ಬಾಗಲಕೋಟೆ : ಕಳೆದ ಐದು ದಿನಗಳಿಂದ ಒಂದೂ ಕೋವಿಡ್-19 ಸೋಂಕು ಪತ್ತೆಯಾಗದೇ ನಿರಾಳರಾಗಿದ್ದ ಜಿಲ್ಲೆಯ ಜನರಿಗೆ ಶುಕ್ರವಾರ ಮತ್ತೆ ಆತಂಕ ಮೂಡಿಸಿದೆ. ಜಿಲ್ಲೆಯ ಇಬ್ಬರು ವ್ಯಕ್ತಿಗಳಿಗೆ ಶುಕ್ರವಾರ ಬೆಳಗ್ಗೆ ಸೋಂಕು ಪತ್ತೆಯಾಗಿದೆ.
ಕಳೆದ ಏ.18ರಂದು ಒಂದೇ ದಿನ 7 ಜನರಿಗೆ ಸೋಂಕು ಪತ್ತೆಯಾಗುವ ಮೂಲಕ ತೀವ್ರ ಭೀತಿ ಹುಟ್ಟಿಸಿತ್ತು. ಅದಾದ ಬಳಿಕ ಜಿಲ್ಲೆಯಲ್ಲಿ ಏ. 23ರ ವರೆಗೂ ಒಂದೇ ಒಂದು ಸೋಂಕು ಪತ್ತೆಯಾಗಿರಲಿಲ್ಲ. ಗಂಟಲು ಮಾದರಿ ಪರೀಕ್ಷೆಗೆ ಕಳುಹಿಸಿದ್ದ 217 ವರದಿಗಳೂ ನೆಗೆಟಿವ್ ಬಂದಿದ್ದವು. ಹೀಗಾಗಿ ಜಿಲ್ಲೆಯ ಜನರು ನಿರಾಳರಾಗಿದ್ದರು. ಆದರೆ, ಶುಕ್ರವಾರ ಬೆಳಗ್ಗೆಯ ಆರೋಗ್ಯ ಇಲಾಖೆಯ ಹೆಲ್ತ ಬುಲೆಟಿನಲ್‌ನಲ್ಲಿ ಜಿಲ್ಲೆಯ ಮುಧೋಳ ಮತ್ತು ಜಮಖಂಡಿಯ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.
ಮುಧೋಳದ 43 ವರ್ಷದ ಕರ್ತವ್ಯನಿರತ ಪೇದೆ ಪಿ380 ಸೋಂಕಿತರ ಸಂಪರ್ಕದಿಂದ ಮುಧೋಳದ 28 ವರ್ಷದ ಪಿ 455 ಯುವಕನಿಗೂ ಸೋಂಕು ತಗುಲಿದೆ. ಇನ್ನು ಜಮಖಂಡಿಯ 46 ವರ್ಷದ ಕಟ್ಟಡ ಕಾರ್ಮಿಕ ಪಿ 456 ವ್ಯಕ್ತಿಗೂ ಸೋಂಕು ಖಚಿತವಾಗಿದ್ದು, ಇವರು ಇಂಪ್ಲೂಯಂಜಾ ಲೈಕ್ ಇನ್‌ಲೆಸ್ (ಐಎಲ್‌ಐ)ನಿಂದ ಜಿಲ್ಲಾ ಕೋವಿಡ್ 19 ಆಸ್ಪತ್ರೆಗೆ ದಾಖಲಗಿದ್ದು, ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ.
23ಕ್ಕೇರಿದ ಸೋಂಕಿತರ ಸಂಖ್ಯೆ : ಜಿಲ್ಲೆಯಲ್ಲಿ ಏ. 2ರಂದು 76 ವರ್ಷದ ವೃದ್ಧನಿಗೆ ಮೊದಲ ಬಾರಿಗೆ ಸೋಂಕು ಕಂಡು ಬಂದಿದ್ದು, ಆತ ಮೃತಪಟ್ಟಿದ್ದಾರೆ. ಆ ವೃದ್ಧನ ಪತ್ನಿ ಮತ್ತು ಸಹೋದರ ಕೋವಿಡ್-19 ಸೋಂಕಿನಿಂತ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದಾರೆ. ಏ. 7ರಂದು ಸೋಂಕು ಖಚಿತ ಪಟ್ಟಿದ್ದ ವೃದ್ಧನ ಪಕ್ಕದ ಮನೆಯ 41 ವರ್ಷದ ಪಿ 165 ಮಹಿಳೆ ಹಾಗೂ ಮುಧೋಳದ ಗುಜರಾತನ ಧರ್ಮಗುರು ಪಿ164 ವ್ಯಕ್ತಿಗಳಿಗೂ 2ನೇ ಬಾರಿಯೂ ನೆಗೆಟಿವ್ ಬಂದಿದೆ. ಪಿ 165 ಸೋಂಕಿತ ಮಹಿಳೆಯ ನಾಲ್ಕು ವರ್ಷದ ಗಂಡು ಮಗು, ಮೈದುನನ ಇಬ್ಬರು ಮಕ್ಕಳ 2ನೇ ಬಾರಿಯ ವರದಿ ಶುಕ್ರವಾರ ಸಂಜೆ ಬರಲಿದ್ದು, ಆ ಬಳಿಕ ತಾಯಿ ಮಕ್ಕಳನ್ನು ಒಟ್ಟಿಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.
ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 23 ಜನರಿಗೆ ಸೋಂಕು (ಒಬ್ಬರು ಸಾವು, ಇಬ್ಬರು ಗುಣಮುಖ) ಖಚಿತವಾಗಿದೆ. ಏ. 18ರಿಂದ ಒಂದೂ ಸೋಂಕು ಪತ್ತೆಯಾಗದ ಹಿನ್ನೆಲೆಯಲ್ಲಿ ಖುಷಿಯಲ್ಲಿದ್ದ ಜಿಲ್ಲೆಯ ಜನರಿಗೆ, ಶುಕ್ರವಾರದ ಆರೋಗ್ಯ ಇಲಾಖೆಯ ವರದಿ ಮತ್ತೆ ಭೀತಿ ಎದುರಾಗುವಂತೆ ಮಾಡಿದೆ.