ಹೊಸದಿಲ್ಲಿ : ಕಳೆದ ಅಕ್ಟೋಬರ್‌ನಲ್ಲಿ ಇಲ್ಲಿನ ಮಾನ್‌ಸರೋವರ್ ಪಾರ್ಕ್ ನಲ್ಲಿ ಎಂಬತ್ತರೆಡರ ವೃದ್ಧ ಮಹಿಳೆ, ಆಕೆಯ ಮೂವರು ಪುತ್ರಿಯರು ಮತ್ತು ಅವರ ಸೆಕ್ಯುರಿಟಿ ಗಾರ್ಡ್ ಸೇರಿ ಒಟ್ಟು ಐವರನ್ನು ಭೀಕರವಾಗಿ ಕೊಂದ ಘಟನೆಯಲ್ಲಿ ಶಾಮೀಲಾದ ಇನ್ನಿಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಭೀಕರ ಕೊಲೆ ಪ್ರಕರಣದಲ್ಲಿ ಒಟ್ಟು ಏಳು ಮಂದಿ ಶಾಮೀಲಾಗಿದ್ದರು; ಐವರನ್ನು ನಿನ್ನೆ ಬುಧವಾರ ಬಂಧಿಸಲಾಗಿತ್ತು. ಇಂದು ಇನ್ನಿಬ್ಬರು ಆರೋಪಿಗಳಾಗಿರುವ ನಿತಿನ್ ಮತ್ತು ದೀಪಕ್ (ಇಬ್ಬರೂ 30ರ ಹರೆಯದವರು) ಅವರನ್ನು ನಸುಕಿನ 4 ಗಂಟೆಯ ವೇಳೆ ಬಂಧಿಸಲಾಯಿತು ಎಂದು ಕ್ರೈಮ್ ಬ್ರಾಂಚ್ ಪೊಲೀಸರು ಹೇಳಿದ್ದಾರೆ.
ವೃದ್ಧೆ ಮತ್ತು ಆಕೆಯ ಮೂವರು ಪುತ್ರಿಯನ್ನು ಕೊಂದು ನಗ ನಗದು ಲೂಟಿ ಮಾಡುವ ಉದ್ದೇಶದ ಈ ಯೋಜನೆಗೆ ಸೆಕ್ಯುರಿಟಿ ಗಾರ್ಡ್ ಮಾಸ್ಟರ್ ಮೈಂಡ್ ಆಗಿದ್ದ. ಆದರೆ ಸೆಕ್ಯುರಿಟಿ ಗಾರ್ಡ್ ನನ್ನು ಆತನ ಮಗ ಮತ್ತು ಅಳಿಯ ಸೇರಿ ಕೊಂದು ಬಿಟ್ಟರು ಎಂದು ಪೊಲೀಸರು ಹೇಳಿದ್ದಾರೆ.
ಹಂತಕರು ಈ ಕೊಲೆ ಪ್ರಕರಣದಲ್ಲಿ 30ರಿಂದ 40 ಲಕ್ಷ ರೂ. ದರೋಡೆ ನಡೆಸಿದ್ದು ಅದರಲ್ಲಿ 14 ಲಕ್ಷ ರೂ. ನಗದು ಸೇರಿದೆ.
ಕಳೆದ ಅಕ್ಟೋಬರ್ 7ರಂದು ಬೆಳಗ್ಗೆ ಊರ್ಮಿಳಾ ಜಿಂದಾಲ್ 82, ಆಕೆಯ ಪುತ್ರಿಯರಾದ ಸಂಗೀತಾ ಗುಪ್ತಾ 56, ನೂಪುರ್ ಜಿಂದಾಲ 48 ಮತ್ತು ಅಂಜಲಿ ಜಿಂದಾಲ್ 38, ಹಾಗೂ ಇವರ ಸೆಕ್ಯುರಿಟಿ ಗಾರ್ಡ್ ರಾಕೇಶ್ 42 ಹಲವಾರು ಇರಿತಗಳಿಗೆ ಗುರಿಯಾಗಿದ್ದ ಇವರ ಮೃತ ದೇಹಗಳು ಪತ್ತೆಯಾಗಿದ್ದವು.
ಈ ಭೀಕರ ಕೊಲೆ ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಸಿದ ಪೊಲೀಸರು ಮೃತ ಸೆಕ್ಯುರಿಟಿ ಗಾರ್ಡ್‌ನ ಅಳಿಯ ವಿಕಾಸ್‌ನನ್ನು ಮೊದಲಾಗಿ ಸೆರೆ ಹಿಡಿದರು. ಅನಂತರದಲ್ಲಿ ಸೆಕ್ಯುರಿಟಿ ಗಾರ್ಡ್ ಮಗ ಅನುಜ್ 25 ಮತ್ತು ಇವರ ಸಹವರ್ತಿ ಸನ್ನಿ 22, ವಿಕಾಸ್ ಅಲಿಯಾಸ್ ವಿಕ್ಕಿ ಮತ್ತು ನೀರಜ್ 37 ಎಂಬವರನ್ನು ಪೊಲೀಸರು ಬಂಧಿಸಿದರು.