Advertisement

ಬೀದರ್ ನಲ್ಲಿ ಕೋವಿಡ್ 19 ಸೋಂಕಿಗೆ ಮತ್ತಿಬ್ಬರು ಬಲಿ ; 10 ಹೊಸ ಪ್ರಕರಣ ಪತ್ತೆ

08:05 PM Jun 19, 2020 | Hari Prasad |

ಬೀದರ್: ರಾಜ್ಯದ ಗಡಿ ಜಿಲ್ಲೆಯಲ್ಲಿ ಕೋವಿಡ್ 19 ಸಂಬಂಧಿತ ಸಾವಿನ ಸರಣಿ ಮುಂದುವರೆದಿದೆ.

Advertisement

ಇಂದು ಈ ಮಹಾಮಾರಿ ಸೋಂಕಿಗೆ ಜಿಲ್ಲೆಯಲ್ಲಿ ಇನ್ನಿಬ್ಬರು ಬಲಿಯಾಗಿದ್ದಾರೆ. ಈ ಮೂಲಕ ಇದುವರೆಗೆ ಬೀದರ್ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿನಿಂದಾಗಿ ಮೃತಪಟ್ಟವರ ಸಂಖ್ಯೆ 11ಕ್ಕೆ ತಲುಪಿದೆ.

ಇನ್ನೊಂದೆಡೆ, ಜಿಲ್ಲೆಯಲ್ಲಿ ಶುಕ್ರವಾರದಂದು 10 ಹೊಸ ಕೋವಿಡ್ 19 ಸೋಂಕು ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.

ಮಂಗಳವಾರದಿಂದ ಸತತ ಮೂರು ದಿನ ಮರಣ ಮೃದಂಗ ಬಾರಿಸಿರುವ ಕೋವಿಡ್ ಇಂದು ಒಂದೇ ದಿನ ಇಬ್ಬರನ್ನು ಬಲಿ ಪಡೆದಿರುವುದು ಜಿಲ್ಲೆಯ ಜನರಲ್ಲಿ ಆತಂಕವನ್ನು ಹೆಚ್ಚಿಸಿದೆ.

ಬೀದರ ನಗರದ ಮಾಂಗರವಾಡಿ ಗಲ್ಲಿಯ 45 ವರ್ಷದ ವ್ಯಕ್ತಿ (ಪಿ-7959) ಗುರುವಾರ ಸಾವನ್ನಪ್ಪಿದ್ದು, ಇವರು ಜ್ವರ ಹಾಗೂ ಉಸಿರಾಟದ ತೊಂದರೆಯಿಂದ ಜೂ. 13ರಂದು ಇಲ್ಲಿನ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು.

Advertisement

ಇನ್ನು, ಬಸವಕಲ್ಯಾಣ ಧಾರಾಗಿರಿಯ 70 ವರ್ಷದ ವ್ಯಕ್ತಿ (ಪಿ-7962) ಉಸಿರಾಟದ ತೊಂದರೆಯಿಂದ ಜೂ. 11ರಂದು ಸಾವನ್ನಪ್ಪಿದ್ದು, ಇವರಿಬ್ಬರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಇಂದು ಪಾಸಿಟಿವ್ ಬಂದಿದೆ. ರಾಜ್ಯದಲ್ಲಿ ಕೋವಿಡ್ ಸೋಂಕಿಗೆ ಮೃತಪಟ್ಟವರ ಸಂಖ್ಯೆಯ ಜಿಲ್ಲಾವಾರು ಪಟ್ಟಿಯಲ್ಲಿ ಸದ್ಯಕ್ಕೆ ಬೀದರ್ ಮತ್ತು ಕಲ್ಬುರ್ಗಿ ಎರಡನೇ ಸ್ಥಾನದಲ್ಲಿದೆ.

ಬೀದರ್ ನ ಓಲ್ಡ್ ಸಿಟಿಯ 82 ವರ್ಷದ (ಪಿ-590) ವ್ಯಕ್ತಿ ಕೋವಿಡ್ ಗೆ ಮೊದಲ ಬಲಿ ಆಗಿದ್ದರು. ನಂತರ ಚಿಟಗುಪ್ಪಾದ 50 ವರ್ಷದ (ಪಿ-1041), ಬೀದರ ವಿದ್ಯಾನಗರದ 49 ವರ್ಷದ (ಪಿ-1712), ಫಾತ್ಮಾಪೂರದ 47 ವರ್ಷದ ಮಹಿಳೆ (ಪಿ-2783), ಚಿಟಗುಪ್ಪದ 75 ವರ್ಷದ ವ್ಯಕ್ತಿ (ಪಿ-2965), ಬೀದರ್ ಗವಾನ್ ಚೌಕ್‌ನ 59 ವರ್ಷದ ಮಹಿಳೆ (ಪಿ-1950) ಹಾಗೂ ಬೀದರ ಶಹಾಗಂಜ್‌ನ 49 ವರ್ಷದ ವ್ಯಕ್ತಿ (ಪಿ-7524), ಮಲ್ಕಾಪೂರ ಗ್ರಾಮದ 26 ವರ್ಷದ ಯುವಕ (ಪಿ-7695) ಮತ್ತು ಚಿಟಗುಪ್ಪದ 55 ವರ್ಷದ (ಪಿ-7776) ವ್ಯಕ್ತಿ ಸೋಂಕಿನಿಂದ ಮೃತಪಟ್ಟಿದ್ದರು.

ಇಂದು ಪತ್ತೆಯಾದ ಹೊಸ ಸೋಂಕಿನ 10 ಪ್ರಕರಣಗಳಲ್ಲಿ ಬಸವಕಲ್ಯಾಣ ಪಟ್ಟಣದ ಧಾರಾಗಿರಿಯ 1, ತಾಲೂಕಿನ ಬಟಗೇರಾ, ಹನುಮನಗರ, ಬೆಟಬಾಲಕುಂದಾ ಗ್ರಾಮದ ತಲಾ ಒಂದು ಸೇರಿ ಒಟ್ಟು 4, ಬೀದರ ನಗರದ ಚೌಬಾರಾದ 2, ಮಾಂಗರವಾಡಿ 1 ಹಾಗೂ ತಾಲೂಕಿನ ಚಿಲ್ಲರ್ಗಿ ಗ್ರಾಮದ 1 ಸೇರಿ ಒಟ್ಟು 4, ಭಾಲ್ಕಿ ಪಟ್ಟಣ ಮತ್ತು ಚಿಟಗುಪ್ಪ ಪಟ್ಟಣದ ತಲಾ 1 ಪ್ರಕರಣಗಳು ಸೇರಿವೆ.

ಜಿಲ್ಲೆಯಲ್ಲಿ ಈಗ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 411 ಆದಂತಾಗಿದೆ. ಇವರಲ್ಲಿ 11 ಜನ ಈಗಾಗಲೇ ಸಾವನ್ನಪ್ಪಿದ್ದಾರೆ. ಶುಕ್ರವಾರ ಇಬ್ಬರು ಸೇರಿ ಒಟ್ಟು 254 ಜನ ಈಗಾಗಲೇ ಗುಣಮುಖರಾಗಿದ್ದಾರೆ ಮತ್ತು ಜಿಲ್ಲೆಯಲ್ಲಿ ಇನ್ನೂ 146 ಪ್ರಕರಣಗಳು ಸಕ್ರೀಯವಾಗಿವೆ ಎಂದು ಆರೋಗ್ಯ ಇಲಾಖೆ ತನ್ನ ಇತ್ತೀಚಿನ ಮಾಹಿತಿಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next