Advertisement

ಎರಡು ಸಣ್ಣ ಸಂಗತಿಗಳು

04:59 PM Jun 01, 2019 | Team Udayavani |

ಮೊಬೈಲ್‌ನಲ್ಲಿ ದೃಶ್ಯಗಳನ್ನು ಸುಮ್ಮನೆ ನೋಡುತ್ತ ನೋಡುತ್ತ ಸ್ಪಂದಿಸುವ ಸ್ವಭಾವವನ್ನೇ ಮರೆತೇಬಿಟ್ಟಿದ್ದೇವೆ. ನಿಜಜೀವನದಲ್ಲಿ ಹಿಂಸೆ ಮಾಡುವುದನ್ನು , ಕೊಲೆ ಮಾಡುವುದನ್ನು, ರೇಪ್‌ ಮಾಡುವುದನ್ನು ನೋಡಿದಾಗಲೂ ಏನೂ ಅನ್ನಿಸದಂಥ ಸ್ಥಿತಿ. ಒಂದು ರೀತಿಯ “ಪ್ಯಾಸಿವ್‌’ ಗುಣ. ನಾವೆಷ್ಟು ನಿರ್ಭಾವುಕರಾಗಿದ್ದೇವೆ ಎಂಬುದು ನಗರದಲ್ಲಿ ಜನರ ನಡವಳಿಕೆಗಳನ್ನು ನೋಡಿಯೇ ತಿಳಿಯುತ್ತದೆ. ಅದರಲ್ಲೂ ವಿದ್ಯಾವಂತರೆನ್ನಿಸಿಕೊಂಡ ಯುವಜನರು ಶಿಷ್ಟಾಚಾರವನ್ನು ಮರೆತಿದ್ದಾರೆ. ಈ ಎರಡು ಸಂಗತಿಗಳು ನಮಗೆ ದೊಡ್ಡವೆಂದು ಅನ್ನಿಸುವುದಿಲ್ಲ. ಆದರೆ, ಇವು ಇಂದಿನ ನಾಗರಿಕರ ವರ್ತನೆಯ ಪ್ರತೀಕಗಳಂತಿವೆ.

Advertisement

1 ಪ್ರತಿ ದಿನವೂ ಸಂಜೆ ಮಕ್ಕಳೊಡನೆ ಅಡ್ಡಾಡಿ ಬರಲು ನಾನು ಹೋಗುವ ಉದ್ಯಾನವನದ ಗೇಟಿನ ಎರಡೂ ಬದಿಯಲ್ಲಿ ಸಾಕಷ್ಟು ದಪ್ಪ ಅಕ್ಷರದಲ್ಲಿಯೇ ದಯಮಾಡಿ ಗೇಟನ್ನು ಮುಚ್ಚಿರಿ : please close the gate ಎಂದು ಬರೆಯಲಾಗಿದೆ. ಸಾರ್ವಜನಿಕ ಪ್ರಕಟಣೆಗಳನ್ನು ಓದಲೇಬೇಕೆಂಬ ತರಬೇತಿಯನ್ನು ಹಾಗೂ ಅದರಂತೆ ನಿಯಮವನ್ನು ಪಾಲಿಸಬೇಕೆಂಬ ಬುದ್ಧಿ ನಮಗಿರುವುದಿಲ್ಲವಲ್ಲ. ಗೇಟು ತೆರೆದುಕೊಂಡು ಒಳಗೆ ಬರುವ ಹಾಗೂ ಹೊರಗೆ ಹೋಗುವ ಜನರಲ್ಲಿ ಕೆಲವರು ಮಾತ್ರ ಗೇಟನ್ನು ತೆರೆದಂತೆಯೇ ಮುಚ್ಚುತ್ತಾರೆ. ಆ ಗೇಟಿನ ಮೇಲಿರುವ ಬರಹವು ಬರುವ ಹೋಗುವ ಮಂದಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿ, ಓದಿಸಿಕೊಳ್ಳಲಾರದೆ ಬಹುತೇಕ ಸದಾ ತೆರೆದುಕೊಂಡಿರುತ್ತದೆ. ನೋಡಿದಾಗೆಲ್ಲಾ ಹೋಗಿ ಮುಚ್ಚಿಬರುವುದು ಕೆಲವರ “ಡ್ನೂಟಿ ಆನ್‌ ವಾಕಿಂಗ್‌’ ಆಗಿ ಬದಲಾಗಿದೆ.

ಈ ಪಾರ್ಕಿನೊಳಗೆ ತುಂಬಾ ಸಣ್ಣ ಮಕ್ಕಳು ತಮ್ಮದೇ ಗುಂಪುಗಳನ್ನು ಮಾಡಿಕೊಂಡು ಆಡುತ್ತಿರುತ್ತಾರೆ. ತೆರೆದಿರುವ ಗೇಟಿನಿಂದ ಅಕಸ್ಮಾತ್‌ ಹೊರಗೆ ಅವರು ಓಡಿಬಿಟ್ಟರೆ; ಪಾರ್ಕಿನ ಮುಂದೆಯೇ ಹೆಚ್ಚಿನ ವಾಹನ ಸಂಚಾರವಿರುವ ರಸ್ತೆಯಿದೆ, ಏನಾದರೂ ಅಪಾಯ- ಅನಾಹುತವಾದರೆ- ಎಂಬುದರ ಬಗ್ಗೆ ಬೇರೆಯವರು ಯೋಚಿಸುವುದೇ ಇಲ್ಲ. ಹಾಗೆಯೇ ಈ ನಗರಗಳಲ್ಲಿ ಬೀದಿ ನಾಯಿಗಳಿಗೇನು ಕೊರತೆಯೆ? ಯಾವುದಾದರೊಂದು ನಾಯಿ ಒಳನುಗ್ಗಿ ಯಾರಿಗಾದರೂ ಕಚ್ಚಿಬಿಟ್ಟರೆ? ಹೀಗೆ ಹಲವು ಮಂದಿ ಯೋಚಿಸುವುದಿಲ್ಲ. ಹಾಗೆಂದ ಮಾತ್ರಕ್ಕೆ ಪಾರ್ಕಿನ ಬಾಗಿಲು ತೆರೆದಿಟ್ಟು ಒಳ-ಹೊರಗೆ ಓಡಾಡುವವರು ಈ ಉದ್ಯಾನವನಕ್ಕೆ ಅಪರೂಪಕ್ಕೆ ಬರುವವರೂ ಆಗಿರುವುದಿಲ್ಲ, ಓದುಬರಹ ತಿಳಿಯದವರೂ ಅಲ್ಲ. ಇದಕ್ಕೆ ಹೆಚ್ಚಿನ ಓದೇನೂ ಬೀರುವುದಿಲ್ಲ. ಬೇಸರವಾಗುವ ಮತ್ತೂಂದು ಸತ್ಯವೆಂದರೆ, ಹೀಗೆ ತಪ್ಪು ಮಾಡುವವರು ಹೆಚ್ಚಾಗಿ ಯುವಜನಾಂಗದವರೇ ಆಗಿರುತ್ತಾರೆ !

2 ಸಾಕಷ್ಟು ಅಕ್ಷರಸ್ಥರಾಗಿರುವ ನಮಗೆ Footpath ಅಥವಾ ಪಾದಚಾರಿ ಮಾರ್ಗ’ದ ಅರ್ಥ ಗೊತ್ತಿದೆ. ಆದರೂ ರಸ್ತೆ ಮೇಲೆ ಹೋಗಬೇಕಾದ ವಾಹನ ಪಾದಚಾರಿ ಮಾರ್ಗದಲ್ಲೂ, ಪಾದಚಾರಿಗಳು ರಸ್ತೆಯ ಮೇಲೂ ಓಡಾಡುವುದು ಸಾಮಾನ್ಯ. ಒಮ್ಮೆ ನಾನು ಮತ್ತು ನನ್ನ ಸಹೋದ್ಯೋಗಿ ಮಿತ್ರರು ಒಂದು ಹೊಸವರ್ಷದ ಸಂಕಲ್ಪ ಮಾಡಿಕೊಂಡೆವು : ಇನ್ನು ಮೇಲೆ ರಸ್ತೆಯಲ್ಲಿ ನಡೆಯುವ ಪ್ರಸಂಗ ಬಂದರೆ, ಪಾದಚಾರಿ ಮಾರ್ಗದಲ್ಲೇ ನಡೆಯಬೇಕು! ಇದೇನು ಬಹಳ ಸಿಂಪಲ್‌ ಎಂದು ಭಾಸವಾಗಬಹುದು. ನಾವೂ ಸಹ ಹಾಗೆಯೇ ಅಂದುಕೊಂಡಿದ್ದೆವು. ಆದರೆ, ಪಾಲಿಸಲು ಹೋದಾಗಲೇ ಅದರ ಕಷ್ಟ ಅರ್ಥವಾದದ್ದು. ಏಕೆಂದರೆ ಅಸಡ್ಡಾಳವಾಗಿ ನಡೆದು ಅಭ್ಯಾಸವಿರುವ ನಮಗೆ ರಸ್ತೆ ಬದಿಯ ಪಾದಚಾರಿ ಮಾರ್ಗಗಳನ್ನು ಬಳಸುವುದು ಪ್ರಾರಂಭದಲ್ಲಿ ಬಹಳ ಕಷ್ಟವೆನಿಸಿತು. ಆಮೇಲೆ ನಾವು ನಮ್ಮ ಮನಸ್ಸನ್ನು ತರಬೇತಿಗೊಳಿಸಿದೆವು. ಆದರೆ ನಡೆಯಲು ಪಾದಚಾರಿ ಮಾರ್ಗವೇ ಎಷ್ಟೋ ಕಡೆ ಇರಲಿಲ್ಲ !

ನಮ್ಮ ನಗರಗಳ ಬಹುಪಾಲು ಫ‌ುಟ್‌ಪಾತ್‌ಗಳು ಪಾರ್ಕಿಂಗ್‌ ಸ್ಥಳವಾಗಿವೆ, ಸದಾ ರಿಪೇರಿಯಲ್ಲಿರುತ್ತವೆ ಅಥವಾ ಎಷ್ಟೋ ರಸ್ತೆಗಳಿಗೆ ಪಾದಚಾರಿ ಮಾರ್ಗಗಳು ಇರುವುದೇ ಇಲ್ಲ. ಟ್ರಾಫಿಕ್‌ ಸಿಗ್ನಲ್‌ ಬಂದಾಗಲೆಲ್ಲ ಪಾದಚಾರಿ ಮಾರ್ಗಗಳು ದ್ವಿಚಕ್ರವಾಹನಗಳಿಗೆ ರಸ್ತೆಗಳಾಗಿ ಬಿಡುತ್ತವೆ. ಪಾದಚಾರಿಗಳಿಗೆ ಹಳ್ಳಬಿದ್ದಿರುವ ನೆಲ ನೋಡುತ್ತಾ ನಡೆಯುವುದೋ ಅಥವಾ ಹಿಂದೆಮುಂದೆ ಬರುವ ಬೈಕ್‌ಗಳಿಂದ ಗುದ್ದಿಸಿಕೊಳ್ಳದಂತೆ ನಡೆಯುವುದೋ ಗೊತ್ತಾಗುವುದಿಲ್ಲ. ಇನ್ನು ಮಳೆ ಬಂದು ಜಲಾವೃತವಾದರೆ, ರಸ್ತೆ ಮತ್ತು ಫ‌ುಟಾ³ತ್‌ ಗಳು ತಾವು ಬೇರೆ ಬೇರೆ ಎಂದು ಗುರುತಿಸಲಾಗದಷ್ಟು ಅನ್ಯೋನ್ಯದಿಂದ‌ ಒಂದೇ ರೀತಿ ಕಾಣುತ್ತ ಎಚ್ಚರ ಹಾಗೂ ಗ್ರಹಚಾರ ತಪ್ಪಿದವರಿಗೆ ಕಂಟಕವಾಗುತ್ತವೆ.

Advertisement

ರಸ್ತೆ ದಾಟುವವರಿಗೆ ಅವಕಾಶ ಕೊಡದೆ ವಾಹನ ನುಗ್ಗಿಸುವುದು, ಸಿಗ್ನಲ್‌ ಗಳನ್ನು ಜಂಪ್‌ ಮಾಡುವುದು, ವಿಪರೀತ ಹಾರ್ನ್ ಮಾಡುವುದು, ಸೈಲೆನ್ಸರ್‌ ಕಿತ್ತು ಹಾಕಿಕೊಂಡು ವಿಪರೀತ ಶಬ್ದಮಾಡುವುದು, ವೇಗ ನಿಯಂತ್ರಣ ಮೀರುವುದು, ಡ್ರ್ಯಾಗ್‌ ರೇಸ್‌ ಮಾಡುವುದು, ಶಾಲಾ ವಾಹನಗಳಿಗೆ, ಆ್ಯಂಬುಲೆನ್ಸ್‌ಗಳಿಗೆ ದಾರಿ ಮಾಡಕೊಡದಿರುವುದು ಮೊದಲಾದವು ನಮ್ಮ ರಸ್ತೆ ನಿಯಮಗಳನ್ನು ಗಾಳಿಗೆ ತೂರಿ ಬಿಟ್ಟಿರುವುದಕ್ಕೆ ಕೆಲವು ಮಾದರಿಗಳಷ್ಟೆ. ಇಷ್ಟೆಲ್ಲಾ ಮಾಡುವ ಈ ಶತಮಾನದಲ್ಲಿನ ವಿದ್ಯಾವಂತ ಜನರು!

ನಾವು ಯಾವ ವೇಗದಲ್ಲಿದ್ದೇವೆ ಎಂದರೆ, ನಮ್ಮ ಗುರಿಯನ್ನು ನಿರ್ಧರಿಸಿಕೊಂಡು ಅದರತ್ತ ಮಾತ್ರ ಮನಸ್ಸನ್ನು ಕೇಂದ್ರೀಕರಿಸಿ ಸುತ್ತಲಿನ ಅಗತ್ಯಕ್ಕೆ ಸ್ಪಂದಿಸಲಾರದಷ್ಟು ಸಂವೇದನಾ ರಹಿತ ಮನಸ್ಥಿತಿಯಲ್ಲಿ ಓಡುತ್ತಿದ್ದೇವೆ. ಈ ಓಡುವ ವೇಗದಲ್ಲಿ ಗುರಿ ಮುಟ್ಟುವ ಕಡೆ ಮನವಿಟ್ಟು ಸುತ್ತಮುತ್ತಲ ಜಗದ ಆಗು ಹೋಗುಗಳಿಗೆ ಪ್ರತಿಕ್ರಿಯಿಸದಂತೆ ಸರ್ವೇಂದ್ರಿಯಗಳಿಗೆ ತರಬೇತಿ ಕೊಟ್ಟಿರುತ್ತೇವೆ.

ವಸುಂಧರಾ ಕೆ. ಎಂ.

Advertisement

Udayavani is now on Telegram. Click here to join our channel and stay updated with the latest news.

Next