ಮೆಲ್ಬರ್ನ್: ಪ್ರವಾಸಿ ಭಾರತದೆದುರಿನ ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ಆಸ್ಟ್ರೇಲಿಯದ 14 ಸದಸ್ಯರ ತಂಡವನ್ನು ಪ್ರಕಟಿಸಲಾಗಿದೆ. ವಿಕ್ಟೋರಿಯಾದ ಆರಂಭಕಾರ ಮಾರ್ಕಸ್ ಹ್ಯಾರಿಸ್ ಮತ್ತು ಇದೇ ರಾಜ್ಯದ ವೇಗದ ಬೌಲರ್ ಕ್ರಿಸ್ ಟ್ರಿಮೇನ್ ಈ ತಂಡದ 2 ಹೊಸ ಮುಖಗಳಾಗಿದ್ದಾರೆ.
ಪಾಕಿಸ್ಥಾನ ವಿರುದ್ಧ ಯುಎಇಯಲ್ಲಿ ನಡೆದ ಸರಣಿಯಿಂದ ಹೊರಗುಳಿದಿದ್ದ ಬ್ಯಾಟ್ಸ್‌ಮನ್ ಪೀಟರ್ ಹ್ಯಾಂಡ್ಸ್‌ಕಾಂಬ್ ಮರಳಿ ತಂಡವನ್ನು ಕೂಡಿಕೊಂಡಿದ್ದಾರೆ. ಆದರೆ ಮ್ಯಾಟ್ ರೆನ್‌ಶಾ ಅವರನ್ನು ಕಡೆಗಣಿಸಲಾಗಿದೆ. ಹೀಗಾಗಿ ಡಿ. 6ರಿಂದ ಅಡಿಲೇಡ್‌ನಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆರನ್ ಫಿಂಚ್ ಅವರೊಂದಿಗೆ ಮಾರ್ಕಸ್ ಹ್ಯಾರಿಸ್ ಇನ್ನಿಂಗ್ಸ್ ಆರಂಭಿಸುವುದು ಖಚಿತವಾಗಿದೆ. ದ್ವಿತೀಯ ಟೆಸ್ಟ್ ಡಿ. 14ರಿಂದ ಪರ್ತ್‌ನಲ್ಲಿ ನಡೆಯಲಿದೆ.
ಮಾರ್ಕಸ್ ಹ್ಯಾರಿಸ್ ಪ್ರಸಕ್ತ ಋತುವಿನ ಶೆಫೀಲ್ಡ್ ಶೀಲ್ಡ್ ಕ್ರಿಕೆಟ್ ಸರಣಿಯಲ್ಲಿ ಸರ್ವಾಧಿಕ ರನ್ ಬಾರಿಸಿದ ಹೆಗ್ಗಳಿಕೆ ಹೊಂದಿದ್ದಾರೆ (6 ಇನ್ನಿಂಗ್ಸ್‌ಗಳಿಂದ 437 ರನ್). ಇದರಲ್ಲಿ ಜೀವನಶ್ರೇಷ್ಠ ಅಜೇಯ 250 ರನ್ ಕೂಡ ಸೇರಿದೆ. ಅವರೀಗ ದೊಡ್ಡ ಮಟ್ಟದ ಕ್ರಿಕೆಟಿಗೆ ಮಾನಸಿಕವಾಗಿ ಸಜ್ಜುಗೊಂಡಿದ್ದಾರೆ ಎಂಬುದು ಆಯ್ಕೆ ಸಮಿತಿ ಅಧ್ಯಕ್ಷ ಟ್ರೆವರ್ ಹಾನ್ಸ್ ಹೇಳಿಕೆ.
ವೇಗಿ ಕ್ರಿಸ್ ಟ್ರಿಮೇನ್ ಕೂಡ ವಿಕ್ಟೋರಿಯಾ ಪರ ಏಕಪ್ರಕಾರದ ಬೌಲಿಂಗ್ ನಿರ್ವಹಣೆ ತೋರುತ್ತ ಬಂದಿದ್ದಾರೆ. 8 ಇನ್ನಿಂಗ್ಸ್‌ಗಳಿಂದ 24 ವಿಕೆಟ್ ಉರುಳಿಸಿದ್ದು, 3 ಸಲ ಇನ್ನಿಂಗ್ಸ್ ಒಂದರಲ್ಲಿ 5 ಪ್ಲಸ್ ವಿಕೆಟ್ ಕಿತ್ತಿದ್ದಾರೆ.
ಆಯ್ಕೆಯಾದ ಎಲ್ಲ 14 ಮಂದಿ ಆಟಗಾರರೂ ಟೆಸ್ಟ್ ಸರಣಿಗಿಂತ ಮೊದಲು ಇನ್ನೂ ಒಂದು ಶೆಫೀಲ್ಡ್ ಶೀಲ್ಡ್ ಪಂದ್ಯದಲ್ಲಿ ಆಡಲಿದ್ದಾರೆ. ಇಲ್ಲಿನ ಸಾಧನೆಯನ್ನು ಪರಿಗಣಿಸಿ ಅಂತಿಮ 12ರ ಬಳಗವನ್ನು ಆರಿಸಲಾಗುವುದು. ಉಳಿದಿಬ್ಬರು ದೇಶಿ ಸರಣಿಗೆ ಮರಳಲಿದ್ದಾರೆ ಎಂದು “ಕ್ರಿಕೆಟ್ ಆಸ್ಟ್ರೇಲಿಯ’ ತಿಳಿಸಿದೆ.
ಆಸ್ಟ್ರೇಲಿಯ ತಂಡ: ಟಿಮ್ ಪೇನ್ (ನಾಯಕ), ಆರನ್ ಫಿಂಚ್, ಮಾರ್ಕಸ್ ಹ್ಯಾರಿಸ್, ಉಸ್ಮಾನ್ ಖ್ವಾಜಾ, ಶಾನ್ ಮಾರ್ಷ್, ಮಿಚೆಲ್ ಮಾರ್ಷ್, ಪೀಟರ್ ಹ್ಯಾಂಡ್ಸ್‌ಕಾಂಬ್, ಟ್ರ್ಯಾವಿಸ್ ಹೆಡ್, ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಝಲ್‌ವುಡ್, ನಥನ್ ಲಿಯೋನ್, ಪೀಟರ್ ಸಿಡ್ಲ್, ಮಿಚೆಲ್ ಸ್ಟಾರ್ಕ್, ಕ್ರಿಸ್ ಟ್ರಿಮೇನ್.