Advertisement

ಧಾರವಾಡದಲ್ಲಿ ಇಂದು ಇನ್ನೆರಡು ಕೊವಿಡ್ ಪ್ರಕರಣ ಪತ್ತೆ

08:39 PM Jun 09, 2020 | Hari Prasad |

ಧಾರವಾಡ: ಜಿಲ್ಲೆಯಲ್ಲಿ ಮಂಗಳವಾರ ಮತ್ತೆರಡು ಕೋವಿಡ್ ಸೋಂಕಿತರು ಪತ್ತೆಯಾಗಿದೆ. ಈ ಮೂಲಕ ಇಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 66ಕ್ಕೆ ಏರಿಕೆಯಾಗಿದೆ.

Advertisement

ಮೇ 31ರಂದು ಕಲಘಟಗಿ ತಾಲೂಕಿನ ಬಿ. ಗುಡಿಹಾಳ ಗ್ರಾಮದ 47 ವರ್ಷ ವ್ಯಕ್ತಿಯಲ್ಲಿ (ಪಿ-3397) ಸೋಂಕು ಪತ್ತೆಯಾಗಿತ್ತು. ಇದರ ಬೆನ್ನಲ್ಲಿಯೇ ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದ 68 ವರ್ಷದ ವ್ಯಕ್ತಿಯಲ್ಲಿ (ಪಿ-5828) ಸೋಂಕು ಪತ್ತೆಯಾಗಿದೆ.

ತೀವ್ರ ಜ್ವರ, ಕೆಮ್ಮ- ನೆಗಡಿಯಿಂದ ಬಳಲುತ್ತಿದ್ದ ಈ ವೃದ್ದರನ್ನು ತಪಾಸಣೆಗೆ ಒಳಪಡಿಸಿದಾಗ ಸೋಂಕು ಧೃಢಪಟ್ಟಿದ್ದು, ಇವರ ಸಂಪರ್ಕಕ್ಕೆ ಒಳಗಾದವರನ್ನು ಪತ್ತೆ ಹಚ್ಚುವ ಕಾರ್ಯವನ್ನು ಜಿಲ್ಲಾಡಳಿತ ಇದೀಗ ಮಾಡುತ್ತಿದೆ.

ಕಲಘಟಗಿ ತಾಲೂಕಿನಲ್ಲಿಯೇ ಎರಡು ಗ್ರಾಮಗಳಲ್ಲಿ ಸೋಂಕು ಧೃಡಪಟ್ಟಿರುವ ಕಾರಣ ಈ ಭಾಗದ ಗ್ರಾಮೀಣ ಭಾಗದ ಜನರಲ್ಲಿ ಆತಂಕ ಹೆಚ್ಚಾಗುವಂತಾಗಿದೆ. ಈ ಹಿಂದೆ ಸೋಂಕು ಧೃಡಪಟ್ಟಿದ್ದ ಬಿ.ಗುಡಿಹಾಳದ ಸೋಂಕಿತನ ಪ್ರಯಾಣದ ವಿವರ ಜಿಲ್ಲಾಡಳಿತಕ್ಕೆ ತಲೆ ನೋವು ತಂದಿತ್ತು.

ಇದೀಗ ಮತ್ತೆ ಈ ಭಾಗದ ಗ್ರಾಮವೊಂದರಲ್ಲಿ ಸೋಂಕು ಪತ್ತೆ ಕಂಡು ಬಂದಿದ್ದು, ಈ ಸೋಂಕಿತನ ಪ್ರಯಾಣ ವಿವರ ಕಲೆ ಹಾಕಲು ಜಿಲ್ಲಾಡಳಿತ ಮುಂದಾಗಿದೆ. ಇನ್ನೂ ಮಹಾರಾಷ್ಟ್ರದಿಂದ ಆಗಮಿಸಿರುವ 56 ವರ್ಷದ ಮಹಿಳೆಯಲ್ಲಿ (ಪಿ-5829) ಕೂಡ ಸೋಂಕು ಪತ್ತೆಯಾಗಿದ್ದು, ಈ ಮಹಿಳೆಯನ್ನು ಮೊದಲೇ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು. ಇದೀಗ ಸೋಂಕು ಧೃಡಪಟ್ಟ ಕಾರಣ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 66ಕ್ಕೆ ಏರಿಕೆಯಾಗಿದ್ದು, ಈಗಾಗಲೇ 39 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದವರಿಗೆ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ಡಿಸಿ ದೀಪಾ ಚೋಳನ್ ತಿಳಿಸಿದ್ದಾರೆ.

ದೇವಿಕೊಪ್ಪ ಸೀಲಡೌನ್: ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದಲ್ಲಿ ಕೋವಿಡ್ ಸೋಂಕು ಪತ್ತೆಯಾದ ಕಾರಣ ಸೋಂಕಿತನ ಮನೆಯಿಂದ 100ಮೀ ಅಂತರದವರೆಗಿನ ಪ್ರದೇಶವನ್ನು ನಿಯಂತ್ರಿತ ವಲಯವೆಂದು ಘೋಷಿಸಿ, ಸಂಪೂರ್ಣ ಪ್ರದೇಶವನ್ನು ಸೀಲ್‌ಡೌನ್ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಇದರ ಜೊತೆಗೆ ಸಂಪೂರ್ಣ ದೇವಿಕೊಪ್ಪ ಗ್ರಾಮವನ್ನು ಬಫರ್ ಝೋನ್‌ ಪ್ರದೇಶವೆಂದು ಘೋಷಣೆ ಮಾಡಿದ್ದು, ಗ್ರಾಮದಿಂದ ಹೊರಗಡೆ ಹಾಗೂ ಗ್ರಾಮಕ್ಕೆ ಹೊರಗಡೆಯಿಂದ ಒಳಗಡೆ ಪ್ರವೇಶಕ್ಕೆ ಸಂಪೂರ್ಣ ನಿಷೇಧಿಸಲಾಗಿದೆ.

ಮನೆಯಿಂದ ಯಾರೂ ಹೊರಗಡೆ ತಿರುಗಾಡದಂತೆ ಹಾಗೂ ಖಾಸಗಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡದಂತೆ ಸೂಚಿಸಲಾಗಿದೆ. ಈ ಬಫರ್ ಝೋನ್‌ ಪ್ರದೇಶದಲ್ಲಿ ಸದಾ ಕಣ್ಗಾವಲು ಮತ್ತು ಸಾಮಾಜಿಕ ಅಂತರ ಕ್ರಮಗಳನ್ನು ಕೈಗೊಳ್ಳಲು ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ.

ಈ ನಿಯಂತ್ರಿತ ವಲಯ ಪ್ರದೇಶಕ್ಕೆ ಘಟನಾ ನಿಯಂತ್ರಕರನ್ನಾಗಿ (ಕಮಾಂಡರ್)  ದೇವಿಕೊಪ್ಪದ ಹೈಸ್ಕೂಲ್ ಹೆಡ್‌ಮಾಸ್ಟರ್ ಕುಮಾರ್ ಕೆ.ಎಪ್. ಅವರನ್ನು ಜಿಲ್ಲಾಡಳಿತ ನೇಮಕ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next