ಬೆಂಗಳೂರು: ಬಿಜೆಪಿ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡುವ ಸಂಬಂಧ ಮಾಜಿ ಸಚಿವ ಜಿ.ಟಿ.ದೇವೇಗೌಡರ ಹೇಳಿಕೆ ಬೆನ್ನಲ್ಲೇ, ಇಬ್ಬರು ಜೆಡಿಎಸ್ ಶಾಸಕರು ವಿಶ್ವಾಸಮತ ಸಂದರ್ಭದಲ್ಲಿ ಸರ್ಕಾರದ ಪರ ಮತ ಹಾಕುವುದಾಗಿ ನನಗೆ ತಿಳಿಸಿದ್ದಾರೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ಬಾಂಬ್ ಸಿಡಿಸಿದ್ದಾರೆ.
ಕಾಂಗ್ರೆಸ್ ಜತೆ ಮೈತ್ರಿ ಸಾಕಾಗಿದೆ. ನಾವು ಬಿಜೆಪಿ ಬೆಂಬಲಿಸಲು ಸಿದ್ಧ ಎಂದು ನನಗೇ ಇಬ್ಬರು ಶಾಸಕರು ಹೇಳಿದ್ದಾರೆ. ಹೀಗಾಗಿ, ಕಾದು ನೋಡಿ ಎಂದು ಹೇಳಿದರು. ಆದರೆ, ಆ ಇಬ್ಬರು ಶಾಸಕರ ಹೆಸರು ಹೇಳಲು ಅವರು ನಿರಾಕರಿಸಿದರು.
ಶುಕ್ರವಾರ ನಗರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿಯವರು ಜೆಡಿಎಸ್ ಶಾಸಕರ ಸಭೆ ನಡೆಸಿದ್ದರು. ಆಗ ಕೆಲವು ಶಾಸಕರು ಬಿಜೆಪಿ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡುವ ಬಗ್ಗೆ ಪ್ರಸ್ತಾಪ ಮಾಡಿದ್ದರು. ಸಭೆಯ ನಂತರ ಮಾತನಾಡಿದ ಜಿ.ಟಿ.ದೇವೇಗೌಡರು, ಸಭೆಯಲ್ಲಿ ಕೆಲವು ಶಾಸಕರು ಪ್ರತಿಪಕ್ಷದಲ್ಲಿ ಕುಳಿತು ಕೆಲಸ ಮಾಡುವುದು ಸೂಕ್ತ ಎಂದು ಹೇಳಿದ್ದಾರೆ. ಮತ್ತೆ ಕೆಲವರು ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡೋಣ ಎಂದು ಹೇಳಿದ್ದಾರೆ. ಆದರೆ, ಅಂತಿಮ ತೀರ್ಮಾನವನ್ನು ಪಕ್ಷದ ನಾಯಕರು ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದರು.
ಇದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸ ವಾಗಿತ್ತು. ಈ ಮಧ್ಯೆ, ಮಾಜಿ ಪ್ರಧಾನಿ ದೇವೇಗೌಡರು ಸಹ ಮಾತನಾಡಿ, ಜಿ.ಟಿ.ದೇವೇಗೌಡರ ಮಾತನ್ನು ದೊಡ್ಡದು ಮಾಡುವುದು ಬೇಡ. ಜನಪರ, ವಿಷಯಾಧಾ ರಿತ ಬೆಂಬಲ ಸರ್ಕಾರಕ್ಕೆ ಇರುತ್ತದೆ. ಎಲ್ಲದಕ್ಕೂ ನಾವು ವಿರೋಧ ಮಾಡುವುದಿಲ್ಲ ಎಂದು ತಿಳಿಸಿದರು.