ಬಾಗಲಕೋಟೆ: ಧರ್ಮ ಪ್ರಚಾರಕ್ಕಾಗಿ ಗುಜರಾತ್ ನಿಂದ ಬಂದಿದ್ದಮುಧೋಳದ ಓರ್ವ ವ್ಯಕ್ತಿ ಹಾಗೂ ಬಾಗಲಕೋಟೆಯಲ್ಲಿ ಮೃತಪಟ್ಟ ಸೋಂಕಿತ ವೃದ್ಧನ ಪಕ್ಕದ ಮನೆಯ ಮಹಿಳೆಗೆ ಕೋವಿಡ್-19 ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಈವರೆಗೆ ಒಟ್ಟು ಐವರಿಗೆ ಸೋಂಕು ಕಾಣಿಸಿಕೊಂಡಿದ್ದು, ಸೋಮವಾರ ಮೃತ ವೃದ್ಧನ ಪತ್ನಿ ಹಾಗೂ ಸಹೋದರನಿಗೆ ಕೋವಿಡ್-19 ಸೋಂಕು ದೃಢಪಟ್ಟಿತ್ತು.
ಮಂಗಳವಾರ ಮಧ್ಯಾಹ್ನದವರೆಗೆ ಸೋಂಕಿತರ ಸಂಖ್ಯೆಯಲ್ಲಿ ಮತ್ತೆರಡು ಸೇರ್ಪಡೆಯಾಗಿವೆ. ಮೃತ ವೃದ್ಧ ಸೇರಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು ಐದು ಜನರಿಗೆ ಸೋಂಕು ದೃಢಪಟ್ಟಿದೆ.
ಮುಧೋಳದ ವ್ಯಕ್ತಿ ಧರ್ಮ ಪ್ರಚಾರಕ್ಕಾಗಿ ಗುಜರಾತನಿಂದ ಡಿ.23ರಂದು ಜಿಲ್ಲೆಗೆ ಬಂದಿದ್ದ. ಆತನೊಂದಿಗೆ ಇನ್ನೂ 9 ಜನರು ಬಂದಿದ್ದು, ಜಿಲ್ಲೆಯಲ್ಲಿ ಸಂಚಾರ ಮಾಡಿದ್ದಾರೆ. ಇವರು, ಫೆಬ್ರವರಿಯಲ್ಲಿ ಮುಧೋಳಕ್ಕೆ ದೆಹಲಿಯಿಂದ ಬಂದಿರುವ 15 ಜನರೊಂದಿಗೆ ಸಂಪರ್ಕ ಹೊಂದಿದ್ದರು. ದೆಹಲಿಯ 14 ಜನ, ಗುಜರಾತ್ ನ 9 ಜನರ ವರದಿ ನೆಗೆಟಿವ್ ಬಂದಿವೆ. ದೆಹಲಿಯ ಒಬ್ಬ ವ್ಯಕ್ತಿಯ ವರದಿ ಬರಬೇಕಿದೆ ಎಂದು ಜಿಲ್ಲಾಧಿಕಾರಿ ಕ್ಯಾ.ರಾಜೇಂದ್ರ ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಇಂದು ಮತ್ತೆ ಹೆಚ್ಚಳವಾಗಿದೆ. ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 12 ಮಂದಿಗೆ ಸೋಂಕು ತಾಗಿರುವುದು ದೃಢಪಟ್ಟಿದ್ದು, ರಾಜ್ಯದ ಸೋಂಕಿತರ ಸಂಖ್ಯೆ 175ಕ್ಕೇರಿದೆ. ಅದರಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಇವರಲ್ಲಿ 25 ಜನ ಸೋಂಕಿತರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ ಎಂದು ಆರೋಗ್ಯ ಇಲಾಖೆ ವರದಿ ಮಾಡಿದೆ.