಗುವುದು ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
14 ತಿಂಗಳ ಹಿಂದೆಯಷ್ಟೇ ಯೋಧ ಸಂತೋಷನ ವಿವಾಹವಾಗಿತ್ತು. ಮೂವರು ಸಹೋದರಿಯರಿದ್ದು, ಈತ ಒಬ್ಬನೇ ಮಗ. 2014ರಲ್ಲಿ ಬಿಎಸ್‌ಎಫ್‌ಗೆ ಸೇರಿದ್ದ ಸಂತೋಷ ಗುರವ ಛತ್ತಿಸಗಡದಲ್ಲಿ 4 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ. 2017 ಮೇ 9ರಂದು ಹಲಗಾ ಸಮೀಪದ ಕಿರಲಚಿ ಗ್ರಾಮದ ಯುವತಿಯೊಂದಿಗೆ ವಿವಾಹವಾಗಿತ್ತು. ಆತ್ಮೀಯ ಗೆಳೆಯರಾಗಿದ್ದ ವಿಜಯಾನಂದ ಹಾಗೂ ಸಂತೋಷ ಸಾವಿನಲ್ಲೂ ಒಂದಾಗಿದ್ದಾರೆ.