ಬೆಂಗಳೂರು: ನಗರದ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ರುವ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ಕನ್ನಿಂಗ್ ಹ್ಯಾಮ್ ರಸ್ತೆಯ ರಾಜ್ಯ ಸೌಹಾರ್ದ ಮಾರಾಟ ಮಹಾಮಂಡಳ ಕಟ್ಟಡದ ಭದ್ರತಾ ಸಿಬ್ಬಂದಿ, ಚಾಮರಾಜನಗರ ಮೂಲದ ನಿಂಗಣ್ಣ (42) ಆತ್ಮಹತ್ಯೆ ಮಾಡಿಕೊಂಡವರು.
ಕಳೆದ ಮೂರು ವರ್ಷಗಳಿಂದ ರಾಜ್ಯ ಸೌಹಾರ್ದ ಮರಾಟ ಮಹಾಮಂಡಳ ಕಟ್ಟಡದಲ್ಲಿ ಭದ್ರತಾ ಸಿಬ್ಬಂದಿಯಾಗಿರುವ ನಿಂಗಣ್ಣ, ಇಲ್ಲಿನ ಶೆಡ್‌ನಲ್ಲಿ ವಾಸವಾಗಿದ್ದರು. ಈ ಮಧ್ಯೆ ವಿಪರೀತ ಮದ್ಯ ಸೇವಿಸುತ್ತಿದ್ದರು. ಜತೆಗೆ ಅನಾರೋಗ್ಯದಿಂದ ಬಳಲುತ್ತಿದ್ದರು. ಇದನ್ನು ಗಮನಿಸಿದ್ದ ಭದ್ರತಾ ಏಜೆನ್ಸಿ ಅಧಿಕಾರಿಗಳು ಹಾಗೂ ಕಟ್ಟಡ ನಿರ್ವಾಹಣಾಧಿಕಾರಿಗಳು ಹಲವು ಬಾರಿ ಎಚ್ಚರಿಕೆ ನೀಡಿದ್ದರು.
ಅಲ್ಲದೆ, ಚಾಮರಾಜನಗರದಲ್ಲಿರುವ ಇವರ ಸಂಬಂಧಿಕರಿಗೂ ಮಾಹಿತಿ ನೀಡಿದ್ದು, ಕರೆದೊಯ್ಯುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಇನ್ನು ಮೂರು ದಿನಗಳಲ್ಲಿ ಬರುವುದಾಗಿ ಸಂಬಂಧಿಕರು ಹೇಳಿದ್ದರು. ಈ ನಡುವೆ ಶುಕ್ರವಾರ ತಡರಾತ್ರಿ ಶೆಡ್‌ನಲ್ಲಿಯೇ ನಿಂಗಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು. ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೂಂದು ಪ್ರಕರಣದಲ್ಲಿ ಅಸ್ಸಾಂ ಮೂಲದ ಭದ್ರತಾ ಸಿಬ್ಬಂದಿಯೊಬ್ಬ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಿಲ್ಲರ್ ರಸ್ತೆಯ ಕ್ಲಬ್ ಮಹೇಂದ್ರ ಕಟ್ಟಡದಲ್ಲಿ ನಡೆದಿದೆ. ಅಸ್ಸಾಂ ಮೂಲದ ಮೊಹಮ್ಮದ್ ಅಲಿಯಾಸ್ ಶಹಜಹಾನ್ (38) ಆತ್ಮಹತ್ಯೆ ಮಾಡಿಕೊಂಡವರು.
ಕಳೆದ 10 ವರ್ಷಗಳಿಂದ ಕ್ಲಬ್ ಮಹಿಂದ್ರ ಕಟ್ಟಡದಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದ ಮೊಹಮ್ಮದ್, ಕಟ್ಟಡದ ಹಿಂಭಾಗದಲ್ಲಿರುವ ಶೆಡ್‌ನಲ್ಲಿ ವಾಸವಿದ್ದರು. ಈ ಮಧ್ಯೆ ಶುಕ್ರವಾರ ತಡರಾತ್ರಿ ಕಟ್ಟಡ ಬಳಿಯ ಅರಳಿಮರಕ್ಕೆ ನೇಣುಬಿಗಿದುಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.