Advertisement

ಕೊಳ್ಳೇಗಾಲ ‘ಕೈ’ಟಿಕೆಟ್‌ಗೆ ಇಬ್ಬರ ಹೆಸರು ಫೈನಲ್‌

03:28 PM Mar 29, 2023 | Team Udayavani |

ಕೊಳ್ಳೇಗಾಲ: ಚಾಮರಾಜನಗರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಈಗಾಗಲೇ ಮೂರಕ್ಕೆ ಕಾಂಗ್ರೆಸ್‌ ಅಭ್ಯರ್ಥಿಗಳ ಹೆಸರು ಪ್ರಕಟವಾಗಿದೆ. ಆದರೆ, ತೀವ್ರ ಕುತೂಹಲ ಕೆರಳಿಸಿರುವ ಕೊಳ್ಳೇಗಾಲ ಕ್ಷೇತ್ರ ಮಾತ್ರ ಬಾಕಿ ಉಳಿಸಿಕೊಂಡಿದ್ದು, ಅಂತಿಮವಾಗಿ ಟಿಕೆಟ್‌ ಯಾರು ಪಡೆಯುತ್ತಾರೆ ಎಂಬ ಕುತೂಹಲ ಕಾರ್ಯಕರ್ತರಲ್ಲಿ ಇದೆ.

Advertisement

ಚಾಮರಾಜನಗರದಿಂದ ಶಾಸಕ ಪುಟ್ಟರಂಗಶೆಟ್ಟಿ, ಹನೂರಿನಿಂದ ಶಾಸಕ ಆರ್‌.ನರೇಂದ್ರ, ಗುಂಡ್ಲುಪೇಟೆ ಕ್ಷೇತ್ರಕ್ಕೆ ಗಣೇಶ್‌ ಪ್ರಸಾದ್‌ ಹೆಸರು ಘೋಷಣೆ ಆಗಿದೆ. ಆದರೆ, ಮೀಸಲು ಕ್ಷೇತ್ರವಾಗಿರುವ ಕೊಳ್ಳೇಗಾಲ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಗಳು ಇದ್ದು, ಹೆಸರು ಅಂತಿಮಗೊಳಿಸಲು ವರಿಷ್ಠರಿಗೂ ತಲೆನೋವಾಗಿ ಪರಿಣಮಿಸಿದೆ.

ಎಆರ್‌ಕೆ, ಎಸ್‌.ಜಯಣ್ಣ ಮಧ್ಯೆ ಫೈಟ್‌: ಈ ಹಿಂದಿನ ಚುನಾವಣೆಯಲ್ಲಿ ಸೋತಿದ್ದ ಮಾಜಿ ಶಾಸಕ ಎ.ಆರ್‌.ಕೃಷ್ಣಮೂರ್ತಿ, ಮಾಜಿ ಶಾಸಕರಾದ ಎಸ್‌ .ಜಯಣ್ಣ, ಎಸ್‌.ಬಾಲರಾಜ್‌ ಹೆಸರು ಆಕಾಂಕ್ಷಿಗಳ ಪಟ್ಟಿಯಲ್ಲಿದ್ದು, ಈ ಪೈಕಿ ಎ.ಆರ್‌.ಕೃಷ್ಣಮೂರ್ತಿ, ಎಸ್‌.ಜಯಣ್ಣ ಇಬ್ಬರ ಹೆಸರು ಸ್ಕ್ರಿನಿಂಗ್‌ ಕಮಿಟಿಗೆ ಹೋಗಿದೆ. ಇದರಲ್ಲಿ ಯಾರಿಗೆ ಟಿಕೆಟ್‌ ಸಿಗುತ್ತದೆ ಎಂಬ ಕುತೂಹಲ ಕಾರ್ಯಕರ್ತರಲ್ಲಿ ಇದೆ.

ಪಕ್ಷದ ನಾಯಕರ ಜತೆ ಚರ್ಚೆ: ಬೆಂಗಳೂರಿನಲ್ಲಿ ಸೋಮವಾರ ನಡೆದ ಸಭೆಯಲ್ಲಿ ಕ್ಷೇತ್ರದ ಮೂವರು ಟಿಕೆಟ್‌ ಆಕಾಂಕ್ಷಿಗಳ ಜೊತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಮಾಲೋಚನೆ ನಡೆಸಿದ್ದರು. ಒಬ್ಬರಿಗೆ ವಿಧಾನಸಭಾ ಟಿಕೆಟ್‌, ಇನ್ನಿಬ್ಬರಿಗೆ ವಿಧಾನ ಪರಿಷತ್‌ ಅಥವಾ ನಿಗಮ ಮಂಡಳಿಗೆ ನೇಮಕ ಮಾಡುವ ಭರವಸೆಯನ್ನು ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

ಕೈ ಅಭ್ಯರ್ಥಿ ಗೆಲುವಿಗೆ ಸಹಕರಿಸಿ: ಕಾಂಗ್ರೆಸ್‌ ವರಿಷ್ಠರು ಮೂವರು ಆಕಾಂಕ್ಷಿಗಳನ್ನು ತೃಪ್ತಿಪಡಿಸುವ ಕೆಲಸ ಮಾಡಿದ್ದು, ಈ ಬಾರಿಯ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲಿಸಲು ಶತಾಯ ಗತಾಯ ಪ್ರಯತ್ನ ಮಾಡಬೇಕು ಎಂದು ತಾಕೀತು ಮಾಡಿದ್ದಾರೆ ಎನ್ನಲಾಗಿದೆ.

Advertisement

ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಎ.ಆರ್‌.ಕೃಷ್ಣಮೂರ್ತಿ ಅವರನ್ನು ಬಿಜೆಪಿಯಿಂದ ಕಾಂಗ್ರೆಸ್‌ ಪಕ್ಷಕ್ಕೆ ಸೇರಿಸಿಕೊಂಡು, ಶಾಸಕರಾಗಿದ್ದ ಎಸ್‌.ಜಯಣ್ಣಗೆ ಕೈ ಟಿಕೆಟ್‌ ತಪ್ಪಿಸಿ, ಎ.ಆರ್‌. ಕೃಷ್ಣಮೂರ್ತಿಗೆ ನೀಡಿದ್ದರು. ಆದರೆ, ಬಿಎಸ್ಪಿಯಿಂದ ಸ್ಪರ್ಧಿಸಿದ್ದ ಎನ್‌.ಮಹೇಶ್‌ ಜಯಗಳಿಸಿ ಎ.ಆರ್‌. ಕೃಷ್ಣಮೂರ್ತಿ ಪರಾಭವಗೊಂಡಿದ್ದರು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಎ.ಆರ್‌.ಕೆ ಅವರನ್ನೇ ಅಭ್ಯರ್ಥಿಯಾಗಿಸಲು ಸಿದ್ದರಾಮಯ್ಯ ಒಲವು ತೋರಿಸಿದ್ದಾರೆ ಎಂದು ಕೈ ನಾಯಕರೇ ಹೇಳುತ್ತಿದ್ದು, ಅಂತಿಮವಾಗಿ ಯಾರಿಗೆ ಟಿಕೆಟ್‌ ಸಿಗುತ್ತೆ ಎಂಬುದನ್ನು ಕಾದುನೋಡಬೇಕಿದೆ.

ಪಕ್ಷದ ವರಿಷ್ಠರು ಯಾರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದರೂ ಸಕ್ರಿಯವಾಗಿ ಚುನಾವಣೆಯಲ್ಲಿ ತೊಡಗಿಸಿಕೊಂಡು ಅಭ್ಯರ್ಥಿ ಗೆಲುವಿಗೆ ಶ್ರಮ ವಹಿಸುವೆ. ● ಎಸ್‌.ಜಯಣ್ಣ, ಮಾಜಿ ಶಾಸಕ

ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ 52 ಸಾವಿರ ಮತ ಪಡೆದು, ಪರಾಭವ ಗೊಂಡಿದ್ದೇನೆ. ಸಂತೇಮರಹಳ್ಳಿ ಕ್ಷೇತ್ರದಲ್ಲಿ ದಿವಂಗತ ಧ್ರುವನಾರಾಯಣ ಅವರ ವಿರುದ್ಧ ಸ್ಪರ್ಧಿಸಿ ಒಂದು ಓಟಿನಿಂದ ಸೋಲು ಕಂಡಿದ್ದೆ. ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಹುರಿಯಾಳು ಆಗಿದ್ದು, ವರಿಷ್ಠರಿಗೆ ನನಗೆ ಟಿಕೆಟ್‌ ನೀಡುವಂತೆ ಮನವಿ ಮಾಡಲಾಗಿದೆ. ● ಎ.ಆರ್‌.ಕೃಷ್ಣಮೂರ್ತಿ, ಮಾಜಿ ಶಾಸಕ

-ಡಿ.ನಟರಾಜು

Advertisement

Udayavani is now on Telegram. Click here to join our channel and stay updated with the latest news.

Next