ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಬುಧವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ.
ಜೂನ್ 11 ಮತ್ತು 12 ರಂದು ಗುಡ್ಡಗಾಡು ಜಿಲ್ಲೆಯಲ್ಲಿ ನಡೆದ ಅವಳಿ ಉಗ್ರ ದಾಳಿಯ ನಂತರ ಸೇನೆ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಜತೆಗೆ ಪೊಲೀಸರು ತೀವ್ರ ಶೋಧ ಮತ್ತು ಕಾರ್ಡನ್ ಕಾರ್ಯಾಚರಣೆ ನಡೆಸುತ್ತಿದ್ದರು. ಇಂದು ನಡುವೆ ಬೆಳಗ್ಗೆ 9.50 ರ ಸುಮಾರಿಗೆ ಗಂಡೋ ಪ್ರದೇಶದ ಬಜಾದ್ ಗ್ರಾಮದಲ್ಲಿ ಗುಂಡಿನ ಚಕಮಕಿ ಪ್ರಾರಂಭವಾಯಿತು ಎಂದು ಅಧಿಕಾರಿಗಳು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಜೂನ್ 11 ರಂದು, ಚತ್ತರಗಲ್ಲದ ಜಂಟಿ ಚೆಕ್ ಪೋಸ್ಟ್ ಮೇಲೆ ಉಗ್ರರು ದಾಳಿ ಮಾಡಿದಾಗ ಆರು ಭದ್ರತಾ ಸಿಬಂದಿ ಗಾಯಗೊಂಡಿದ್ದರು. ಮರುದಿನ ಗಂಡೋ ಪ್ರದೇಶದ ಕೋಟಾ ಮೇಲ್ಭಾಗದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಪೊಲೀಸ್ ಗಾಯಗೊಂಡಿದ್ದರು.
ಅವಳಿ ದಾಳಿಯ ನಂತರ, ಭದ್ರತಾ ಪಡೆಗಳು ತಮ್ಮ ಉಗ್ರ ವಿರೋಧಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದರು. ಜಿಲ್ಲೆಯಲ್ಲಿ ನುಸುಳಿ ಮತ್ತು ಕಾರ್ಯಾಚರಣೆ ನಡೆಸಿದ ನಾಲ್ವರು ಪಾಕಿಸ್ಥಾನ ಮೂಲದ ಉಗ್ರರ ಸುಳಿವು ನೀಡಿದವರಿಗೆ ತಲಾ 5 ಲಕ್ಷ ರೂಪಾಯಿ ನಗದು ಬಹುಮಾನವನ್ನು ಘೋಷಿಸಿದ್ದರು.
ಭದ್ರತಾ ಪಡೆಗಳ ಸಹಾಯದಿಂದ ಪೊಲೀಸರು ಸಿನೂ ಪಂಚಾಯತ್ ಗ್ರಾಮದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ಅಡಗಿಕೊಂಡಿದ್ದ ಉಗ್ರರು ಭಾರೀ ಗುಂಡಿನ ದಾಳಿ ನಡೆಸಿದ್ದಾರೆ. ಇನ್ನಿಬ್ಬರು ಉಗ್ರರು ಸ್ಥಳದಲ್ಲಿದ್ದಾರೆ ಎಂದು ಹೇಳಲಾಗಿದ್ದು ಗುಂಡಿನ ಚಕಮಕಿ ಮುಂದುವರೆದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.