Advertisement

ಸಿದ್ದಾಪುರ: ವಾರಾಹಿ ಹೊಳೆಯಲ್ಲಿ ಮುಳುಗಿ ವಿದ್ಯಾರ್ಥಿಗಳು ಸಾವು

10:18 PM Mar 31, 2022 | Team Udayavani |

ಸಿದ್ದಾಪುರ: ನೀರಲ್ಲಿ ಕಾಲುಜಾರಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ವಾರಾಹಿ ಹೊಳೆಯಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.

Advertisement

ಉಳ್ಳೂರು-74 ಗ್ರಾಮದ ಗುಡಿಕೇರಿ ಮೋಹನ್‌ ಅವರ ಪುತ್ರ ಗಣೇಶ ಎಚ್‌.(17) ಮತ್ತು ಹಾಡಿದೇವಸ್ಥಾನದ ಮಂಜುನಾಥ ಮಡಿವಾಳ ಅವರ ಪುತ್ರ ಸುಮಂತ್‌ (17) ಮೃತರು.

ಮೃತಪಟ್ಟವರು ಶಂಕರನಾರಾಯಣ ಸರಕಾರಿ ಪ್ರಥಮ ಕಾಲೇಜಿನ ಪ್ರಥಮ ಪಿಯುಸಿಯ ವಿದ್ಯಾರ್ಥಿಗಳಾಗಿದ್ದಾರೆ. ವಾರಾಹಿ ಹೊಳೆಯ ಬಳಿ ಸ್ನಾನಕ್ಕೆ ಇಳಿಯುವಾಗ ಆಕಸ್ಮಿಕವಾಗಿ ಇಬ್ಬರು ಕಾಲು ಜಾರಿ, ನದಿಗೆ ಬಿದ್ದು ಮುಳುಗಿ ಮೃತಪಟ್ಟಿದ್ದಾರೆ. ಸ್ನೇಹಿತರು ಇಬ್ಬರನ್ನು ರಕ್ಷಿಸಲು ಪ್ರಯತ್ನಿಸಿದ್ದರೂ, ಅದಾಗಲೇ ಇಬ್ಬರು ನೀರಲ್ಲಿ ಮುಳುಗಿದ್ದರು.

ವಾರಾಹಿ ಹೊಳೆಯ ಬಳಿಯಿಂದ ಬೊಬ್ಬೆ ಕೇಳಿ ಓಡಿ ಬಂದ ತೆಂಕೋದ್ದು ಶ್ರೀಕಾಂತ ಶೆಟ್ಟಿ ಅವರು ಪ್ರಾಣದ ಹಂಗು ತೊರೆದು, ವಾರಾಹಿ ಹೊಳೆಗೆ ಹಾರಿ ಇಬ್ಬರನ್ನು ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ವಾರಾಹಿ ನದಿಯಲ್ಲಿ ರಭಸವಾಗಿ ನೀರು ಹರಿಯುತ್ತಿತ್ತು. ಇಬ್ಬರನ್ನೂ ಹೊಳೆಯಿಂದ ಮೇಲಕ್ಕೆತ್ತಿದರೂ ಪ್ರಯೋಜನವಾಗಿಲ್ಲ.

ಏಕಮಾತ್ರ ಪುತ್ರ :

Advertisement

ಉಳ್ಳೂರು-74 ಗ್ರಾಮದ ಹಾಡಿದೇವಸ್ಥಾನದ ಮಂಜುನಾಥ ಮಡಿವಾಳ ಮತ್ತು ಕುಸುಮಾ ದಂಪತಿಗೆ ಏಕಮಾತ್ರ ಪುತ್ರನ್ನಾಗಿದ್ದ ಸುಮಂತ್‌. ತಂದೆ-ತಾಯಿ ಹುಬ್ಬಳಿಯಲ್ಲಿ ಹೊಟೇಲ್‌ ನಡೆಸಿಕೊಂಡಿದ್ದು, ಮಗನ ವಿದ್ಯಾಭ್ಯಾಸಕ್ಕಾಗಿ ಅಜ್ಜ-ಅಜ್ಜಿಯ ಮನೆಯಲ್ಲಿ ಬಿಟ್ಟಿದ್ದರು.

ಬಡತನದ ಕುಟುಂಬ :

ಉಳ್ಳೂರು-74 ಗ್ರಾಮದ ಗುಡಿಕೇರಿ ಮೋಹನ್‌ ಮತ್ತು ಸುಮನಾ ದಂಪತಿಯ ಮೂವರು ಪುತ್ರರಲ್ಲಿ ಗಣೇಶ ಎಚ್‌. ಕಿರಿಯ ಮಗನಾಗಿದ್ದಾನೆ. ಅವರದ್ದು ಬಡ ಕುಟುಂಬವಾಗಿದೆ.

ಅಪಾಯಕಾರಿ ಹೊಳೆ :

ವಾರಾಹಿ ಹೊಳೆ ಅಪಾಯಕಾರಿಯಾಗಿದೆ. ಹೊಳೆ ಆಳ ಮತ್ತು ಸುಳಿಯಿಂದ ಕೂಡಿದೆ. ವಿದ್ಯುತ್‌ ಉತ್ಪಾದನೆಯ ನೀರನ್ನು ಬಿಡುವುದರಿಂದ ಅಪಾಯದ ಮಟ್ಟದಲ್ಲಿ ನೀರು ತುಂಬಿ ಹರಿಯುತ್ತಿರುತ್ತದೆ. ಹೀಗೆ ನೀರು ಬಿಟ್ಟಾಗ ಅನೇಕ ಮಂದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟ ಘಟನೆಗಳು ನಡೆದಿವೆ.

ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಶಂಕರನಾರಾಯಣ ಸರಕಾರಿ ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದರು. ಅಮಾಸೆಬೈಲು ಪೊಲೀಸ್‌ ಠಾಣೆಯ ಠಾಣಾಧಿಕಾರಿ ಸುಬ್ಬಣ್ಣ ಅವರು ಘಟನ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next