Advertisement

ಒಂದೇ ಕಚೇರಿಗೆ ಇಬ್ಬರು ಅಧಿಕಾರಿಗಳ ಸಾರಥ್ಯ!

08:51 PM Jan 29, 2020 | Team Udayavani |

ಕೋಲಾರ: ವರ್ಗಾವಣೆಯ ಗೊಂದಲ ಹಾಗೂ ನ್ಯಾಯಾಲಯ ತಡೆಯಾಜ್ಞೆಯಿಂದಾಗಿ ಒಂದೇ ಕಚೇರಿಯಲ್ಲಿ ಇಬ್ಬರು ಕಾರ್ಯಪಾಲಕ ಇಂಜಿನಿಯರ್‌ಗಳು ಕಾರ್ಯನಿರ್ವಹಿಸುವಂತಾಗಿದೆ. ಇಂತಹ ಸಮಸ್ಯೆ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ಉದ್ಭವವಾಗಿದೆ. ಕಳೆದ ಒಂದು ತಿಂಗಳಿನಿಂದಲೂ ಕೋಲಾರದ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ಈ ಸಮಸ್ಯೆ ತಲೆದೋರಿದ್ದು, ಮಾರ್ಚ್‌ ಅಂತ್ಯದೊಳಗೆ ಕೋಟ್ಯಂತರ ರೂ. ಬಿಲ್‌ಗ‌ಳು ಪಾವತಿಯಾಗದಿರುವ ಬಿಕ್ಕಟ್ಟು ನಿರ್ಮಾಣವಾಗಿದೆ.

Advertisement

ಕೋಲಾರ ಪಂಚಾಯತ್‌ ರಾಜ್‌ ಇಂಜಿಯರಿಂಗ್‌ ವಿಭಾಗದ ಕಾರ್ಯಪಾಲಕ ಅಭಿಯಂತರಾಗಿ ಮುನಿಆಂಜಿನಪ್ಪ ಕಾರ್ಯನಿರ್ವಹಿಸುತ್ತಿದ್ದು, ಇವರಿಗೆ ಸೂಪರಿಡೆಂಟ್‌ ಇಂಜಿನಿಯರ್‌ ಹುದ್ದೆಗೆ ಪದೋನ್ನತಿ ನೀಡಿ ನಗಾಭಿವೃದ್ಧಿ ಇಲಾಖೆಗೆ ವರ್ಗಾಯಿಸಲಾಗಿತ್ತು. ಆದರೆ, ಅವರಿಗೆ ವರ್ಗಾವಣೆ ಆದೇಶದಲ್ಲಿ ಸೂಕ್ತ ಹುದ್ದೆಯನ್ನು ಸ್ಪಷ್ಟವಾಗಿ ತೋರಿಸಿರಲಿಲ್ಲ. ಇದೇ ಸ್ಥಾನಕ್ಕೆ ಮುಳಬಾಗಿಲಿನಲ್ಲಿ ಎಇಇ ಆಗಿ ಕಾರ್ಯನಿರ್ವಹಿಸುತ್ತಿದ್ದ ಬೋರೇಗೌಡರಿಗೆ ಕೋಲಾರದ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗಕ್ಕೆ ಕಾರ್ಯಪಾಲಕ ಅಭಿಯಂತರಾಗಿ ಪದೋನ್ನತಿ ನೀಡಿ ವರ್ಗಾವಣೆ ಮಾಡಲಾಗಿತ್ತು.

ಆದರೆ, ಕೋಲಾರದ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗದ ಮುನಿಆಂಜಿನಪ್ಪ ತಮಗೆ ಪದೋನ್ನತಿ ನೀಡಿ ಸೂಕ್ತ ಹುದ್ದೆಯನ್ನು ತೋರಿಸದೆ ಇರುವುದರಿಂದ ಅವರು ತಮ್ಮ ಪದೋನ್ನತಿ ವರ್ಗಾವಣೆ ಆದೇಶಕ್ಕೆ ಕೆಇಟಿ ನ್ಯಾಯಾಲಯಕ್ಕೆ ತೆರಳಿ ಯಥಾಸ್ಥಿತಿ ಕಾಪಾಡುವ ತಡೆಯಾಜ್ಞೆ ತಂದಿದ್ದರು. ಇದರಿಂದ ಮುನಿಆಂಜಿನಪ್ಪ ಕೋಲಾರದ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗಕ್ಕೆ ಕಾರ್ಯಪಾಲಕರಾಗಿಯೇ ಉಳಿಯುವಂತಾಯಿತು. ಇವರ ಜಾಗಕ್ಕೆ ಪದೋನ್ನತಿ ಹೊಂದಿ ಬಂದಿದ್ದ ಬೋರೇಗೌಡರು ಕಚೇರಿಗೆ ಬಂದರೂ ಹುದ್ದೆ ಖಾಲಿ ಇಲ್ಲದೆ ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಬೋರೇಗೌಡರು ತಮ್ಮ ಪದೋನ್ನತಿ ಆದೇಶಕ್ಕೆ ಧಕ್ಕೆ ಬಾರದಂತೆ ಕೆಇಟಿ ನ್ಯಾಯಾಲಯದಲ್ಲಿಯೇ ಕೇವಿಯಟ್‌ ಸಲ್ಲಿಸಿದ್ದಾರೆ.

ಇಲ್ಲದ್ದನ್ನು ನೋಡಿಕೊಂಡು ಸಹಿ ಹಾಕೋದು: ಇವರಿಬ್ಬರ ವರ್ಗಾವಣೆ ವಿಚಾರವು ಫೆ.4ರಂದು ಕೆಇಟಿ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ. ಅಂದು ವರ್ಗಾವಣೆಯ ಕುರಿತಂತೆ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ಯಾರು ಕಾರ್ಯಪಾಲಕ ಅಭಿಯಂತರಾಗಿ ಕಾರ್ಯನಿರ್ವಹಿಸಬೇಕು ಎಂಬುದು ಇತ್ಯರ್ಥವಾಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಆದರೆ, ಈ ಗೊಂದಲದಲ್ಲಿ ಕಳೆದ ಒಂದು ತಿಂಗಳಿನಿಂದಲೂ ಅವರಿಲ್ಲದಿದ್ದಾಗ ಇವರು, ಇವರಿಲ್ಲದಿದ್ದಾಗ ಅವರು ಕಚೇರಿಗೆ ಬಂದು ಹಾಜರಾತಿ ಹಾಕಿ ಹೋಗುತ್ತಿದ್ದಾರೆ.

ಸಹಿ ಇಲ್ಲದೆ, ಬಿಲ್‌ ಪಾವತಿ ಆಗಿಲ್ಲ: ಎರಡು ದಿನಗಳಿಂದಲೂ ಮುನಿಆಂಜಿನಪ್ಪ ರಜೆಯ ಮೇಲೆ ತೆರಳಿರುವುದರಿಂದ ಬೋರೇಗೌಡರೇ ಹಾಜರಾತಿ ಹಾಕಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೂ, ಕಚೇರಿಯಲ್ಲಿ ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲದಂತಾಗಿದೆ. ಈ ಇಬ್ಬರೂ ಅಧಿಕಾರಿಗಳ ವರ್ಗಾವಣೆ ಗೊಂದಲ ಏರ್ಪಟ್ಟಾಗಿನಿಂದಲೂ ಕೋಲಾರ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ಸುಮಾರು 45 ಕೋಟಿ ರೂ. ಗುತ್ತಿಗೆ ಕೆಲಸಗಳ ಬಿಲ್‌ ಪಾವತಿಯಾಗದೆ ಸ್ಥಗಿತಗೊಂಡಿದೆ. ಇದರಿಂದ ಗುತ್ತಿಗೆದಾರರು ಆತಂಕಗೊಂಡಿದ್ದಾರೆ.

Advertisement

ಫೆಬ್ರವರಿ ಹದಿನೈದರೊಳಗಾಗಿ ಆನ್‌ಲೈನ್‌ನಲ್ಲಿ ಈ ವರ್ಷದ ಗುತ್ತಿಗೆ ಅನುದಾನವನ್ನು ಪೂರ್ಣವಾಗಿ ಬಳಸಿಕೊಂಡು ಪಾವತಿಸಬೇಕಾಗುತ್ತದೆ. ಇಲ್ಲವೇ, ಸರಕಾರಕ್ಕೆ ವಾಪಸ್‌ ಹೋಗುವ ಭೀತಿಯೂ ಎದುರಾಗಿದೆ. ಇಂತ ಸಂದರ್ಭದಲ್ಲಿ ಅಧಿಕಾರಿಗಳ ವರ್ಗಾವಣೆ ಗೊಂದಲ ಗುತ್ತಿಗೆದಾರರನ್ನು ಮತ್ತಷ್ಟು ಕಂಗೆಡುವಂತೆ ಮಾಡಿದೆ. ಮಾರ್ಚ್‌ ಅಂತ್ಯದೊಳಗೆ ತಾವು ನಿರ್ವಹಿಸಿರುವ ಕಾಮಗಾರಿಗಳ ಗುತ್ತಿಗೆ ಹಣ ತಮ್ಮ ಕೈಸೇರುತ್ತದೋ ಇಲ್ಲವೋ ಎಂಬ ಆತಂಕವೂ ಗುತ್ತಿಗೆದಾರರನ್ನು ಕಾಡುವಂತಾಗಿದೆ.

ಸಂಪರ್ಕಕ್ಕೆ ಸಿಗದ ಎಂಜಿನಿಯರ್‌: ಕೋಲಾರ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗದಿಂದ ಸೂಪರಿಟೆಂಡ್‌ ಎಂಜಿನಿಯರ್‌ ಆಗಿ ಪದೋನ್ನತಿ ಪಡೆದು ಯಥಾಸ್ಥಿತಿ ಆದೇಶ ತಂದಿರುವ ಮುನಿಆಂಜಿನಪ್ಪ ಈ ಕುರಿತು ಪ್ರತಿಕ್ರಿಯಿಸಲು ದೂರವಾಣಿ ಸಂಪರ್ಕಕ್ಕೆ ಸಿಗಲಿಲ್ಲ.

ಕೋಲಾರ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗದ ಕಾರ್ಯಪಾಲಕ ಅಭಿಯಂತರ ವರ್ಗಾವಣೆ ವಿಚಾರವು ಕೆಇಟಿ ನ್ಯಾಯಾಲಯದಲ್ಲಿದ್ದು, ಫೆ.4 ರಂದು ವಿಚಾರಣೆಗೆ ಬರಲಿದೆ. ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥ ಆಗದೆ ತಾವು ಯಾವುದೇ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲದಂತಾಗಿದೆ.
-ಎಚ್‌.ದರ್ಶನ್‌, ಸಿಇಒ, ಜಿಪಂ ಕೋಲಾರ

ಕೋಲಾರ ಪಂಚಾಯತ್‌ ಎಂಜಿನಿಯರಿಂಗ್‌ ವಿಭಾಗಕ್ಕೆ ಕಾರ್ಯಪಾಲಕ ಅಭಿಯಂತರಾಗಿ ಪದೋನ್ನತಿ ಹೊಂದಿ ತಾವು ಬಂದಿದ್ದು, ಮುನಿಆಂಜಿನಪ್ಪ ಕೆಇಟಿ ನ್ಯಾಯಾಲಯದಲ್ಲಿ ಯಥಾಸ್ಥಿತಿ ಆದೇಶ ತಂದಿರುವುದರಿಂದ ಸಮಸ್ಯೆ ಉದ್ಭವವಾಗಿದೆ. ತಾವು ನ್ಯಾಯಾಲಯಕ್ಕೆ ಕೇವಿಯಟ್‌ ಸಲ್ಲಿಸಿದ್ದು, ಫೆ.4 ವಿಚಾರಣೆ ನಡೆಯಲಿದೆ. ಆದರೂ, ವರ್ಗಾವಣೆಯಾಗಿನಿಂದಲೂ ಕಚೇರಿಗೆ ಹೋಗಿ ಬರುತ್ತಿದ್ದೇನೆ. ಸಮಸ್ಯೆಯನ್ನು ದೊಡ್ಡದಾಗಿಸದೆ ಬಗೆಹರಿಸಿಕೊಳ್ಳುವ ನಿರೀಕ್ಷೆ ಇದೆ.
-ಬೋರೇಗೌಡ, ಪದೋನ್ನತಿ ಪಡೆದ ಇಇ. ಪಿಆರ್‌ಇಡಿ

* ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next