Advertisement

ಹಿಪ್ಪರಗಿ ಜಲಾಶಯಕ್ಕೆ ಎರಡು ಲಕ್ಷ ಕ್ಯೂಸೆಕ್‌ ನೀರು!

10:40 AM Aug 03, 2019 | Team Udayavani |

ಬನಹಟ್ಟಿ: ಕೃಷ್ಣೆಯ ಹರಿವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಮಹಾರಾಷ್ಟ್ರದ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಅಲ್ಲಿನ ಅನೇಕ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದ ನೀರು ನದಿಗೆ ಹರಿದು ಬರುತ್ತಿದೆ. ಇದರಿಂದ ನದಿ ಪಾತ್ರದ ಗ್ರಾಮಗಳು ಪ್ರವಾಹಕ್ಕೆ ಸಿಲುಕುವ ಸಾಧ್ಯತೆ ಇದೆ.

Advertisement

ರಬಕವಿ ನಗರದ ಸಮೀಪದಲ್ಲಿ ಕೃಷ್ಣಾನದಿ ತುಂಬಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದರಿಂದ ನದಿ ದಡದಲ್ಲಿ ಸುಳಿಗಳು ನಿರ್ಮಾಣವಾಗುತ್ತಿವೆ. ಅವಳಿ ನಗರಗಳಿಗೆ ನೀರು ಪೂರೈಸುವ ಜಾಕ್‌ವೆಲ್ಗಳಿಗೆ ಹೋಗುವ ಮಾರ್ಗ ಬಂದಾಗಿದೆ. ಸದ್ಯ ಜಾಕ್‌ವೆಲ್ಗಳು ನಡುಗಡ್ಡೆಗಳಾಗಿವೆ. ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಕೃಷ್ಣಾ ನದಿಯ ತನ್ನ ಒಡಲು ಬಿಟ್ಟು ಹೊರಗೆ ಹರಿಯುತ್ತಿದ್ದಾಳೆ. ಇದರಿಂದಾಗಿ ನದಿ ತೀರದ ಹಲವಾರು ಎಕರೆಯಷ್ಟು ಭೂ ಪ್ರದೇಶದಲ್ಲಿ ಬೆಳೆದ ಬೆಳೆಗಳು ನೀರಿನಲ್ಲಿ ನಿಂತಿವೆ. ಹಿಪ್ಪರಗಿ ಜಲಾಶಯದ ಹಿನ್ನೀರು ಕ್ರಮೇಣ ಹೆಚ್ಚಾಗುತ್ತಿದೆ. ಆದ್ದರಿಂದ ಜನರು ಮತ್ತು ಜಾನುವಾರುಗಳನ್ನು ನದಿ ನೀರಿಗೆ ಇಳಿಸಬಾರದು ಎಂದು ತಾಲೂಕು ಆಡಳಿತ ಮುನ್ನಚ್ಚರಿಗೆ ನೀಡಿದೆ.

ರಬಕವಿ-ಬನಹಟ್ಟಿ ಜಾಕ್‌ವೆಲ್ ಹತ್ತಿರ ನೀರಿನ ಪ್ರಮಾಣ ಹೆಚ್ಚಿರುವುದರಿಂದ ಬೋಟ್ ವ್ಯವಸ್ಥೆ ಬಂದ್‌ ಮಾಡಲಾಗಿದೆ. ಅಥಣಿ ತಾಲೂಕಿಗೆ ಬೋಟ್ ಮೂಲಕ ತೆರಳಲು ಅನುಕೂಲವಾಗಲೆಂದು ನೆರೆಯ ಅಸ್ಕಿ ಗ್ರಾಮದಿಂದ ಈ ಬೋಟ್ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಅಥಣಿ ತಾಲೂಕಿನ ಮಹೀಷವಾಡಗಿಗೆ ಹೋಗಲು ಅನೂಕೂಲವಾಗಲಿದೆ.

ಶುಕ್ರವಾರ ಮುಂಜಾನೆ 7ಗಂಟೆಗೆ ದಾಖಲಾದಂತೆ ಹಿಪ್ಪರಗಿ ಜಲಾಶಯಕ್ಕೆ ಒಟ್ಟು 2,18,500 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಇಂದಿನ ನೀರಿನ ಮಟ್ಟ 524.35 ಮೀಟರ್‌ ಇದ್ದು, ಜಲಾಶಯದ ಹೊರಹರಿವು 2,17,500 ಕ್ಯೂಸೆಕ್‌ ನಷ್ಟಿದೆ. ಮಹಾರಾಷ್ಟ್ರದ ಕೊಯ್ನಾ 165 ಮೀ, ನವಜಾ 147 ಮಿ.ಮೀ., ಮಹಾಬಲೇಶ್ವರ 222 ಮಿ. ಮೀ, ವಾರಣಾ 149 ಮಿ.ಮೀ., ಸಾಂಗಲಿ 10 ಮಿ.ಮೀ, ಕೊಲ್ಲಾಪುರ 34 ಮಿ. ಮೀ, ರಾಧಾನಗರಿ 162 ಮಿ. ಮೀ, ದೂಧಗಂಗಾ 101 ಮಿ.ಮೀ ನಷ್ಟು ಮಳೆಯಾದ ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಇದರಿಂದ ಮುಂದಿನ ದಿನಗಳಲ್ಲಿ ನದಿಗೆ ಇನ್ನೂ ಹೆಚ್ಚಿನ ನೀರು ಹರಿದು ಬರುವ ಸಾಧ್ಯತೆ ಇರುವುದರಿಂದ ನದಿ ತೀರದ ಗ್ರಾಮಗಳಲ್ಲಿ ಮುನ್ನೆಚ್ಚಿಕೆಯ ಕ್ರಮವಾಗಿ ಡಂಗುರ ಸಾರಿ ಜನರು ನದಿ ತೀರಕ್ಕೆ ಸ್ನಾನಕ್ಕೆ, ಬಟ್ಟೆ ತೊಳೆಯಲಿಕ್ಕೆ, ದನಕರುಗಳನ್ನು ತೆಗೆದುಕೊಂಡು ಹೋಗಬಾರದು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಗ್ರೇಡ್‌-2 ತಹಶೀಲ್ದಾರ್‌ ಎಸ್‌.ಬಿ. ಕಾಂಬಳೆ ತಿಳಿಸಿದ್ದಾರೆ.

ನೋಡಲ್ ಅಧಿಕಾರಿಗಳ ನೇಮಕ:

ಪ್ರವಾಹ ಪರಿಸ್ಥಿತಿ ಎದುರಿಸಲು ಸಕಲ ರೀತಿಯಿಂದ ಸಜ್ಜಾಗಿದ್ದು, ಆ ನಿಟ್ಟಿನಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಅಸ್ಕಿ, ಆಸಂಗಿ ಗ್ರಾಮದ ನೋಡಲ್ ಅಧಿಕಾರಿಯಾಗಿ ರಬಕವಿ-ಬನಹಟ್ಟಿ ಪೌರಾಯುಕ್ತ ಆರ್‌. ಎಂ ಕೊಡಗೆ, ಮೊ: 9901919691, ತಮದಡ್ಡಿ ಗೆ ತೇರದಾಳ ಪುರಸಭೆ ಮುಖ್ಯಾಧಿಕಾರಿ ದಡ್ಡಿ ಮೊ: 9035391371, ಹಳಿಂಗಳಿ ಗ್ರಾಮಕ್ಕೆ ರಬಕವಿಬನಹಟ್ಟಿಯ ಕೆ.ಯು.ಆಯ್‌. ಡಿ.ಎಫ್.ಸಿ ಎಇಇ ಹತ್ತಿ ಮೊ: 8277222159, ರಬಕವಿ, ಹೊಸೂರ, ಕುಲಹಳ್ಳಿ ಗ್ರಾಮಕ್ಕೆ ರಬಕವಿ-ಬನಹಟ್ಟಿ ನಗರಸಭೆಯ ಸಹಾಯಕ ಅಭಿಯಂತರರಾದ ಬಸವರಾಜ ಶರಣಪ್ಪನವರ ಮೊ: 9902427233, ಮದನಮಟ್ಟಿ ಗ್ರಾಮಕ್ಕೆ ಜಮಖಂಡಿ ವಲಯ ಅರಣ್ಯಾಧಿಕಾರಿ ಕುಲಕರ್ಣಿ ಮೊ: 7259071947, ಹಿಪ್ಪರಗಿ ಗ್ರಾಮಕ್ಕೆ ಎನ್‌.ಎಸ್‌. ದಿವಟೆ ಮೊ: 9480348767 ಅವರನ್ನು ನೇಮಿಸಲಾಗಿದೆ. ಸಾರ್ವಜನಿಕರು ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ತಹಶೀಲ್ದಾರ್‌ ತಿಳಿಸಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next