ಬೆಂಗಳೂರು: ಸಿನಿಮಾ ಶೂಟಿಂಗ್‌ನ ಜನರೇಟರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಪಾದಚಾರಿಗಳು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ನಂದಿನಿ ಲೇಔಟ್‌ನ ಕೃಷ್ಣಾನಂದ ನಗರದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಕೃಷ್ಣಾನಂದ ನಗರ ನಿವಾಸಿ ಗನಿ (60) ಮತ್ತು ಲಗ್ಗೆರೆಯ ಲಕ್ಷ್ಮೀದೇವಿ ಲೇಔಟ್‌ನ ಭಾಗ್ಯಮ್ಮ (50) ಮೃತರು. ಘಟನೆಯಲ್ಲಿ ಎರಡು ಕಾರು, ಎರಡು ಬೈಕ್‌ಗಳು ಜಖಂಗೊಂಡಿವೆ. ಮಳೆ ಬರುತ್ತಿದ್ದ ಕಾರಣ ಘಟನೆ ನಡೆದ ಸ್ಥಳದಲ್ಲಿ ಕಡಿಮೆ ಸಂಖ್ಯೆಯ ವಾಹನಗಳು ಇದ್ದವು. ಇಲ್ಲದಿದ್ದರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಘಟನೆ ನಡೆದ ಬಳಿಕ ಚಾಲಕ ಸ್ಥಳದಲ್ಲೇ ವಾಹನ ಬಿಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗನಿ ಮತ್ತು ಭಾಗ್ಯಮ್ಮ ಕೂಲಿ ಕಾರ್ಮಿಕರಾಗಿದ್ದು, ಕೆಲಸ ಮುಗಿಸಿಕೊಂಡು ಮನೆಗೆ ಕೃಷ್ಣಾನಂದ ನಗರದ ಮುಖ್ಯರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಯಶವಂತಪುರ ಮಾರ್ಗವಾಗಿ ಬಂದ ಸಿನಿಮಾ ಶೂಟಿಂಗ್‌ನ ಜನರೇಟರ್ ಇದ್ದ ವಾಹನ ಕೃಷ್ಣಾನಂದ ನಗರದ ಮುಖ್ಯರಸ್ತೆಯಲ್ಲಿ ಸಾಗುತ್ತಿತ್ತು. ಈ ವೇಳೆ ಏಕಾಏಕಿ ವಾಹನ ಚಾಲಕನ ನಿಯಂತ್ರಣ ತಪ್ಪಿ ಹಿಂದಕ್ಕೆ ಸಾಗಿದೆ.
ಪರಿಣಾಮ ಹಿಂದೆ ಇದ್ದ ಎರಡು ಕಾರು ಮತ್ತು ಎರಡು ಬೈಕ್‌ಗೆ ಡಿಕ್ಕಿಯಾಗಿ ಬೋರವೆಲ್‌ವೊಂದಕ್ಕೆ ವಾಹನ ಡಿಕ್ಕಿ ಹೊಡೆದಿದೆ. ಇಳಿಜಾರು ಇದ್ದ ಕಾರಣ ಬಸ್ ಚಾಲಕ ನಿಯಂತ್ರಣಕ್ಕೆ ಸಿಗದೇ ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ಗನಿ ಮತ್ತು ಭಾಗ್ಯಮ ಅವರಿಗೆ ಡಿಕ್ಕಿಯೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡ ಪಾದಚಾರಿಗಳಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಾಹನ ಬ್ರೇಕ್ ವೈಫಲ್ಯಗೊಂಡು ದುರ್ಘಟನೆ ಸಂಭವಿಸಿರುವ ಸಾಧ್ಯತೆ ಇದೆ. ಭಾಗ್ಯಮ್ಮ ಕೆಲಸ ಮುಗಿಸಿಕೊಂಡು ಪಡಿತರವನ್ನು ತೆಗೆದುಕೊಂಡು ಹೋಗುತ್ತಿದ್ದಾಗ ದುರ್ಘಟನೆ ಸಂಭವಿಸಿದ್ದು, ಸ್ಥಳದಲ್ಲಿ ಪಡಿತರ ರಸ್ತೆಯಲ್ಲೆಲ್ಲಾ ಹರಿಡಿತ್ತು ಎಂದು ರಾಜಾಜಿನಗರ ಸಂಚಾರ ಠಾಣೆ ಪೊಲೀಸರು ಮಾಹಿತಿ ನೀಡಿದರು.