Advertisement

ಗ್ರಂಥಾಲಯ ಕಟ್ಟಡದಲ್ಲೇ ಇನ್ನೆರಡು ಕಚೇರಿ

02:55 PM Oct 20, 2019 | Team Udayavani |

ಗದಗ: ಗ್ರಂಥಾಲಯ ಕಟ್ಟಡದಲ್ಲೇ ಇನ್ನರೆಡು ಕಚೇರಿ. ಓದುಗರಿಗೆ ಸದಾ ಸಾರ್ವಜನಿಕರ ಗದ್ದಲ-ಕಿರಿಕಿರಿ. ಇದು ಗದಗ ತಾಲೂಕಿನ ಮಲ್ಲಸಮುದ್ರ ಗ್ರಾಮದ ಸಾರ್ವಜನಿಕ ಗ್ರಂಥಾಲಯ ದುಸ್ಥಿತಿ. ಮೂರು ಕೋಣೆಗಳಿರುವ ಒಂದೇ ಕಟ್ಟಡದಲ್ಲಿಮೂರು ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ.

Advertisement

ವಾಚನಾಲಯದ ಮೂಲಕವೇ ಗ್ರಾಮ ಸಹಾಯಕರು, ಗ್ರಾಮ ಲೆಕ್ಕಾಧಿಕಾರಿ ಕೊಠಡಿಗಳಿಗೆ ಪ್ರವೇಶಿಸ ಬೇಕು. ಹೀಗಾಗಿ ನಾನಾ ಸಮಸ್ಯೆ, ಅಹವಾಲು, ಅರ್ಜಿಗಳನ್ನು ಹೊತ್ತು ಬರುವ ಸಾರ್ವ ಜನಿಕರಿಂದ ಗ್ರಂಥಾಲಯದ ಓದುಗರಿಗೆ ನಿತ್ಯ ಕಿರಿಕಿರಿ ತಪ್ಪಿದ್ದಲ್ಲ. ಗ್ರಾಮದ ಹೃದಯ ಭಾಗದಲ್ಲಿ ಅಸುಂಡಿ ಗ್ರಾ.ಪಂ. ಒದಗಿಸಿರುವ ಕಟ್ಟಡಲ್ಲಿ ಕಳೆದ 1995ರಲ್ಲಿ ಈ ಗ್ರಂಥಾಲಯ ಆರಂಭವಾಗಿದೆ. ಕಟ್ಟಡದ ಒಂದು ಕೋಣೆಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಹಾಗೂ ಗ್ರಾಮ ಸಹಾಯಕರು ಕಾರ್ಯನಿರ್ವಹಿಸುತ್ತಿದ್ದಾರೆ.

ಮತ್ತೂಂದು ಪುಟ್ಟ ಕೋಣೆಯಲ್ಲಿ ಪುಸ್ತಕಗಳನ್ನು ತುಂಬಿರುವ ರ್ಯಾಕ್‌ಗಳನ್ನು ಇಡಲಾಗಿದೆ. ಹಾಲ್‌ ನಲ್ಲಿ ಓದುಗರಿಗಾಗಿ 8 ಆಸನಗಳು ಹಾಗೂ ಮೇಜಿನ ವ್ಯವಸ್ಥೆ ಮಾಡಲಾಗಿದೆ. ಆದರೆ, ಗ್ರಂಥಾಲಯದ ಹಾಲ್‌ ಮೂಲಕವೇ ಗ್ರಾ.ಪಂ. ಅಧಿಕಾರಿಗಳ ಕೊಠಡಿಗೆ ತೆರಳಬೇಕು. ಹೀಗಾಗಿ ನಾನಾ ಕೆಲಸ ಕಾರ್ಯಗಳಿಗಾಗಿ ಜನ ಬರುವುದರಿಂದ ಬಹುತೇಕ ಗೌಜಿ ಗದ್ದಲದಿಂದ ಕೂಡಿರುತ್ತದೆ. ಹೀಗಾಗಿ ಗ್ರಂಥಾಲಯದಿಂದ ದೂರ ಉಳಿಯುವವರೂ ಅನೇಕರಿದ್ದಾರೆ.

ಪತ್ರಿಕೆ ಹಾಗೂ ಪುಸ್ತಕಗಳ ಅಭ್ಯಾಸಕ್ಕೆಂದು ಪ್ರತಿನಿತ್ಯ 100ಕ್ಕೂ ಅಧಿಕ ಜನ ಗ್ರಂಥಾಲಯಕ್ಕೆ ಭೇಟಿ ನೀಡುತ್ತಾರೆ. ಓದುಗರಿಗಾಗಿ 8 ಕುರ್ಚಿಗಳನ್ನು ವ್ಯವಸ್ಥೆ ಮಾಡಲಾಗಿದೆ. ಬೆಳಗಿನ ಸಮಯದಲ್ಲಿ ಬರುವವರಲ್ಲಿ ದಿನ ಪತ್ರಿಕೆಗಳನ್ನು ಓದುವವರೇ ಹೆಚ್ಚು. ಸಂಜೆ ವೇಳೆಗೆ ಶಾಲಾ-ಕಾಲೇಜುಗಳಿಂದ ಮರಳುವ ವಿದ್ಯಾರ್ಥಿಗಳು ಗ್ರಂಥಾಲಯದತ್ತ ಮುಖ ಮಾಡುತ್ತಾರೆ. ಇದೇ ವೇಳೆ ಗ್ರಾಮ ಲೆಕ್ಕಾಧಿಕಾರಿಗಳನ್ನು ಕಾಣಲು ಜನ ಬರುವುದರಿಂದ ಗ್ರಂಥಾಲಯದಲ್ಲಿ ಓದುಗರ ಸಂಖ್ಯೆಯೂ ಹೆಚ್ಚಲಿದ್ದು, ಕುರ್ಚಿಗಳು ಸಾಕಾಗುವುದಿಲ್ಲ.

ಪುಸ್ತಕಗಳಿಗೆ ಕೊರತೆಯಿಲ್ಲ:1995ರಲ್ಲಿ 250 ಪುಸ್ತಕಗಳಿಂದ ಆರಂಭವಾಗಿರುವ ಈ ಗ್ರಂಥಾಲಯ ಇದೀಗ 3,820 ಪುಸ್ತಕಗಳ ಜ್ಞಾನ ಸಾಗರವನ್ನೇ ಹೊಂದಿದೆ. ಆ ಪೈಕಿ ಕವನ, ಕಥೆ, ಕಾದಂಬರಿಗಳ ಹೊರತಾಗಿ ಪಿಯುಸಿ ಹಾಗೂ ಪದವಿ ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿವಿಧ ಲೇಖಕರ ಪಠ್ಯ ಪುಸ್ತಕಗಳನ್ನು ಒದಗಿಸಲಾಗಿದೆ. ಹೀಗಾಗಿ ಪ್ರತಿನಿತ್ಯ ಬೆಳಗ್ಗೆಗಿಂತ ಸಂಜೆಯೇ ಓದುಗರ ಸಂಖ್ಯೆ ಹೆಚ್ಚು. ಬೆಳಗಿನ ಸಮಯದಲ್ಲಿ ಗ್ರಾಮದ ಹಿರಿಯರು, ಪತ್ರಿಕೆಗಳನ್ನು ಓದುವ ಹವ್ಯಾಸ ಉಳ್ಳುವರು ಮಾತ್ರ ಭೇಟಿ ನೀಡುತ್ತಾರೆ ಎನ್ನುತ್ತಾರೆ ಗ್ರಂಥಪಾಲಕ ಎಂ.ಡಿ.ಸಿದ್ಧಿ.

Advertisement

ಹೊಸ ಕಟ್ಟಡಕ್ಕೆಬೇಕಿದೆ ಕಾಯಕಲ್ಪ : ಗ್ರಾಮದಲ್ಲಿ ಓದುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾ.ಪಂ. ವತಿಯಿಂದ ಗ್ರಾಮ ವಿಕಾಸ ಯೋಜನೆಯಡಿ 9 ಲಕ್ಷ ರೂ. ಅನುದಾನದಡಿ ಹೊಸ ಕಟ್ಟಡ ನಿರ್ಮಿಸಲಾಗಿದೆ. ಗ್ರಾಮದ ಆಶ್ರಯ ಕಾಲೋನಿಯಲ್ಲಿ 30×30 ಅಳತೆಯಲ್ಲಿ 2017ರಲ್ಲಿ ಕಾಮಗಾರಿ ಪ್ರಾರಂಭಗೊಂಡಿದೆ. ಈಗಾಗಲೇ ಕಟ್ಟಡ ಕಾಮಗಾರಿ ಪೂರ್ಣಗೊಂಡು, ಸುಣ್ಣ- ಬಣ್ಣದೊಂದಿಗೆ ಆಕರ್ಷಿಸುತ್ತಿದೆ. ಆದರೆ, ಕಿಟಕಿಗಳಿಗೆ ಬಾಗಿಲು ಕೂರಿಸಲು ಅನುದಾನದ ಕೊರತೆಯಿಂದಾಗಿ ಸುಂದರ ಕಟ್ಟಡ ಹಲವು ತಿಂಗಳಿಂದ ನಿರುಪಯುಕ್ತವಾಗಿದೆ. ನೂತನ ಕಟ್ಟಡದಲ್ಲಿ ಗ್ರಂಥಾಲಯ ಪ್ರಾರಂಭವಾದರೆ, ಎಲ್ಲ ಸಮಸ್ಯೆಗಳಿಂದ ಮುಕ್ತವಾಗಲಿದೆ ಎನ್ನುತ್ತಾರೆ ಗ್ರಾಮಸ್ಥರು

ಓದುಗರು ಹಾಗೂ ಗ್ರಾಮದ ನವ ಯುವಕರಲ್ಲಿ ಓದಿನ ಅಭಿರುಚಿ ಹೆಚ್ಚಿಸುವ ಉದ್ದೇಶದಿಂದ ಗ್ರಾಪಂ ಕಟ್ಟಡದಲ್ಲಿ ಗ್ರಂಥಾಲಯ ಆರಂಭಿಸಲು ಅನುವು ಮಾಡಿಕೊಡಲಾಗಿದೆ. ಈ ಹಿಂದೆ ಗ್ರಾಮ ವಿಕಾಸ ಯೋಜನೆಯಡಿ 9 ಲಕ್ಷ ರೂ. ಅನುದಾನದಡಿ ಹೊಸ ಕಟ್ಟಡ ನಿರ್ಮಾಣ ಬಹುತೇಕ ಪೂರ್ಣಗೊಂಡಿದ್ದು, ಕಿಟಿಕಿ ಪಾಟಾಕುಗಳಿಗೆ ಅನುದಾನ ಕೊರತೆಯಾಗಿದೆ. ಗ್ರಾ.ಪಂ. 14ನೇ ಹಣಕಾಸು ಯೋಜನೆಯಡಿ ಅದನ್ನೂ ಪೂರ್ಣಗೊಳಿಸಿ, ಲೋಕಾರ್ಪಣೆ ಮಾಡಲು ಕ್ರಮ ಜರುಗಿಸುತ್ತೇನೆ.ಬಸವರಾಜ ಗದಗಿನ ಅಸುಂಡಿ ಗ್ರಾಪಂ ಅಧ್ಯಕ್ಷ

 

-ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next