ಕಲಬುರಗಿ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿರುವ ನಡುವೆಯೂ ಮಹಾಮಾರಿ ಸೋಂಕಿನಿಂದ ರೋಗಿಗಳು ಗುಣಮುಖರಾಗುತ್ತಿದ್ದು, ನಾಗರಿಕರು ತುಸು ಸಮಾಧಾನ ಪಡುವಂತೆ ಆಗಿದೆ.
ಹೌದು, ದೇಶದಲ್ಲೇ ಮೊದಲ ಕೋವಿಡ್ ಸಾವಿನ ಆಘಾತ ಅನುಭವಿಸಿದ್ದೇ ಕಲಬುರಗಿ ಜನತೆ. ನಂತರದಲ್ಲಿ ಹೆಮ್ಮಾರಿ ಸೋಂಕು ಸ್ವಲ್ಪ ನಿಯಂತ್ರಣಕ್ಕೂ ಬಂದಿತ್ತು.
ಆದರೆ, ಕಳೆದ 20 ದಿನಗಳಲ್ಲಿ 45 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಭೀತಿ ಹೆಚ್ಚಾಗುವಂತೆ ಮಾಡಿದೆ. ಇದೇ ವೇಳೆ ಗುಣಮುಖರಾಗಿ 12 ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಶುಕ್ರವಾರ ಕಲಬುರಗಿ ನಗರದ ಇಬ್ಬರು ಕೋವಿಡ್ ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಮೋಮಿನಪುರ ಪ್ರದೇಶದ 51 ವರ್ಷದ ಪುರುಷ (ಪಿ-255) ಮತ್ತು ಸಂತ್ರಾಸವಾಡಿ ಪ್ರದೇಶದ 35 ವರ್ಷದ ಮಹಿಳೆ (ಪಿ-256) ಸೋಂಕು ಮುಕ್ತರಾಗಿದ್ದಾರೆ. ಇವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ ತಿಳಿಸಿದ್ದಾರೆ.
51 ವರ್ಷದ ವ್ಯಕ್ತಿ ಮೃತ 55 ವರ್ಷದ ಬಟ್ಟೆ ವ್ಯಾಪಾರಿ ಸಹೋದರನಾಗಿದ್ದು, ಏ.14ರಂದು ಸೋಂಕು ದೃಢವಾಗಿತ್ತು. ಅದೇ ರೀತಿ ಮಹಿಳೆಗೆ ಮೃತ 65 ವರ್ಷದ ಹಣ್ಣಿನ ವ್ಯಾಪಾರಿಯಿಂದ ಸೋಂಕು ಹರಡಿತ್ತು. ಈಕೆಗೂ ಏ.14ರಂದು ಸೋಂಕು ಖಚಿತವಾಗಿತ್ತು.
ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 55 ಜನರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು, ಇದರಲ್ಲಿ 14 ಜನ ರೋಗಿಗಳು ಸೋಂಕಿನಿಂದ ಗುಣಮುಖರಾದಂತೆ ಆಗಿದೆ. ಉಳಿದಂತೆ ಐವರು ಸೋಂಕಿಗೆ ಬಲಿಯಾಗಿದ್ದು, ಇನ್ನೂ 36 ಜನ ಸೋಂಕಿತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.