ಇಂಫಾಲ್: ಮಣಿಪುರದಲ್ಲಿ ಮತ್ತೊಮ್ಮೆ ಹಿಂಸಾತ್ಮಕ ಪರಿಸ್ಥಿತಿಗಳು ಮುನ್ನೆಲೆಗೆ ಬಂದಿದೆ ಶನಿವಾರ ಮುಂಜಾನೆ ಮಣಿಪುರದ ಬಿಷ್ಣುಪುರ್ ಜಿಲ್ಲೆಯ ನರಸೇನಾ ಪ್ರದೇಶದಲ್ಲಿ ಶಸ್ತ್ರಸಜ್ಜಿತ ಉಗ್ರರು ನಡೆಸಿದ ದಾಳಿಯಲ್ಲಿ ಇಬ್ಬರು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿ ಸಾವನ್ನಪ್ಪಿದ್ದು ಮತ್ತು ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಧ್ಯರಾತ್ರಿ ಸುಮಾರು 2.15 ರ ನಡುವೆ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಶಸ್ತ್ರ ಗುಂಪುಗಳು ಭದ್ರತಾ ಪಡೆಗಳ ಹೊರಠಾಣೆಯನ್ನು ಗುರಿಯಾಗಿಸಿ ಬಾಂಬ್ ದಾಳಿ ನಡೆಸಿದ್ದು ಘಟನೆಯಲ್ಲಿ ಇಬ್ಬರು ಸಿಆರ್‌ಪಿಎಫ್ ಸಿಬಂದಿ ಮೃತಪಟ್ಟಿದ್ದು ಮತ್ತಿಬ್ಬರು ಗಾಯಗೊಂಡಿದ್ದಾರೆ.
ಘಟನೆ ಸಂಬಂಧ ಮಾಹಿತಿ ನೀಡಿದ ಹಿರಿಯ ಪೊಲೀಸ್ ಅಧಿಕಾರಿ ‘ಶಿಬಿರವನ್ನು ಗುರಿಯಾಗಿಸಿಕೊಂಡು ಉಗ್ರರು ಮಧ್ಯರಾತ್ರಿ 12.30 ರ ಸುಮಾರಿಗೆ ಬೆಟ್ಟದ ತುದಿಯಿಂದ ಮನಬಂದಂತೆ ಗುಂಡಿನ ದಾಳಿ ನಡೆಸಲು ಆರಂಭಿಸಿದ್ದು ಇದು 2.15 ರವರೆಗೆ ಮುಂದುವರೆಯಿತು. ಆ ಬಳಿಕ ಉಗ್ರರು ಬಾಂಬ್‌ಗಳನ್ನು ಎಸೆದರು, ಅವುಗಳಲ್ಲಿ ಒಂದು ಸಿಆರ್‌ಪಿಎಫ್‌ನ 128 ಬೆಟಾಲಿಯನ್‌ನ ಔಟ್‌ಪೋಸ್ಟ್‌ನಲ್ಲಿ ಸ್ಫೋಟಗೊಂಡಿದೆ ಎಂದು ಹೇಳಿದ್ದಾರೆ.
ಮೃತರನ್ನು ಸಿಆರ್‌ಪಿಎಫ್ ಸಬ್ ಇನ್‌ಸ್ಪೆಕ್ಟರ್ ಎನ್ ಸರ್ಕಾರ್ ಮತ್ತು ಹೆಡ್ ಕಾನ್‌ಸ್ಟೆಬಲ್ ಅರೂಪ್ ಸೈನಿ ಎಂದು ಗುರುತಿಸಲಾಗಿದೆ. ಗಾಯಗೊಂಡ ಸಿಬ್ಬಂದಿಗಳು ಇನ್ಸ್‌ಪೆಕ್ಟರ್ ಜಾದವ್ ದಾಸ್ ಮತ್ತು ಕಾನ್‌ಸ್ಟೆಬಲ್ ಅಫ್ತಾಬ್ ಹುಸೇನ್ ಎನ್ನಲಾಗಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಘಟನೆಯ ಬಳಿಕ ಹೆಚ್ಚಿನ ಭದ್ರತಾ ಸಿಬಂದಿಗಳನ್ನು ನೇಮಿಸಲಾಗಿದ್ದು ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ:Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್