ಹೊಸದಿಲ್ಲಿ: ಉಕ್ರೇನ್ ವಿರುದ್ಧ ಯುದ್ದಕ್ಕಾಗಿ ರಷ್ಯಾದ ಸೇನೆಯಿಂದ ನೇಮಕಗೊಂಡ ಇನ್ನಿಬ್ಬರು ಭಾರತೀಯರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಹೇಳಿಕೆ ದೃಢಪಡಿಸಿದೆ.
ಯುದ್ಧದಲ್ಲಿ ಭಾಗಿಯಾಗಿ ಸಾವನ್ನಪ್ಪಿದ ಭಾರತೀಯರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. , ಪ್ರಾಣ ಕಳೆದುಕೊಂಡ ಇಬ್ಬರು ಭಾರತೀಯರ ಗುರುತು ಇನ್ನೂ ಬಹಿರಂಗವಾಗಿಲ್ಲ.
“ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ರಷ್ಯಾದ ಸೇನೆಯಿಂದ ನೇಮಕಗೊಂಡ ಇಬ್ಬರು ಭಾರತೀಯರು ಇತ್ತೀಚೆಗೆ ಹತ್ಯೆಗೀಡಾದ್ದಾರೆ ಎಂದು ಹೇಳಲು ನಾವು ವಿಷಾದಿಸುತ್ತೇವೆ” ಎಂದು ವಿದೇಶಾಂಗ ಇಲಾಖೆ ಹೇಳಿದೆ.
ರಷ್ಯಾದ ಸೈನ್ಯದಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳನ್ನು ಶೀಘ್ರ ಬಿಡುಗಡೆ ಮಾಡಲು ಮತ್ತು ಹಿಂದಿರುಗಿಸಲು ಭಾರತವು ಹೊಸ ದೆಹಲಿಯಲ್ಲಿರುವ ರಷ್ಯಾದ ರಾಯಭಾರಿ ಮತ್ತು ಮಾಸ್ಕೋದಲ್ಲಿ ರಷ್ಯಾದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದೆ. ಮೃತರ ಕುಟುಂಬಗಳಿಗೆ ನಾವು ನಮ್ಮ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ಮಾಸ್ಕೋದಲ್ಲಿರುವ ನಮ್ಮ ರಾಯಭಾರ ಕಚೇರಿಯು ರಕ್ಷಣ ಸಚಿವಾಲಯ ಸೇರಿದಂತೆ ರಷ್ಯಾದ ಅಧಿಕಾರಿಗಳಿಗೆ ಮೃತ ದೇಹಗಳನ್ನು ಶೀಘ್ರವಾಗಿ ಮರಳಿಸಲು ಒತ್ತಾಯಿಸಿದೆ” ಎಂದು ಹೇಳಿದೆ.
“ರಷ್ಯಾದ ಸೇನೆಯಿಂದ ನಮ್ಮ ಪ್ರಜೆಗಳ ಯಾವುದೇ ನೇಮಕಾತಿಯನ್ನು ಪರಿಶೀಲಿಸಲು ಭಾರತ ಒತ್ತಾಯಿಸಿದೆ. ಅಂತಹ ಚಟುವಟಿಕೆಗಳು ನಮ್ಮ ಪಾಲುದಾರಿಕೆಗೆ ಅನುಗುಣವಾಗಿರುವುದಿಲ್ಲ” ಎಂದು ಒತ್ತಿ ಹೇಳಿದೆ. ರಷ್ಯಾದಲ್ಲಿ ಉದ್ಯೋಗಾವಕಾಶಗಳನ್ನು ಹುಡುಕುವಾಗ ಎಚ್ಚರಿಕೆ ವಹಿಸುವಂತೆ ಸಚಿವಾಲಯವು ಭಾರತೀಯ ಪ್ರಜೆಗಳಿಗೆ ಮತ್ತೊಮ್ಮೆ ಒತ್ತಾಯಿಸಿದೆ.