Advertisement

ಪುತ್ತೂರು: ಕುಖ್ಯಾತ ಅಂತರರಾಜ್ಯ ಕಳ್ಳರಿಬ್ಬರು ಪೋಲೀಸರ ಬಲೆಗೆ

05:32 PM Mar 25, 2022 | Team Udayavani |

ಪುತ್ತೂರು: ಬಲ್ನಾಡು ಗ್ರಾಮದ ಉಜ್ರುಪಾದೆ ಮನೆಯೊಂದರಿಂದ ಚಿನ್ನಾಭರಣ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಅಂತರಾಜ್ಯ ಕಳ್ಳರಿಬ್ಬರನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

Advertisement

ಬಂಧಿತ ಆರೋಪಿಗಳು ಚಿಕ್ಕಮುಡ್ನೂರು ಗ್ರಾಮದ ತಾರಿಗುಡ್ಡೆ ಮಹಮ್ಮದ್ ಅಶ್ರಫ್ (ಕಳ್ಳ ಆಶ್ರಫ್) (42)ಮತ್ತು ಚಿಕ್ಕಮುಡ್ನೂರು ಗ್ರಾಮದ ಸಾಲ್ಮರ ಕೆರೆಮೂಲೆ ಮೂಲದ ಪ್ರಸ್ತುತ ಗುಂಪಕಲ್ಲು ನಿವಾಸಿಯಾಗಿರುವ ಕೆ.ಮೊಹಮ್ಮದ್ ಸಲಾಂ ಎನ್ನುವವರಾಗಿದ್ದಾರೆ.

ಬಂಧಿತ ಆರೋಪಿಗಳಿಬ್ಬರು ಕೇರಳ ಮತ್ತು ಕರ್ನಾಟಕದಲ್ಲಿ ಹಲವು ಕಡೆ ಕಳ್ಳತನ ಮಾಡಿದ್ದು ಅವರ ವಿರುದ್ಧ ಹಲವು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಾರಂಟ್ ಜಾರಿಯಾಗಿತ್ತು. ಆದರೆ ಆರೋಪಿಗಳು ತಲೆಮರೆಸಿಕೊಂಡಿದ್ದರು. ಇದೀಗ ಇನ್ನೊಂದು ಕಳವು ಪ್ರಕರಣದ ಮೂಲಕ ವಾರಂಟ್ ಆರೋಪಿಗಳ ಬಂಧನವಾದಂತಾಗಿದೆ.

ಫೆ. 26 ರಂದು ಬಲ್ನಾಡು ಉಜ್ರುಪಾದೆ ಶಿವಪ್ರಸಾದ್ ಭಟ್ ಅವರ ಮನೆಯಿಂದ ರಾತ್ರಿ ಮನೆಯ ಬೀಗವನ್ನು ಮುರಿದು ಸುಮಾರು 160 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದರು. ಈ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಹಲವು ಕಡೆಗಳಲ್ಲಿ ಕಳ್ಳತ್ತನ
ಆರೋಪಿಗಳು ವಿಟ್ಲ ಠಾಣಾ ವ್ಯಾಪ್ತಿಯ ಪುಣಚ ಗ್ರಾಮದ ಅಜ್ಜನಡ್ಕ ಮಹಮ್ಮದ್ ಆಲಿ ಎಂಬವರ ಮನೆಯಿಂದ, ಬಲ್ನಾಡು ಗ್ರಾಮದ ವಿಷ್ಣುಮೂರ್ತಿ ದೈವಸ್ಥಾನದಿಂದ, ಇದೇ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಕಾವು ಸಿರಿ ಭೂಮಿ ಕೃಷಿ ಉತ್ಪನ್ನ ಅಂಗಡಿಯಿಂದ, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ, ಕೇರಳ ರಾಜ್ಯದ ಕಾಸರಗೋಡು ಆದೂರು ಪೊಲೀಸ್ ಠಾಣಾ ವ್ಯಾಪ್ತಿಯ ಚೆರ್ಕಳದಲ್ಲಿ ಎರಡು ಮನೆಗಳಿಂದ ಕಳ್ಳತನ ಮಾಡಿರುವ ಕುರಿತು ಪೊಲೀಸ್ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ.

Advertisement

ರೂ.6.5 ಲಕ್ಷ ಮೌಲ್ಯದ ಸೊತ್ತು ವಶಕ್ಕೆ
ಬಂಧಿತ ಆರೋಪಿಗಳಿಂದ ರೂ. 5ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿಯ ವಸ್ತುಗಳು, ಲ್ಯಾಪ್‌ಟಾಪ್, ಸಿಸಿ ಕ್ಯಾಮರ ಡಿವಿಆರ್ ಮತ್ತು ಕಳ್ಳತನಕ್ಕೆ ಉಪಯೋಗಿಸಿದ ಬೈಕ್‌ವನ್ನು ವಶಕ್ಕೆ ಪಡೆದು ಕೊಳ್ಳಲಾಗಿದೆ. ಒಟ್ಟು ರೂ. 6.5ಲಕ್ಷ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದು ಕೊಳ್ಳಲಾಗಿದೆ.

ಆರೋಪಿಳಗಳ ವಿರುದ್ಧ ವಾರಂಟ್
ಆರೋಪಿಗಳು ಈ ಹಿಂದೆ ಕೇರಳ ಮತ್ತು ಕರ್ನಾಟಕದ ರಾಜ್ಯದಲ್ಲಿ ಹಲವು ಮನೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದು, ಇವರ ವಿರುದ್ಧ ಉಪ್ಪಿನಂಗಡಿ, ಸುಳ್ಯ, ಪುತ್ತೂರು ನಗರ, ಬೆಳ್ಳಾರೆ, ಬಂಟ್ವಾಳ, ಧರ್ಮಸ್ಥಳ, ವಿಟ್ಲ, ಕೇರಳದ ಮಲ್ಲಪುರಂ ಕೊಂಡೆಟ್ಟಿ, ಆದೂರು, ಕೊಡಗಿನ ಸೊಮವಾರಪೇಟೆ ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಪ್ರಕರಣ ದಾಖಲಾಗಿದ್ದು, ಇವರ ವಿರುದ್ಧ ವಾರಂಟ್ ಜಾರಿಯಾಗಿದೆ. ಆದರೆ ಆರೋಪಿಗಳು ತಲೆಮರೆಸಿಕೊಂಡಿದ್ದರು. ಇದೀಗ ಮಾ.೨೪ರಂದು ಪೊಲೀಸ್ ವಿಶೇಷ ತಂಡ ಆರೋಪಿಗಳನ್ನು ಪತ್ತೆ ಮಾಡಿದೆ.

ದ.ಕ.ಜಲ್ಲೆ ಪೊಲೀಸ್ ಅಧೀಕ್ಷಕ ಋಷಿಕೇಶ್ ಸೋನಾವಣೆ, ಹೆಚ್ಚುವರಿ ಪೊಲೀಸ್  ಅಧೀಕ್ಷಕರು ಕುಮಾರ ಚಂದ್ರ ರವರ ಮಾರ್ಗದರ್ಶನದಲ್ಲಿ, ಪುತ್ತೂರು ಡಿವೈಎಸ್ಪಿ ಡಾ| ಗಾನ ಪಿ.ಕುಮಾರ್ ಪುತ್ತೂರು ರವರ ನೇತೃತ್ವದಲ್ಲಿ, ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಉಮೇಶ್ ಯು, ಸಂಪ್ಯ ಪೊಲೀಸ್ ಠಾಣೆ ಎಸ್.ಐ ಉದಯರವಿ ಎಂ ಪೈ, ಎಸ್.ಐಗಳಾದ ಅಮೀನ್ ನಾಬ್ ಅತ್ತಾರ್ ಮತ್ತು ವಿಶೇಷ ತಂಡದ ಸಿಬ್ಬಂದಿಗಳಾದ ಪ್ರವೀಣ್ ರೈ ಪಾಲ್ತಾಡಿ, ಮುರುಗೇಶ್, ಶಿವರಾಮ ಗೌಡ, ಧರ್ಣಪ್ಪ ಗೌಡ, ವರ್ಗಿಸ್, ಕೃಷ್ಣಪ್ಪ ಗೌಡ, ದೇವರಾಜ್, ಹಾಗೂ ಗಾಯತ್ರಿ ಮತ್ತು ಜಿಲ್ಲಾ ಗಣಕ ಯಂತ್ರ ವಿಭಾಗದ ಸಂಪತ್ ಮತ್ತು ದಿವಾಕರ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಪ್ರಕರಣ ನಡೆದ ಒಂದೇ ತಿಂಗಳಿನಲ್ಲಿ ಭೇದಿಸಿದ ಪೊಲೀಸ್ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಬಹುಮಾನವನ್ನು ಘೋಷಿಸಿದ್ದು, ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next