Advertisement

ವಾಣಿಜ್ಯ ತೆರಿಗೆ ಅಧಿಕಾರಿ ಸೇರಿ ಇಬ್ಬರಿಗೆ ಜೈಲು ಶಿಕ್ಷೆ  

09:43 AM Jan 03, 2023 | Team Udayavani |

ಬೆಂಗಳೂರು: ರಿಸರ್ವ್‌ ಬ್ಯಾಂಕ್‌ ಸಿಬ್ಬಂದಿ ಎಂದು ಹೇಳಿಕೊಂಡು ಹತ್ತಾರು ಮಂದಿಗೆ ಕೋಟ್ಯಂತರ ರೂ. ವಂಚಿಸಿದ ಪ್ರಕರಣದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಮಹಿಳಾ ಅಧಿಕಾರಿ ಸೇರಿ ಇಬ್ಬರು ಮಹಿಳೆಯರಿಗೆ 8ನೇ ಎಸಿಎಂಎಂ ಕೋರ್ಟ್‌ ಜೈಲು ಶಿಕ್ಷೆ ವಿಧಿಸಿದೆ.

Advertisement

ವಿಜಯನಗರದ ಹಂಪಿನಗರ ನಿವಾಸಿ ಗೌರಿ (63) ಮತ್ತು ರಾಮಾಂಜನೆಯ ಲೇಔಟ್‌ನ ಚಿಕ್ಕಲ್ಲಸಂದ್ರ ನಿವಾಸಿ ಜಯಂತಿ (54) ಜೈಲು ಶಿಕ್ಷೆಗೊಳಗಾದವರು.

ಜಯಂತಿ ತಾನೂ ರಿಸರ್ವ್‌ ಬ್ಯಾಂಕ್‌ ಸಿಬ್ಬಂದಿಯಾಗಿದ್ದು, ಬ್ಯಾಂಕ್‌ನ ಡೆಪ್ಯುಟಿ ಗವರ್ನರ್‌ ಆಪ್ತ ಸಹಾಯಕಳಾಗಿದ್ದೇನೆ. ದೇವನಹಳ್ಳಿ ಬಳಿ ರಿಸರ್ವ್‌ ಬ್ಯಾಂಕ್‌ ಹೌಸಿಂಗ್‌ ಕೋ-ಆಪರೇಟಿವ್‌ ಸೊಸೈಟಿಯಿಂದ ನಿವೇಶನಗಳನ್ನು ನಿರ್ಮಿಸಲಾಗಿದ್ದು, ಅದಕ್ಕೆ ಪೂರಕವೆಂಬಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಬಳಿಕ ಗಾಂಧಿನಗರದಲ್ಲಿರುವ ಕಮರ್ಷಿಯಲ್‌ ಟ್ಯಾಕ್ಸ್‌ ಕಚೇರಿಯ ಸಿಬ್ಬಂದಿಯಾಗಿರುವ ಗೌರಿ ಕೂಡ ಜಯಂತಿಯ ವಂಚನೆಗೆ ಸಹಕಾರ ನೀಡಿದ್ದಾರೆ. ತನ್ನ ಕಚೇರಿಯ ಸಹೋದ್ಯೋಗಿಗಳಿಗೂ ಸುಳ್ಳು ಮಾಹಿತಿ ನೀಡಿ ನಿವೇಶನ ಕೊಡಿಸುವುದಾಗಿ ನಂಬಿಸಿದ್ದಾರೆ.

ಅದರಿಂದ ಅವರ ಸಹೋ ದ್ಯೋಗಿಗಳು, ಅವರ ಸಂಬಂಧಿಕರು ಹಾಗೂ ಇತರರು ಆರೋಪಿಗಳಿಗೆ 27ರಿಂದ 28 ಲಕ್ಷ ರೂ. ನೀಡಿದ್ದಾರೆ. ಅನಂತರ ಆರೋಪಿಗಳ ವಂಚನೆ ಗೊತ್ತಾಗುತ್ತಿದ್ದಂತೆ ವಂಚನೆಗೊಳಗಾದವರು ಹಣ ವಾಪಸ್‌ ನೀಡುವಂತೆ ಕೋರಿದ್ದಾರೆ. ಆಗ ಆರೋಪಿಗಳು ಚೆಕ್‌ಗಳನ್ನು ನೀಡಿದ್ದಾರೆ. ಆದರೆ, ಮೂರು ಚೆಕ್‌ಗಳು ಬೌನ್ಸ್‌ ಆಗಿವೆ. ಈ ಸಂಬಂಧ ಸ್ಥಳೀಯ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.

ಇನ್ನು ಗೌರಿ ವಿರುದ್ಧ ಇಲಾಖಾ ವಿಚಾರಣೆ ನಡೆದು, ಅಲ್ಲಿಯೂ ಈಕೆ ಹಲವಾರು ಜನರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಇಲ್ಲಿಯೂ ಕೆಲವರಿಗೆ ಚೆಕ್‌ ಗಳನ್ನು ನೀಡಿ ಬೌನ್ಸ್‌ ಆಗಿರುವುದು ಪತ್ತೆಯಾಗಿದೆ. ಮತ್ತೂಂದೆಡೆ ಜಯಂತಿ ಕೂಡ ರಿಸರ್ವ್‌ ಬ್ಯಾಂಕ್‌ ಸಿಬ್ಬಂದಿ ಅಲ್ಲ. ಹೌಸಿಂಗ್‌ ಸೊಸೈಟಿಯೂ ಇರುವುದಿಲ್ಲ. ವಂಚಿಸುವ ಉದ್ದೇಶದಿಂದಲೇ ಈ ರೀತಿ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಉಪ್ಪಾರಪೇಟೆ ಠಾಣೆ ಪೊಲೀಸರು ದಾಖಲಿಸಿಕೊಂಡಿದ್ದ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು.

Advertisement

ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್‌ ಇಬ್ಬರು ಆರೋಪಿಗಳಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next