Advertisement

ಟು-ಸ್ಟ್ರೋಕ್‌ ಆಟೋ ನಿಷೇಧವಿಲ್ಲ

12:06 PM Nov 20, 2018 | Team Udayavani |

ಬೆಂಗಳೂರು: ನಗರದಲ್ಲಿರುವ “ಟು-ಸ್ಟ್ರೋಕ್‌’ ಆಟೋಗಳ ಮೇಲಿನ ನಿಷೇಧವನ್ನು ಸರ್ಕಾರ ದಿಢೀರ್‌ ಹಿಂಪಡೆದಿದ್ದು, ಈ ಮೂಲಕ ವಾಯುಮಾಲಿನ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೈಗೊಂಡ ಕ್ರಮಕ್ಕೆ ಹಿನ್ನಡೆಯಾಗಿದೆ. ಟು-ಸ್ಟ್ರೋಕ್‌ ಆಟೋಗಳು ಹೆಚ್ಚಿನ ಪ್ರಮಾಣದಲ್ಲಿ ವಾಯುಮಾಲಿನ್ಯ ಉಂಟುಮಾಡುತ್ತವೆ ಎಂಬ ಕಾರಣಕ್ಕೆ 2018ರ ಏಪ್ರಿಲ್‌ನಿಂದಲೇ ನಗರದಲ್ಲಿ ಎಲ್ಲ ಪ್ರಕಾರದ ಟು-ಸ್ಟ್ರೋಕ್‌ ಆಟೋಗಳನ್ನು ಸರ್ಕಾರ ನಿಷೇಧಿಸಿ ಆದೇಶ ಹೊರಡಿಸಿತ್ತು.

Advertisement

ಆದರೆ ಇದಕ್ಕೆ ಸೂಕ್ತ ಸ್ಪಂದನೆ ದೊರೆಯದೆ, ಎಂದಿನಂತೆ ಆಟೋಗಳ ಕಾರ್ಯಾಚರಣೆ ಮುಂದುವರಿದೆ. ಈ ಮಧ್ಯೆ ವಿವಿಧ ಸಂಘಟನೆಗಳು ನಿಷೇಧ ಹಿಂಪಡೆಯುವಂತೆ ನಿರಂತರ ಒತ್ತಾಯ ಮಾಡುತ್ತಿದ್ದವು. ಅಂತಿಮವಾಗಿ ಎಲ್‌ಪಿಜಿ ಆಧಾರಿತ ಟು-ಸ್ಟ್ರೋಕ್‌ ಆಟೋಗಳ ಮೇಲಿನ ರದ್ದತಿಯನ್ನು ಹಿಂಪಡೆದಿದೆ. 2020ರ ಮಾರ್ಚ್‌ ಅಂತ್ಯದವರೆಗೂ ನವೀಕರಿಸಲು ಅನುಮತಿ ನೀಡಿ ಈಚೆಗೆ ಆದೇಶ ಹೊರಡಿಸಿದೆ. 

20 ಸಾವಿರ ಟು-ಸ್ಟ್ರೋಕ್‌ ಆಟೋಗಳು: ನಗರದಲ್ಲಿ ಸುಮಾರು ಒಂದೂವರೆ ಲಕ್ಷ ಆಟೋಗಳಿದ್ದು, ಅದರಲ್ಲಿ ಅಂದಾಜು 20 ಸಾವಿರ “ಟು-ಸ್ಟ್ರೋಕ್‌’ ಆಟೋಗಳಿವೆ. ಇದರಲ್ಲಿ ಬಹುತೇಕ ಎಲ್ಲವೂ ಡೀಸೆಲ್‌ನಿಂದ ಎಲ್‌ಪಿಜಿಗೆ ಪರಿವರ್ತನೆಯಾಗಿವೆ ಎನ್ನಲಾಗಿದೆ. ನಿಷೇಧದ ಹಿನ್ನೆಲೆಯಲ್ಲಿ 2018ರ ಏಪ್ರಿಲ್‌ನಿಂದ ಈಚೆಗೆ ಈ ಮಾದರಿಯ ಯಾವುದೇ ಆಟೋಗಳಿಗೆ ಅರ್ಹತಾ ಪ್ರಮಾಣಪತ್ರ (ಎಫ್ಸಿ) ನೀಡಿರಲಿಲ್ಲ.

ಇದರಿಂದ ಚಾಲಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದರು. ನಿರಂತರ ಒತ್ತಾಯದ ಮೇರೆಗೆ 2020ರವರೆಗೆ ನವೀಕರಣಕ್ಕೆ ಅವಕಾಶ ನೀಡಲಾಗಿದೆ. ಈ ಮೊದಲು ನಿಷೇಧದ ಹಿನ್ನೆಲೆಯಲ್ಲಿ ಟು-ಸ್ಟ್ರೋಕ್‌ ಆಟೋಗಳನ್ನು ಗುಜರಿಗೆ ಹಾಕಲು ಮಾಲಿಕರಿಗೆ ಸೂಚಿಸಲಾಗಿತ್ತು. ಇದಕ್ಕಾಗಿ ಎರಡು ಕಡೆ ಸಾðéಪ್‌ ಯೂನಿಟ್‌ಗಳನ್ನೂ ತೆರೆಯಲಾಗಿತ್ತು. ಹೀಗೆ ಗುಜರಿಗೆ ಹಾಕಿದ್ದರ ಪ್ರತಿಯಾಗಿ ಸರ್ಕಾರ 30 ಸಾವಿರ ರೂ. ಸಬ್ಸಿಡಿ ನೀಡುವುದಾಗಿ ಘೋಷಿಸಿತ್ತು.

ಆದರೆ, ಇದಕ್ಕೆ ಅತ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದಕ್ಕೆ ಮುಖ್ಯಕಾರಣ- ಸಬ್ಸಿಡಿ ಹಣ ಸಾಕಾಗುವುದಿಲ್ಲ, ಆ ಹಣ ಫ‌ಲಾನುಭವಿ ಕೈಸೇರಲು ತಿಂಗಳುಗಟ್ಟಲೆ ಸಮಯ ಹಿಡಿಯುತ್ತದೆ. ಈ ಮಧ್ಯೆ ಇದ್ದ ಆಟೋ ಗುಜರಿಗೆ ಹಾಕಿ, ಕುಟುಂಬ ನಿರ್ವಹಣೆ ಹೇಗೆ ಎಂಬುದಾಗಿತ್ತು. ಸಬ್ಸಿಡಿಗೆ ಇಟ್ಟ 30 ಕೋಟಿ ಹಣ ಬಳಕೆಯಾಗದೆ ಹಣಕಾಸು ಇಲಾಖೆಗೆ ವಾಪಸ್ಸಾಗಿದ್ದು, ನಿಷೇಧವನ್ನೂ ಹಿಂಪಡೆಯಲಾಗಿದೆ.
 
ಅಧಿಕಾರಿಗಳ ಸಮಜಾಯಿಷಿ: ಹೊಸ ಆಟೋಗಳ ಬೆಲೆ ಒಂದೂವರೆ ಲಕ್ಷ ರೂ. ಆದರೆ, ಸರ್ಕಾರ ಕೊಡುವ ಸಬ್ಸಿಡಿ 30 ಸಾವಿರ ರೂ. ಈ ಮೊತ್ತವನ್ನು ಹೆಚ್ಚಳ ಮಾಡಲೂ ಸರ್ಕಾರ ನಿರಾಕರಿಸಿದೆ. ಮತ್ತೂಂದೆಡೆ ಹಣಕಾಸು ಸಂಸ್ಥೆಗಳಿಂದ ಆರ್ಥಿಕ ನೆರವು ಕೊಡುವಂತಹ ಯಾವುದೇ ಯೋಜನೆಗಳೂ ಇಲ್ಲ. ಹೀಗಿರುವಾಗ, ಲಕ್ಷ ರೂ. ಹೊಂದಿಸುವುದು ಕಷ್ಟವಾಗುತ್ತದೆ. ಅಲ್ಲಿಯವರೆಗೆ ಕುಟುಂಬ ನಿರ್ವಹಣೆ ಹೇಗೆ ಮಾಡುವುದು?

Advertisement

ಆಯ್ದು ತಿನ್ನುವ ಕೋಳಿಯ ಕಾಲು ಕತ್ತರಿಸಿದಂತಾಗುತ್ತದೆ. ಕೂಡಲೇ ಈ ಆದೇಶ ಹಿಂಪಡೆಯಬೇಕು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತು ವಿವಿಧ ಆಟೋ ಮಾಲಿಕರ ಸಂಘಟನೆಗಳ ಪದಾಧಿಕಾರಿಗಳನ್ನು ಒಳಗೊಂಡ ಕೋರ್‌ ಕಮಿಟಿ ಸದಸ್ಯ ಎಲ್‌. ಜಯರಾಂ ಸಭೆಯಲ್ಲಿ ಅಲವತ್ತುಕೊಂಡರು. ಜತೆಗೆ ಇತರೆ ಸಂಘಟನೆಗಳು ಕೂಡ ಎಪ್‌ಸಿಗೆ ಕಾಲಾವಕಾಶ ವಿಸ್ತರಿಸುವಂತೆ ಒತ್ತಾಯಿಸಿದ್ದರಿಂದ ಸರ್ಕಾರ ವಿನಾಯ್ತಿ ನೀಡಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ. 

ಅಷ್ಟಕ್ಕೂ ಎಲ್‌ಪಿಜಿ 4-ಸ್ಟ್ರೋಕ್‌ ಮತ್ತು ಟು-ಸ್ಟ್ರೋಕ್‌ ಆಟೋಗಳಿಗೆ ತುಂಬಾ ವ್ಯತ್ಯಾಸವೇನಿಲ್ಲ. ಟು-ಸ್ಟ್ರೋಕ್‌ ಆಟೋಗಳು ಹೆಚ್ಚು ಸದ್ದು ಮಾಡುತ್ತವೆ ಅಷ್ಟೇ. ಹೆದ್ದಾರಿಗಳಲ್ಲಿ ಅತಿ ಹೆಚ್ಚು ಹೊಗೆ ಉಗುಳುವ ಬಸ್‌ಗಳನ್ನು ಬಿಟ್ಟು, ಕೇವಲ ಹೆಚ್ಚು ಸದ್ದು ಮಾಡುತ್ತವೆ ಎಂಬ ಕಾರಣಕ್ಕೆ ನಿಷೇಧಿಸುವುದು ಎಷ್ಟು ಸರಿ ಎಂಬುದು ಚಾಲಕರ ಪ್ರಶ್ನೆ. 

ತ್ವರಿತ ಸಬ್ಸಿಡಿ ನೀಡಲು ಮುಂದೆಬಂದಿದ್ದ ಸಂಸ್ಥೆ: ಈ ಮಧ್ಯೆ ಟು-ಸ್ಟ್ರೋಕ್‌ ಆಟೋಗಳು ಗುಜರಿಗೆ ಹಾಕಲು ಮುಂದೆಬರುವ ಮಾಲಿಕರಿಗೆ ತ್ವರಿತ ಗತಿಯಲ್ಲಿ ಎನ್‌ಜಿಒಗಳ ಮೂಲಕ ಸಬ್ಸಿಡಿ ಹಣ ಪೂರೈಸಲು ವಿಪ್ರೋ ಫಿಲಾಂಥಪಿಕ್‌ ಇನಿಷಿಯೇಟಿವ್ಸ್‌ ಮುಂದೆಬಂದಿತ್ತು. ಈ ಸಂಬಂಧ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ಕೂಡ ನಡೆದಿತ್ತು. ಆಟೋ ಗುಜರಿಗೆ ಹಾಕಿದ ನಂತರ ಸಬ್ಸಿಡಿಗೆ ಮಾಲಿಕರು ಎರಡು ತಿಂಗಳು ಕಾಯಬೇಕು.

ಅಲ್ಲದೆ, ಇದಕ್ಕಾಗಿ ಸಾಕಷ್ಟು ಅಲೆದಾಡಬೇಕು. ಈ ಕಿರಿಕಿರಿಗಾಗಿಯೇ ಅನೇಕರು ಮುಂದೆಬರುತ್ತಿಲ್ಲ. ಹಾಗಾಗಿ, ತ್ವರಿತವಾಗಿ ಸಬ್ಸಿಡಿ ಹಣ ಫ‌ಲಾನುಭವಿಗೆ ನೀಡುವುದು. ನಂತರ ಸರ್ಕಾರದಿಂದ ಬರುವ ಹಣವನ್ನು ತಾನು ಪಡೆಯಲು ಒಂದು ಎನ್‌ಜಿಒ ಮುಂದೆಬಂದಿತ್ತು. ಇದಕ್ಕೆ ಅಧಿಕಾರಿಗಳೂ ಸಮ್ಮತಿಸಿದ್ದರು ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ. ಆದರೆ, ಈ ಎಲ್ಲ ಬೆಳವಣಿಗೆಗಳ ನಡುವೆ ನಿಷೇಧವನ್ನೇ ಸರ್ಕಾರ ಹಿಂಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next