ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗೋಳಿತ್ತೂಟ್ಟು ಸಮೀಪ ರವಿವಾರ ಬೆಳಗ್ಗೆ ಲಾರಿಗಳೆರಡು ಪರಸ್ಪರ ಢಿಕ್ಕಿ ಹೊಡೆದು ಎರಡೂ ವಾಹನಗಳ ಚಾಲಕರು ಮೃತಪಟ್ಟಿದ್ದಾರೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ನಿವಾಸಿ ಕಾಳಪ್ಪ ಅವರ ಪುತ್ರ ಮಂಜುನಾಥ (27) ಹಾಗೂ ಬೆಂಗಳೂರು ನೆಲಮಂಗಲ ತಾಲೂಕಿನ ಹನುಮಂತಪುರ ನಿವಾಸಿ ತೋಪಯ್ಯ ಅವರ ಪುತ್ರ ನಾಗೇಶ (22) ಮೃತಪಟ್ಟವರು.
ಬೆಂಗಳೂರಿನಿಂದ ಪುತ್ತೂರು, ಮಂಗಳೂರಿಗೆ ಪಾರ್ಸೆಲ್‌ಗಳನ್ನು ಸಾಗಿಸುತ್ತಿದ್ದ ಈಚರ್ ಲಾರಿ ಹಾಗೂ ಮಂಗಳೂರಿಧಿನಿಂದ ಬೆಂಗಳೂರು ಕಡೆಗೆ ಸನ್‌ಫ್ಲವರ್ ಆಯಿಲ್ ಸಾಗಾಟ ಮಾಡುಧಿತ್ತಿದ್ದ ಈಚರ್ ಲಾರಿಗಳು ಮುಖಾಮುಖೀ ಢಿಕ್ಕಿಯಾಗಿವೆ.
ಜೆಸಿಬಿ ಮೂಲಕ ಲಾರಿಗಳನ್ನು ಬದಿಗೆ ಸರಿಸಿ ಒಳಗಡೆ ಸಿಲುಕಿಕೊಂಡಿದ್ದ ಚಾಲಕಧಿರನ್ನು ಬಹಳ ಪ್ರಯಾಸಪಟ್ಟು ಹೊರತೆಗೆಯಲಾಯಿತು. ಮಂಜುನಾಥ ಅವರು ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರ ಗಾಯಗೊಂಡಿದ್ದ ಚಾಲಕ ನಾಗೇಶ ಅವರನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು. ತಲೆ ಹಾಗೂ ದೇಹದ ಇತರ ಭಾಗಗಳಿಗೆ ಗಂಭೀರ ಗಾಯಗೊಂಡಿದ್ದ ಅವರು ಆಸ್ಪತ್ರೆಯಲ್ಲಿ ಮೃತಪಟ್ಟರು.ಎಸ್ಪಿಯವರ ಸೂಚನೆಯಂತೆ ಸತೀಶ ರೈ ಅವರ ನೇತೃತ್ವದಲ್ಲಿ ಗೋಳಿತ್ತೂಟ್ಟಿನ ರಸ್ತೆ ಬದಿಯ ಕಾಡುಗಿಡಗಳನ್ನು ಕಡಿಯಲಾಗುತ್ತಿದ್ದು, ಕಾರ್ಮಿಕರ ಕಣ್ಣೆದುರೇ ಅಪಘಾತ ಸಂಭವಿಸಿದುದರಿಂದ ಗಾಬರಿಗೊಂಡ ಅವರು ಕೆಲಸವನ್ನು ಅರ್ಧಕ್ಕೇ ನಿಲ್ಲಿಸಿ ತೆರಳಿದ್ದಾರೆ.
ವಾಹನ ಸಂಚಾರಕ್ಕೆ ತಡೆ: ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಸುಮಾರು 1 ತಾಸು ವಾಹನ ಸಂಚಾರಕ್ಕೆ ತಡೆಯುಂಟಾಯಿತು. ಸರ್ಕಲ್ ಇನ್ಸ್‌ಪೆಕ್ಟರ್ ಮಹೇಶ್ ಕುಮಾರ್, ಪುತ್ತೂರು ಸಂಚಾರ ಠಾಣೆಯ ಎಸ್.ಐ. ರತನ್ ಕುಮಾರ್, ನೆಲ್ಯಾಡಿ ಹೊರಠಾಣೆ ಸಿಬಂದಿ ಸ್ಥಳಕ್ಕೆ ಆಗಮಿಸಿ ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ ಸಹಿತ ಹಲವರ ಸಹಕಾರದೊಂದಿಗೆ ಜಖಂಗೊಂಡಿದ್ದ ವಾಹನಗಳನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು.ಪುತ್ತೂರು ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.