Advertisement

ಜಲ್ಲಿಕಟ್ಟಿಗೆ ಇಬ್ಬರು ಬಲಿ; ಪುದುಕೋಟೈನಲ್ಲಿ ಗೂಳಿ ದಾಳಿಗೆ ಸಾವು

09:46 AM Jan 23, 2017 | Team Udayavani |

ಚೆನ್ನೈ/ಮಧುರೈ: ಬೇಕು- ಬೇಡಗಳ ವಾದ-ಪ್ರತಿವಾದದಲ್ಲಿ ಗೆದ್ದು ಶುರು ವಾಗಿದ್ದ ತಮಿಳುನಾಡಿನ ಸಾಂಪ್ರದಾಯಿಕ ಜಲ್ಲಿಕಟ್ಟು ಕ್ರೀಡೆಗೆ ಮೊದಲ ದಿನವೇ ವಿಘ್ನವಾಗಿದೆ. ಪುದು ಕೋಟ್ಟೆ „ ಜಿಲ್ಲೆಯಲ್ಲಿ ನಡೆದ ಜಲ್ಲಿಕಟ್ಟಿನಲ್ಲಿ ಗೂಳಿ
ದಾಳಿಗೆ ಸಿಲುಕಿ ಇಬ್ಬರು ಸಾವನ್ನಪ್ಪಿದ್ದಾರೆ. ಮಧುರೈ ಯಲ್ಲಿ “ಸಮಸ್ಯೆಯ ಶಾಶ್ವತ ಇತ್ಯರ್ಥ’ಕ್ಕಾಗಿ ಹೋರಾಟ ನಡೆಸು
ತ್ತಿದ್ದ ಪ್ರತಿಭಟನಕಾರರೊಬ್ಬರು ನಿರ್ಜಲೀ ಕರಣದಿಂದಾಗಿ ಸಾವಿ ಗೀಡಾಗಿದ್ದಾರೆ.

Advertisement

ಸುಪ್ರೀಂಕೋರ್ಟ್‌ನ ನಿರಾಕರಣೆ, ಅನಂತರದ ಸಾಲು ಸಾಲು ಪ್ರತಿಭಟನೆ, ಮಧ್ಯ ಪ್ರವೇಶಕ್ಕೆ ಒಪ್ಪದ ಕೇಂದ್ರ ಸರಕಾರ, ರಾಜ್ಯದ ಅಧ್ಯಾದೇಶ ಬಳಿಕ ರವಿವಾರ ತಮಿಳುನಾಡಿನಾದ್ಯಂತ ಜಲ್ಲಿಕಟ್ಟು ಕ್ರೀಡೆ ಆಯೋಜಿಸಲಾಗಿತ್ತು. ಅತ್ತ ರಾಜ್ಯ ಸರಕಾರದ ಅಧ್ಯಾದೇಶ ಕೇವಲ ಕಣ್ಣೊರೆಸುವ ತಂತ್ರ, ಇದು ಕೇವಲ ತಾತ್ಕಾಲಿಕ ಉಪಶಮನ. ಹೀಗಾಗಿ ಶಾಶ್ವತ ಪರಿಹಾರಕ್ಕಾಗಿ ಆಗ್ರ ಹಿಸಿ ಚೆನ್ನೈಯ ಮರೀನಾ ಬೀಚ್‌ ಸಹಿತ ರಾಜ್ಯವಲ್ಲದೇ ದೇಶ-ವಿದೇಶಗಳಲ್ಲಿಯೂ ರವಿವಾರವೂ ಪ್ರತಿಭಟನೆ ಮುಂದುವರಿಯಿತು.

ಇವೆಲ್ಲ ಬೆಳವಣಿಗೆಗಳ ಮಧ್ಯೆ, ಮುಖ್ಯಮಂತ್ರಿ ಪನ್ನೀರ್‌ ಸೆಲ್ವಂ ಜಲ್ಲಿಕಟ್ಟು ಉದ್ಘಾ ಟನೆಗಾಗಿ ಮಧುರೈಯ ಅಲಂಗನಲ್ಲೂರಿಗೆ ತೆರಳಿ ಬರಿಗೈನಲ್ಲಿ ವಾಪಸಾದರು. ಜಲ್ಲಿಕಟ್ಟು ಕ್ರೀಡೆಗೆ ಪ್ರತಿವರ್ಷವೂ ಇಂಥದ್ದೊಂದು ತೊಡಕು ಇದ್ದೇ ಇರುತ್ತದೆ. 

ಹೀಗಾಗಿ ಅಧ್ಯಾದೇಶದಂಥ ತಾತ್ಕಾಲಿಕ ಉಪಶಮನ ಬೇಡ. ಇದಕ್ಕೆ ಶಾಶ್ವತ ಪರಿಹಾರ ಬೇಕು ಎಂದು ಇಲ್ಲಿನ ಪ್ರತಿಭಟನಕಾರರು ಒತ್ತಾಯಿಸಿದ್ದರಿಂದ, ಜಲ್ಲಿಕಟ್ಟು ಕ್ರೀಡೆ ಉದ್ಘಾಟನೆ ಮಾಡದೇ ಚೆನ್ನೈಗೆ ವಾಪಸಾದರು. ವಿಶೇಷವೆಂದರೆ, ಇಡೀ ರಾಜ್ಯದಲ್ಲಿನ ಜಲ್ಲಿಕಟ್ಟು ಕ್ರೀಡೆಗೆ ಕೇಂದ್ರ ಬಿಂದು ಈ ನಗರವೇ. ಪ್ರತಿವರ್ಷವೂ ಇಲ್ಲೇ ಪ್ರಮುಖವಾಗಿ ಜಲ್ಲಿಕಟ್ಟು ನಡೆಯುವುದು. ಈ ವೇಳೆ ಅವರು ಶಾಶ್ವತ ಪರಿಹಾರದ ಭರವಸೆ ನೀಡಿದರಲ್ಲದೇ, ಮುಂದೊಂದು ದಿನ ಜಲ್ಲಿಕಟ್ಟು ಕ್ರೀಡೆ ಉದ್ಘಾಟಿಸಲು ಬರುವುದಾಗಿ ಹೇಳಿ ಮರಳಿದರು.

ಇಬ್ಬರ ಸಾವು, 50 ಮಂದಿಗೆ ಗಾಯ: ಎಲ್ಲ ವಿರೋಧಗಳನ್ನು ಮೀರಿ ಜಲ್ಲಿಕಟ್ಟು ಆರಂಭವಾಗಿದ್ದರಿಂದ ಇಡೀ ತಮಿಳುನಾಡು ರಾಜ್ಯದಲ್ಲಿ ರವಿವಾರ ಸಂಭ್ರಮದ ವಾತಾವರಣ. ವಿಶೇಷ ಎಂದರೆ ಹೆಚ್ಚಿನ ಕಡೆ ಸ್ಥಳೀಯರೇ ಸೇರಿಕೊಂಡು ಜಲ್ಲಿಕಟ್ಟು ಕ್ರೀಡೆ ನಡೆಸಿದರು. ಪುದುಕೋಟೈ ಜಿಲ್ಲೆಯಲ್ಲಿ ನಡೆದ ಜಲ್ಲಿಕಟ್ಟುವಿಗೆ ಆರೋಗ್ಯ ಸಚಿವ ಸಿ ವಿಜಯಭಾಸ್ಕರ್‌ ಅವರೇ ಚಾಲನೆ ನೀಡಿದರು. ಇಲ್ಲಿನ ಜಲ್ಲಿಕಟ್ಟು ಕ್ರೀಡೆಯಲ್ಲಿ ಮಾತ್ರ ಎಡವಟ್ಟು ಸಂಭವಿಸಿತು. ಜನರ ಮೇಲೆಯೇ ಗೂಳಿಗಳು ನುಗ್ಗಿದ್ದರಿಂದ ತಪ್ಪಿಸಿಕೊಳ್ಳಲಾರದೇ ಮೋಹನ್‌ ಮತ್ತು ರಾಜ ಎಂಬುವರು ಸಾವನ್ನಪ್ಪಿದರು.
ಅತ್ತ ಮಧುರೈನಲ್ಲಿ ನಡೆಯುತ್ತಿದ್ದ ಶಾಶ್ವತ ಸಮಸ್ಯೆ ನಿವಾರಣೆಗಾಗಿ ಒತ್ತಾಯಿಸಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಜೈಹಿಂದ್‌ ಪುರಂ ನಿವಾಸಿ ಚಂದ್ರಮೋಹನ್‌ ಎಂಬುವರು ನಿರ್ಜಲೀಕರಣದಿಂದಾಗಿ ಮರಣಹೊಂದಿದರು. ಇವರು ನಗರದ ಹಲವಾರು ಕಾಲೇಜುಗಳ ವಿದ್ಯಾರ್ಥಿಗಳು, ಯುವಕರ ಜತೆ ಸೇರಿ ಪ್ರತಿಭಟನೆ ನಡೆಸುತ್ತಿದ್ದರು.

Advertisement

ಇನ್ನು ಚೆನ್ನೈಯ ಮರೀನಾ ಬೀಚ್‌ನಲ್ಲಿ ಪ್ರತಿಭಟನೆ ಹಾಗೆಯೇ ಮುಂದುವರಿದಿದೆ. ಶಾಶ್ವತ ಪರಿಹಾರದ ಬಳಿಕವೇ ಜಲ್ಲಿಕಟ್ಟು ಕ್ರೀಡೆಯಲ್ಲಿ ಪಾಲ್ಗೊಳ್ಳಲು ಸಾಧ್ಯ ಎಂಬುದು ಇಲ್ಲಿನವರ ನಿಲುವು. ಅಲ್ಲದೆ ಪರಿಹಾರ ಸಿಗದೇ ಹೋದರೆ, ಜ.26ರ ಗಣರಾಜ್ಯೋತ್ಸವಕ್ಕೂ ಅಡ್ಡಿ ಪಡಿಸುವುದಾಗಿ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ. ಈ ಪ್ರತಿಭಟನೆ ಕೇವಲ ತಮಿಳುನಾಡಿಗೆ ಸೀಮಿತವಾಗದೆ ಇತರೆ ರಾಜ್ಯಗಳು, ದೇಶ- ವಿದೇಶಗಳಿಗೂ ವ್ಯಾಪಿಸಿದೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಪನ್ನೀರ್‌ ಸೆಲ್ವಂ, ಸೋಮವಾರದಿಂದ ವಿಧಾನಸಭೆ ಅಧಿವೇಶನ ಆರಂಭವಾಗಲಿದೆ. ಇದರಲ್ಲಿ ನಾವು ಶಾಶ್ವತ ಪರಿಹಾರಕ್ಕೆ ಪ್ರಯತ್ನಿಸುತ್ತೇವೆ ಎಂಬ ಭರವಸೆ ನೀಡಿದ್ದಾರೆ.

ಸುಪ್ರೀಂಕೋರ್ಟ್‌ಗೆ ಕೆವಿಯಟ್‌: ಯಾವುದೇ ಕಾರಣಕ್ಕೂ ತಾನು ಹೊರಡಿಸಿರುವ ಅಧ್ಯಾದೇಶಗೆ ಅಡ್ಡಿಯಾಗಬಾರದು ಎಂಬ ಕಾರಣದಿಂದ ತಮಿಳುನಾಡು ಸರಕಾರ ಸುಪ್ರೀಂಕೋರ್ಟ್‌ಗೆ ಕೆವಿಯಟ್‌ ಸಲ್ಲಿಸಿದೆ. ಈ ಮೂಲಕ ಕ್ರೀಡೆಗೆ ಯಾವುದೇ ರೀತಿಯ ಅಡ್ಡಿ ತಲೆದೋರಬಾರದು ಎಂಬ ಸಿದ್ಧತೆ ಮಾಡಿಕೊಂಡಿತ್ತು.

ಪೆಟಾ ವಿರುದ್ಧ ಕಮಲ್‌ ಗುಡುಗು: ಜಲ್ಲಿಕಟ್ಟು ಕ್ರೀಡೆಗೆ ವಿರೋಧ ವ್ಯಕ್ತಪಡಿಸುತ್ತಿರುವ, ಸುಪ್ರೀಂ ಕೋರ್ಟ್‌ವರೆಗೂ ಕೊಂಡೊಯ್ದಿರುವ ಪೆಟಾ ವಿರುದ್ಧ ಟಾಲಿವುಡ್‌ ನಟ ಕಮಲ್‌ ಹಾಸನ್‌ ಗುಡುಗಿದ್ದಾರೆ. ಡೊನಾಲ್ಡ್‌ ಟ್ರಂಪ್‌ ಅವರ ಅಮೆರಿಕದಲ್ಲಿ ಗೂಳಿ ಓಟ ಸ್ಪರ್ಧೆ ನಿಷೇಧ ಮಾಡಿ ನೋಡುವಾ ಎಂದು ಅವರು ಸವಾಲು ಹಾಕಿದ್ದಾರೆ. ಈ ಸಂಘಟನೆಯ ಕಾರ್ಯಕರ್ತರು ಭಾರತದಲ್ಲಿರಲು ಯೋಗ್ಯರಲ್ಲ, ಅವರು ದೇಶ ಬಿಡಲಿ ಎಂದು ಅವರು ಆಕ್ರೋಶದಿಂದ ನುಡಿದಿದ್ದಾರೆ. ಜತೆಗೆ ಯಾವುದೇ ಕಾರಣಕ್ಕೂ ದೇಶದ ಸಂಸ್ಕೃತಿ ಮಧ್ಯ ತಲೆಹಾಕಬೇಡಿ ಎಂದೂ ಸೂಚಿಸಿದ್ದಾರೆ. ಈ ಹಿಂದೆಯೂ ಕಮಲ್‌ ಹಾಸನ್‌ ಜಲ್ಲಿಕಟ್ಟು ಸಮರ್ಥಿಸಿ ಇಂಥದ್ದೇ ಹೇಳಿಕೆ ನೀಡಿದ್ದರು. ಜಲ್ಲಿಕಟ್ಟು ನಿಷೇಧಿಸುವುದಾದರೆ ಬಿರಿಯಾನಿ ತಿನ್ನುವುದನ್ನೂ ನಿಷೇಧಿಸಬೇಕು ಎಂದು ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next