Advertisement

ರಂಗ ಸಂಭ್ರಮದಲ್ಲಿ ರಂಜಿಸಿದ ಎರಡು ನಾಟಕಗಳು

08:15 AM Feb 09, 2018 | Team Udayavani |

ಬೆಸೆಂಟ್‌ ಮಹಿಳಾ ಕಾಲೇಜಿನ “ರಂಗ ಸಂಭ್ರಮದಲ್ಲಿ’ ಎರಡು ನಾಟಕಗಳನ್ನು ಪ್ರದರ್ಶಿಸಲಾಯಿತು. ಮೊದಲ ನಾಟಕ “ಬಿಂಬ’, ಎರಡನೇ ನಾಟಕ “ನೀವು ಕರೆ ಮಾಡಿದ ಚಂದಾದಾರರು’. ಬೆಸೆಂಟ್‌ ವಿದ್ಯಾ ಸಂಸ್ಥೆಗಳ ಶತಮಾನೋತ್ಸವ ಸಮಾರಂಭಕ್ಕೆ ಈ ನಾಟಕಗಳು ಹೊಸ ಮೆರಗನ್ನು ನೀಡಿದವು.


ಬಿಂಬ ಪೌರಾಣಿಕವಾಗಿದ್ದರೂ ಇಂದಿನ ಸಾಮಾಜಿಕ ಬದುಕನ್ನು ಎತ್ತಿ ತೋರಿಸುವಲ್ಲಿ ಯಶಸ್ವಿಯಾಯಿತು. ಜನಪಥ ಮಂಗಳೂರು ಪ್ರಸ್ತುತ ಪಡಿಸಿದ ನಾಟಕ ಕಾಲೇಜಿನ ಬೆನಕ ತಂಡದವರಿಂದ ವಿಶೇಷ ಘಟಕ ಯೋಜನೆಯಡಿ ಪ್ರದರ್ಶನಗೊಂಡಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರದರ್ಶನಕ್ಕೆ ಸಹಕಾರ ನೀಡಿತು. ಮೊದಲ ದೃಶ್ಯ ಯಕ್ಷಗಾನದ ಶೈಲಿಯಲ್ಲಿ ಪ್ರಾರಂಭವಾಗುತ್ತದೆ. ಈ ನಾಟಕದಲ್ಲಿ ಪೌರಾಣಿಕ ದೃಶ್ಯದೊಂದಿಗೆ ಸಾಮಾಜಿಕ ದೃಶ್ಯಗಳು ಬರುವುದ‌ರೊಂದಿಗೆ ಹೊಸತನವನ್ನು ರೂಪಿಸಲಾಗಿದೆ. ರಾಮಾಯಣದಲ್ಲಿ ರಾಮನು ಸೀತೆಯ ಬಗ್ಗೆ ಹೇಗೆ ಸಂಶಯ ಪಡುತ್ತಾನೆ, ಅದೇ ರೀತಿ ಇಂದಿನ ಸಮಾಜದಲ್ಲಿ ಯಕ್ಷಗಾನ ಕಲಾವಿದನೊಬ್ಬ ತನ್ನ ಹೆಂಡತಿಯ ಬಗ್ಗೆ ಸಂಶಯ ಪಡುತ್ತಾನೆ. ಹೆಂಡತಿ ಬಂದು ಯಕ್ಷಗಾನ ಕಲಾವಿದನಾ‌ದ ತನ್ನ ಗಂಡನ ಬಗ್ಗೆ ದೂರು ನೀಡುತ್ತಾಳೆ. ಇವರಿಬ್ಬರ ಕೌಟುಂಬಿಕ ಸಮಸ್ಯೆಯನ್ನು ಬಗೆಹರಿಸಲು ಭಾಗವತರು ಪ್ರಯತ್ನಿಸಿ ವಿಫ‌ಲರಾಗುತ್ತಾರೆ . ರಾಮಾಯಣದಲ್ಲಿ ರಾಮ ಸೀತೆಯರ ದಾಂಪತ್ಯ ಜೀವನ ಹೇಗಿರುತ್ತದೆ ಎಂಬುದನ್ನು ಪೌರಾಣಿಕವಾಗಿಯೂ ಸಾಮಾಜಿಕವಾಗಿಯೂ ಎತ್ತಿ ತೋರಿಸಲಾಗಿದೆ. ಸಾಮಾಜಿಕ ದೃಶ್ಯದಲ್ಲಿ ಬರುವ ಸೀತಮ್ಮನ ಪಾತ್ರದಲ್ಲಿ ಸೌಮ್ಯಾ ಮತ್ತು ರಾಮಣ್ಣನ ಪಾತ್ರದಲ್ಲಿ ರಮ್ಯಾ ಡಿ. , ರಾಮ ಮತ್ತು ಸೀತೆಯಾಗಿ ಮೇಘಾಶ್ರೀ ಮತ್ತು ಕಾವ್ಯಾ ಕೊಟ್ಟಾರಿ, ಭಾಗವತರಾಗಿ ಬೆಸೆಂಟ್‌ ಸಂಧ್ಯಾ ಕಾಲೇಜಿನ ಉಜ್ವಲ್‌ ಅಭಿನಯಿಸಿದರು. ಇಂದಿನ ಸಮಾಜದಲ್ಲಿ ಸಂಶಯಾತ್ಮಕ ವಿಷಯಗಳೂ ಇಡೀ ಕುಟುಂಬವನ್ನು ಹೇಗೆ ನಾಶಮಾಡುತ್ತದೆ ಎನ್ನುವುದನ್ನು ನಾಟಕ ಪರಿಣಾಮಕಾರಿಯಾಗಿ ತಿಳಿಸಿತು. ಚದುರಂಗ ಅವರ ರಚನೆಗೆ ಡಾ| ಮೀನಾಕ್ಷಿ ರಾಮಚಂದ್ರ ರಂಗರೂಪವನ್ನು ಕೊಟ್ಟಿದ್ದಾರೆ. ನಾಟಕದ ನಿರ್ದೇಶನ ಸುರೇಶ್‌ ಬಟ್ಟೇಕಳ ವರ್ಕಾಡಿ ಹಾಗೂ ಪ್ರಸಾದನ ದೇವಿ ಪ್ರಕಾಶ ಉರ್ವ ಅವರದ್ದು. ಒಟ್ಟಿನಲ್ಲಿ ಈ ನಾಟಕ ಮೊದಲಿಗೆ ತುಸು ಬೋರಾದ‌ರೂ ಮುಂದೆ ರಂಜಿಸುವಲ್ಲಿ ಯಶಸ್ವಿಯಾಯಿತು. ಬೆಳಕು-ವಿನ್ಯಾಸ ಚೆನ್ನಾಗಿತ್ತು, ನೃತ್ಯ ಮತ್ತು ಸಂಗೀತ ಸcಲ್ಪ ಕಡಿಮೆಯಾದಂತೆ ಕಾಣಿಸಿತು. ಡಾ. ಮೀನಾಕ್ಷಿಯವರ ಹಾಡುಗಳು ನಾಟಕಕ್ಕೆ ಮೆರಗು ನೀಡಿದವು. ವೇಷ ಭೂಷಣಗಳನ್ನು ಪಾತ್ರಗಳಿಗೆ ಸರಿಹೊಂದುವಂತೆ ಮಾಡುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. 

Advertisement

 ಎರಡನೇ ನಾಟಕ ರಂಗಾಸ್ಥೆ ಬೆಂಗಳೂರು ತಂಡದವರಿಂದ ನೀವು ಕರೆ ಮಾಡಿದ ಚಂದಾದಾರರು ಹೆಸರೇ ಹೇಳುವಂತೆ ಒಂದು ಹೊಸತನದ ರಂಗ ಪ್ರಯೋಗ. ಈ ನಾಟಕವನ್ನು ಶ್ರೀನಿಧಿ ಬೆಂಗಳೂರು ರಚಿಸಿ, ನಿರ್ದೇಶಿಸಿದರು. ಹಿನ್ನೆಲೆ ಸಂಗೀತ ನೀಡಿ ಸಹಕರಿಸಿದವರು ಧನುಷ್‌ ಬೆಂಗಳೂರು. ಇಂದಿನ ಈ ಸಮಾಜದಲ್ಲಿ ದಿನನಿತ್ಯ ನಡೆಯುವ ಆಗುಹೋಗುಗಳನ್ನು ಪ್ರೇಕ್ಷಕರಲ್ಲಿ ಹಿಡಿದಿಡುವ ಪ್ರಯತ್ನ ರಂಗಾಸ್ಥೆ ಅವರದು. ದೃಶ್ಯದಲ್ಲಿ ತಪ್ಪುಗಳು ಬಾರದಂತೆ ಎಚ್ಚರಿಕೆ ವಹಿಸಲಾಗಿದ್ದರೂ ಸಂಗೀತ ಮತ್ತು ಬೆಳಕು ಏನೇನೂ ಸಾಲದು. ಕೋಮುದ್ವೇಷದ ದಳ್ಳುರಿಗೆ ಕೆಲವೊಮ್ಮೆ ಮಿತ್ರರೇ ಬಲಿಯಾಗುತ್ತಾರೆ ಎಂಬುದನ್ನು ತೋರಿಸಿಕೊಡುವುದು ನಾಟಕದ ಉದ್ದೇಶ. ತಿರುಳು ಚೆನ್ನಾಗಿದ್ದರೂ ನಾಟಕವನ್ನು ಇನ್ನಷ್ಟು ಉತ್ತಮವಾಗಿ ತೋರಿಸುವ ಅವಕಾಶಗಳಿದ್ದವು. 

ಶ್ರೀನಿವಾಸ್‌ ಕುಪ್ಪಿಲ

Advertisement

Udayavani is now on Telegram. Click here to join our channel and stay updated with the latest news.

Next