ಗುಡ್ಡಗಳನ್ನು ಸೀಳಿ, ಕಿವಿಗಡಚಿಕ್ಕುವಂತೆ ಆರ್ಭಟಿಸುತ್ತಾ, ಪ್ರಪಾತದ ಕಡೆಗೆ ಮುಖಮಾಡಿ, ಶರಧಿಯನ್ನು ಸೇರಲು ತವಕಿಸುತ್ತಿರುವ ಸುಂದರ ಜಲಪಾತ. ಕಣ್ಣು ಹಾಯಿಸಿದಷ್ಟು ದೂರ ಕಾಣಸಿಗುವ ಅಪೂರ್ವ ವನ ಸೌಂದರ್ಯ. ಎಂಥವರ ಮನಸ್ಸಿಗೂ ಮುದ ನೀಡುವ ತಾಣ. ಎತ್ತರದ ಕಲ್ಲಿನ ಮೇಲೆ ತದೇಕ ಚಿತ್ತದಿಂದ ನೀರು ಧುಮುಕುವುದನ್ನೇ ನೋಡುತ್ತಾ ಕುಳಿತಿದ್ದೆ. ಯಾಕೆಂದರೆ ನನ್ನ ನೆನಪುಗಳು ಕೂಡಾ ಈ ನೀರಿನಂತೆ ಕಡಲ ಒಡಲನ್ನು ಸೇರಲಿ ಎಂದು. ಆ ಕಲ್ಲಿನ ಮೇಲೆ ನನ್ನವಳ ಕೈ ಹಿಡಿದು ಕುಳಿತು ಹಂಚಿಕೊಂಡ ನನ್ನ ಭಾವನೆಗಳು, ಆಡಿದ ಮಾತುಗಳು, ಮತ್ತೆ ಮತ್ತೆ ನನ್ನ ಕಿವಿಗೆ ಅಪ್ಪಳಿಸಿ ಮನಸ್ಸಿಗೆ ನೋವುಂಟು ಮಾಡುತ್ತಿತ್ತು.
ಜಲಪಾತದ ಎತ್ತರದ ಕಲ್ಲುಬಂಡೆಯನ್ನು ನೋಡಿದಾಕ್ಷಣ ನೆನಪಾಗುವುದು ನನ್ನವಳ ಆಕಸ್ಮಿಕ ಭೇಟಿ. ಗೆಳೆಯರ ಜೊತೆ ಜೋಗ ಜಲಪಾತಕ್ಕೆ ಹೋದಾಗ, ಆ ಎತ್ತರದ ಕಲ್ಲನ್ನು ಏರುವ ಭರದಲ್ಲಿ ಕಾಲು ಜಾರಿದಾಗ ನನ್ನ ಕೈ ಡಿದು ಎತ್ತಿ ಜೀವ ಉಳಿಸಿ, ಭಾವನೆಗಳನ್ನು ಬೆಳೆಸಿದಾಕೆ.
ಅವಳು ನನ್ನನ್ನು ಕೈ ಹಿಡಿದು ಎತ್ತಿದ ಸಂದರ್ಭವೇ ಹಾಗಿತ್ತು. ಮುಂಜಾನೆ ಆ ಮಂಜಿನಲ್ಲಿ ಶ್ವೇತ ವರ್ಣದ ಉಡುಗೆ ತೊಟ್ಟ ಅವಳು ಅಪ್ಸರೆಯಂತೆ ಗೋಚರಿಸುತ್ತಿದ್ದಳು. ಅವಳ ನಗು ಎಂಥವರನ್ನೂ ಚಲಿತಗೊಳಿಸುವಂತಿತ್ತು. ಅಂದು ಪರಿಚಯವಾದವಳು ಇಂದು ನನ್ನ ಮನ ಕದ್ದ ಹುಡುಗಿ. ಕಲ್ಲಿನಂತೆ ಗಟ್ಟಿಯಗಿದ್ದ ನನ್ನ ಮನಸ್ಸಿನಲ್ಲಿಯೂ ಭಾವನೆಗಳನ್ನು ಬೆಳೆಸಿದ ಭಾವ ಜನನಿ. ಹೀಗೆ ದಿನ ಕಳೆದಂತೆ ನಮ್ಮ ಭೇಟಿ ಆ ಎತ್ತರದ ಕಲ್ಲು ಬಂಡೆಯ ಮೇಲಾಗುತ್ತಿತ್ತು. ಆ ಜಾಗದಲ್ಲಿಯೇ ನಮ್ಮ ಚಿಕ್ಕ ಕನಸಿನ ಗೋಪುರವನ್ನು ನಿರ್ಮಿಸಿದ್ದೆವು. ಆಕೆ ನನ್ನ ಜೊತೆ ಆಡಿದ ಜಗಳ. ಪ್ರೀತಿಯ ಮಾತುಗಳೆಲ್ಲವೂ ವಾಸ್ತವದಲ್ಲಿದ್ದ ನನಗೆ ಕೇವಲ ನೆನಪಾಗಿಯೇ ಉಳಿದು ಹೋದವು.
ಅವಳ ಹುಟ್ಟಿದ ದಿನದಂದು ಅವಳಿಗಾಗಿ ಉಡುಗೊರೆ ತರಲು ಹೋಗಿದ್ದೆ. ಪ್ರತಿದಿನ ಸಿಗುವ ಜಾಗಕ್ಕೆ ಬರಲು ತುಸು ತಡವಾಗಿತ್ತು. ಅವಳು ನಾನು ಬರುವ ವೇಳೆಯಲ್ಲಿ ಇನ್ನೊಬ್ಬ ಹುಡುಗನ ಬಳಿ ಮಾತನಾಡುತ್ತಿದ್ದಳು. ಹುಡುಗರಿಗೆ ಸಾಮಾನ್ಯವಾಗಿ ತಾನು ಪ್ರೀತಿಸಿದ ಹುಡುಗಿ ಬೇರೆ ಹುಡುಗರ ಜೊತೆ ಮಾತನಾಡುವುದು ಇಷ್ಟವಾಗುವುದಿಲ್ಲ. ನಾನು ಅಂದು ಅದೇ ರೀತಿ ಎದ್ದಿರಬಹುದು.
ಆಕೆ ಮಾತನಾಡುತ್ತಿರುವುದು ಯಾರ ಜೊತೆ ಎಂದು ತಿಳಿಯುವಷ್ಟು ಸೌಜನ್ಯವಿಲ್ಲದೆ, ಆಕೆಯ ಮೇಲೆ ಅನುಮಾನ ಪಟ್ಟೆ. ಅವಾಚ್ಯ ಶಬ್ದಗಳಿಂದ ನಿಂದಿಸಿದೆ. ಅವಳು ಕಣ್ಣೀರಿಡುತ್ತಾ ಒಂದೂ ಮಾತನಾಡದೆ ಹೊರಟು ಹೋದಳು. ಇಷ್ಟು ದಿನ ಅವಳು ನನ್ನ ಮೇಲಿಟ್ಟ ನಂಬಿಕೆ, ಪ್ರೀತಿಯೆಲ್ಲಾ ಅವಿವೇಕದಿಂದ ಕಳೆದುಕೊಂಡೆ. ಮನಸ್ಸು ಶಾಂತವಾದ ಮೇಲೆ ನನ್ನ ಪ್ರೇಯಸಿಯ ಹುಟ್ಟಿದ ದಿನವೇ ಅವಳ ಮನಸ್ಸನ್ನು ನೋಯಿಸಿದೆನಲ್ಲಾ ಎಂದು ಮನ ಮರುಕಗೊಂಡಿತ್ತು. ಆದರೆ ಕಾಲ ಮಿಂಚಿ ಹೋಗಿತ್ತು. ಅವಳು ಮಾತನಾಡಿದ್ದು ಅವಳ ಸ್ವಂತ ತಮ್ಮನ ಬಳಿ ಎಂದು ನನ್ನ ಸ್ನೇಹಿತ ಹೇಳಿದಾಗ ಆಕಾಶವೇ ಕಳಚಿ ಬಿದ್ದಂತಾಯಿತು. ನನ್ನ ಕಲ್ಮಷ ಮನಸ್ಸಿಗೆ ನಾನೇ ಧಿಕ್ಕಾರ ಹಾಕಿಕೊಂಡೆ.
ಆದರೂ ಮರುದಿನ ಅವಳು ಬರಬಹುದೆಂಬ ನಿರೀಕ್ಷೆಯಲ್ಲಿ ಅದೇ ಜಾಗಕ್ಕೆ ಹೋಗಿ ಕುಳಿತೆ. ಬಹಳ ಸಮಯದ ನಂತರ ಬಂದಿದ್ದು ಅವಳ ತಮ್ಮ. ದೂರದಿಂದ ಅವನು ಬರುತ್ತಾ ಇರುವುದನ್ನು ನೋಡಿ ನನಗೆ ಮುಜುಗರವಾಯಿತು. ಆತ ಹತ್ತಿರ ಬರುತ್ತಿರುವಾಗ ಅಳುತ್ತಿರುವುದು ನೋಡಿ ಒಮ್ಮೆಲೆ ಅತಂಕ.
ಅಳುತ್ತಾ ಬಂದು, ನಿನ್ನೆ ಅಕ್ಕ ತೀರಿಕೊಂಡಳು ಎಂದು ಕಣ್ಣೀರೊರೆಸಿಕೊಳ್ಳುತ್ತಾ ಹೊರಟುಹೋದ. ಒಮ್ಮೆಗೆ ದಿಗಾ½$›ಂತನಾಗಿ ಕುಳಿತೆ. ಗಂಟಲು ಕಟ್ಟಿತ್ತು. ಧಾರಾಕಾರವಾಗಿ ಕಣ್ಣೀರು ಹರಿಯಿತು. ಮನಸ್ಸು ಅವಳ ಅಗಲಿಕೆಯನ್ನು ಸಹಿಸಲಾಗದೇ ವಿಲವಿಲನೆ ಒದ್ದಾಡುತ್ತಿತ್ತು.
ಅಂದು ನನ್ನನ್ನು ಯಾಕಾದರು ಬದುಕಿಸಿದಳ್ಳೋ? ಪ್ರೀತಿಸಿದ್ದೇ ತಪ್ಪಾಯಿತು ಎಂದು ವ್ಯಥೆ ಪಡಲೋ? ನನ್ನಿಂದಲೇ ಈ ಅವಾಂತರವಾಯಿತು ಎಂದು ಮರುಗಲೋ? ನನಗೆ ಉಸಿರಾಗಿದ್ದ ನನ್ನವಳ ಉಸಿರು ಕಸಿದುಕೊಂಡ ಆ ವಿಧಿಯನ್ನು ದೂಷಿಸಲೋ? ನನ್ನ ಅನುಮಾನದ ಗುಣವನ್ನು ಬೈದುಕೊಳ್ಳಲೋ? ಮನಸ್ಸು ಯಾವುದಕ್ಕು ಉತ್ತರ ಕೊಡದ ಸ್ಥಿತಿಗೆ ಜಾರಿತ್ತು. ಭಾವನೆಗಳ ಬೆಲೆ ನನ್ನಾಕೆಯ ಅಗಲಿ, ಅವಳಿಲ್ಲದ ಲೋಕದಲ್ಲಿ ಭಾವನೆಗಳು ಬರಡಾಗಿ ಮತ್ತೆ ಮನಸ್ಸು ಕಲ್ಲು ಬಂಡೆಯ ರೂಪ ತಾಳತೊಡಗಿತು.
– ಮಹೇಂದ್ರ ಹೆಗಡೆ ಶಿಂಗ್ನಳ್ಳಿ