Advertisement

ಕಾಶ್ಮೀರದಲ್ಲಿ ಮತ್ತಿಬ್ಬರು ಉಗ್ರರ ಹತ್ಯೆ: ಲಷ್ಕರ್‌ ಉಗ್ರನ ಬಂಧನ; ಶಸ್ತ್ರಾಸ್ತ್ರಗಳು ವಶ

09:54 PM Jun 27, 2022 | Team Udayavani |

ಶ್ರೀನಗರ/ಡೆಹ್ರಾಡೂನ್‌: ವಾರ್ಷಿಕ ಅಮರನಾಥ ಯಾತ್ರೆಗೆ ಮೂರು ದಿನಗಳು ಬಾಕಿಯಿರುವಂತೆಯೇ ಜಮ್ಮು – ಕಾಶ್ಮೀರದಾದ್ಯಂತ ಭದ್ರತಾ ಪಡೆಗಳು ಹದ್ದಿನ ಕಣ್ಣಿಟ್ಟಿವೆ. ಯಾತ್ರೆಯ ವೇಳೆ ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂಬ ಉದ್ದೇಶದಿಂದ ಉಗ್ರ ಚಟುವಟಿಕೆಗಳನ್ನು ಹತ್ತಿಕ್ಕಲು ಅವಿರತ ಶ್ರಮ ವಹಿಸುತ್ತಿವೆ.

Advertisement

ಸೋಮವಾರ ಕುಲ್ಗಾಂ ಜಿಲ್ಲೆಯಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ. ನೌಪೋರಾ- ಖೇರ್‌ಪೋರಾ ವಲಯದಲ್ಲಿ ಶೋಧ ನಡೆಸುತ್ತಿದ್ದಾಗ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದರು. ಯೋಧರು ಪ್ರತಿದಾಳಿ ನಡೆಸಿದ್ದು, ಇಬ್ಬರು ಉಗ್ರರನ್ನು ಸದೆಬಡಿಯಲಾಯಿತು.

ಇನ್ನೊಂದೆಡೆ ಸೋಮವಾರ ದೋಡಾ ನಗರದಲ್ಲಿ ನಾಕಾಬಂಧಿ ವೇಳೆ ಲಷ್ಕರ್‌-ಎ-ತಯ್ಯಬಾ ಉಗ್ರ ಫ‌ರೀದ್‌ ಅಹ್ಮದ್‌ನನ್ನು ಜಮ್ಮು – ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ. ಆತನಲ್ಲಿದ್ದ ಚೈನೀಸ್‌ ಪಿಸ್ತೂಲ್‌, 2 ಮ್ಯಾಗಜಿನ್‌, 14 ಸಜೀವ ಗುಂಡುಗಳು ಮತ್ತು ಒಂದು ಮೊಬೈಲ್‌ ಫೋನನ್ನು ವಶಕ್ಕೆ ಪಡೆಯಲಾಗಿದೆ.

30ರಿಂದ ಯಾತ್ರೆ ಆರಂಭ
ಜೂ. 30ರಿಂದ ಅಮರನಾಥ ಯಾತ್ರೆ ಆರಂಭವಾಗಲಿದ್ದು, ಆ. 11ರ ವರೆಗೆ ನಡೆಯಲಿದೆ. ಕೊರೊನಾ ಹಿನ್ನೆಲೆಯಲ್ಲಿ ಸತತ 3 ವರ್ಷಗಳಿಂದ ಯಾತ್ರೆಗೆ ಅವಕಾಶ ನೀಡಿರಲಿಲ್ಲ. ಹೀಗಾಗಿ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಿಗಳು ಆಗಮಿಸುವ ಸಾಧ್ಯತೆಯಿದೆ. ಯಾತ್ರಿಗಳು ಸಂಚರಿಸುವಂಥ ಪಹಲ್ಗಾಂ ಮತ್ತು ಬಲ್ತಾಲ್‌ ಎರಡೂ ಮಾರ್ಗಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಚಾರ್‌ಧಾಮ ಯಾತ್ರೆ: 2 ತಿಂಗಳಲ್ಲಿ 203 ಸಾವು
ಮೇ 3ರಿಂದ ಚಾರ್‌ಧಾಮ್‌ ಯಾತ್ರೆ ಆರಂಭವಾದಾಗಿನಿಂದ ಈವರೆಗೆ ಅಂದರೆ, 2 ತಿಂಗಳ ಅವಧಿಯಲ್ಲಿ 203 ಮಂದಿ ಯಾತ್ರಿಗಳು ಸಾವಿಗೀಡಾಗಿದ್ದಾರೆ ಎಂದು ಉತ್ತರಾಖಂಡ ತುರ್ತು ಕಾರ್ಯಾಚರಣ ಕೇಂದ್ರ ಮಾಹಿತಿ ನೀಡಿದೆ. ಬಹುತೇಕ ಯಾತ್ರಿಗಳ ಸಾವಿಗೆ ಹೃದಯಾಘಾತ ಮತ್ತು ಇತರ ಆರೋಗ್ಯ ಸಮಸ್ಯೆಗಳೇ ಕಾರಣ ಎಂದು ತಿಳಿದುಬಂದಿದೆ. 2 ತಿಂಗಳಲ್ಲಿ ಸುಮಾರು 25 ಲಕ್ಷಕ್ಕೂ ಅಧಿಕ ಯಾತ್ರಿಗಳು ಚಾರ್‌ಧಾಮ್‌ಗೆ ಭೇಟಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next