Advertisement

ಆರೋಪಿಗಳ ಕಾರು ಮಾರಾಟ ಪ್ರಕರಣ : ಇಬ್ಬರು ಪೊಲೀಸ್‌ ಅಧಿಕಾರಿಗಳ ಅಮಾನತು

03:59 AM Feb 28, 2021 | Team Udayavani |

ಮಂಗಳೂರು: ವಂಚನೆ ಪ್ರಕರಣ ವೊಂದರ ಆರೋಪಿಗಳ ಐಷಾರಾಮಿ ಕಾರನ್ನು ಮಂಗಳೂರು ಸಿಸಿಬಿ ಪೊಲೀಸರು ಮಾರಾಟ ಮಾಡಿದ್ದಾರೆನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್‌ಐ ಕಬ್ಬಳ್‌ರಾಜ್‌ ಮತ್ತು ಎಕನಾಮಿಕ್‌ ಆ್ಯಂಡ್‌ ನಾರ್ಕೊಟಿಕ್‌ ಕ್ರೈಂ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ರಾಮಕೃಷ್ಣ ಅವರನ್ನು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಶನಿವಾರ ಅಮಾನತುಗೊಳಿಸಿದ್ದಾರೆ.

Advertisement

ಪ್ರಕರಣದ ತನಿಖೆಯನ್ನು ಸಿಐಡಿ ಆರಂಭಿಸಿದೆ. ಅಮಾನತಾದ ಪೊಲೀಸ್‌ ಅಧಿಕಾರಿಗಳ ಜತೆಗೆ ಇತರ ಇಬ್ಬರ ಮೇಲೆ ಕೂಡ ಆರೋಪಗಳಿದ್ದು ವಿಚಾರಣೆ ತೀವ್ರಗೊಂಡಿದೆ ಎಂದು ತಿಳಿದುಬಂದಿದೆ. ರಾಮಕೃಷ್ಣ ಮಂಗಳೂರಿನಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರಕರಣ ನಡೆಯುವ ವೇಳೆ ಕಬ್ಬಳ್‌ರಾಜ್‌ ಮಂಗಳೂರು ಸಿಸಿಬಿ ಎಸ್‌ಐ ಆಗಿದ್ದು ಅನಂತರ ಚಿಕ್ಕಮಗಳೂರಿನಲ್ಲಿ ಡಿಸಿಆರ್‌ಬಿ ಪಿಎಸ್‌ಐ ಆಗಿದ್ದರು. ಕಾರು ಮಾರಾಟ ಪ್ರಕರಣಕ್ಕೆ ಮೂಲ ಪ್ರಕರಣವಾದ ಎಲಿಯಾ ಕನ್‌ಸ್ಟ್ರಕ್ಷನ್‌ ಆ್ಯಂಡ್‌ ಬಿಲ್ಡರ್‌ ಪ್ರೈ.ಲಿ. ಕಾರ್ಪೊರೆಟ್‌ ಸಂಸ್ಥೆಯ ವಂಚನೆ ಪ್ರಕರಣವನ್ನು ಕೂಡ ಈಗಾಗಲೇ ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ.

ವಂಚನೆಯ ನಡುವೆ ವಂಚನೆ?
ಎಲಿಯಾ ಕನ್‌ಸ್ಟ್ರಕ್ಷನ್ಸ್‌ ಕಂಪೆನಿ ದ.ಕ. ಜಿಲ್ಲೆಯ ಕಡಬದಲ್ಲಿ ಹಣ ದ್ವಿಗುಣಗೊಳಿಸುವ ವ್ಯವಹಾರ ನಡೆಸಿ ಹಲವರಿಂದ ಹಣ ಸಂಗ್ರಹಿಸಿ ಸುಮಾರು 30 ಕೋ.ರೂ. ವಂಚಿಸಿತ್ತು. ಅನಂತರ ಈ ಸಂಸ್ಥೆ ಮಂಗಳೂರು ನಗರದಲ್ಲಿ ಕಚೇರಿ ತೆರೆದಿತ್ತು. ಈ ವೇಳೆ ಶಕ್ತಿನಗರದ ಮಹಿಳೆ ಅದರಲ್ಲಿ ಹಣ ಹೂಡಿದ್ದರು. ಸಂಸ್ಥೆ ಆಕೆಗೂ ವಂಚಿಸಿದ್ದು, ಎಕನಾಮಿಕ್‌ ಆ್ಯಂಡ್‌ ನಾರ್ಕೊಟಿಕ್‌ ಅಪರಾಧ ವಿಭಾಗಕ್ಕೆ ದೂರು ನೀಡಿದ್ದರು. ಎಲಿಯಾ ಸಂಸ್ಥೆಯ ಕೇರಳ ಮೂಲದ ಮ್ಯಾಥ್ಯೂ ಮತ್ತು ಟಿ. ರಾಜ®ರನ್ನು ಬಂಧಿಸಲಾಗಿತ್ತು. ಈ ವೇಳೆ ಅವರಿಗೆ ಸೇರಿದ್ದ ಮೂರು ಕಾರುಗಳ ಪೈಕಿ ಎರಡು ಕಾರುಗಳನ್ನು ಸಿಸಿಬಿ ಪೊಲೀಸರು ಕೆಲವು ದಿನಗಳ ಕಾಲ ತಮ್ಮ ಉಪಯೋಗಕ್ಕೆ ಬಳಸಿಕೊಂಡಿದ್ದರು ಹಾಗೂ ಒಂದು ಕಾರನ್ನು ಮಾರಾಟ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಡಿಸಿಪಿಯವರು ಪ್ರಾಥಮಿಕ ತನಿಖೆ ನಡೆಸಿದ ಅನಂತರ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು.

ವೀಡಿಯೋ ಕಳುಹಿಸಿದ ಮಹಿಳೆ
ಹಣ ಕಳೆದುಕೊಂಡಿರುವ ಶಕ್ತಿನಗರದ ಮಹಿಳೆಯೋರ್ವರು ಎರಡು ದಿನಗಳ ಹಿಂದೆ ಮಾಧ್ಯಮಗಳಿಗೆ ತನ್ನ ಹೇಳಿಕೆಯನ್ನೊಳಗೊಂಡ ವೀಡಿಯೋ ಕಳುಹಿಸಿದ್ದಾರೆ. ಅದರಲ್ಲಿ ಆಕೆ ಕಾರು ಮಾರಾಟ ಮಾಡಿರುವುದು ಎಲಿಯಾ ಕನ್‌ಸ್ಟ್ರಕ್ಷನ್‌ನವರು ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.