ಬಹಳ ಕಾಲದ ಹಿಂದೆ ಎರಡು ತಲೆಯುಳ್ಳ ಪಕ್ಷಿಯೊಂದು ವಾಸವಿತ್ತು. ಅದು ಯಾವಾಗಲೂ ನದಿಯ ತೀರದಲ್ಲಿದ್ದ ದೊಡ್ಡ ಆಲದ ಮರದ ಮೇಲೆ ಕುಳಿತು, ಪ್ರಕೃತಿಯ ರಮ್ಯ ವಾತಾವರಣವನ್ನು ವೀಕ್ಷಿಸುತ್ತಾ, ಮೈ ಮರೆಯುತ್ತಿತ್ತು. ಆ ಪಕ್ಷಿಗೆ ಎರಡು ತಲೆ ಇತ್ತಾದರೂ, ಹೊಟ್ಟೆ ಮಾತ್ರ ಒಂದೇ ಇತ್ತು. ಒಂದು ದಿನ ಅದಕ್ಕೆ ಆಲದ ಮರದ ವಾತಾವರಣ ಬೇಸರ ತಂದಿತು.
ಹೊರಗೆಲ್ಲಾದರೂ ಸುತ್ತಾಡಿಕೊಂಡು ಬರೋಣವೆಂದು ಹೊರಟಾಗ, ಸೇಬು ತೋಟವೊಂದು ಅದರ ಕಣ್ಣಿಗೆ ಬಿತ್ತು. ಯಾರಿಗೂ ಗೊತ್ತಾಗದ ಹಾಗೆ, ತೋಟದ ಮಧ್ಯದ ಒಂದು ಮರದ ಮೇಲೆ ಹೋಗಿ ಕುಳಿತಿತು. ತುಂಬಾ ರುಚಿರುಚಿಯಾದ ಹಣ್ಣುಗಳ ತೋಟವದು. ಪಕ್ಷಿಯ ಒಂದನೇ ತಲೆಗೆ ವಿಪರೀತ ಆಸೆಯಾಗಿ, ಹಣ್ಣನ್ನು ತಿನ್ನಲು ಮುಂದಾಯಿತು. ಇದನ್ನು ಕಂಡು ಎರಡನೇ ತಲೆಗೆ ಹೊಟ್ಟೆಕಿಚ್ಚಾಯಿತು; “ನಾನು ಅತ್ಯಂತ ಕಿರಿಯ ತಲೆ. ಮೊದಲು ನಾನು ತಿನ್ನಬೇಕು’ ಎಂದು ಅದು ಪಟ್ಟು ಹಿಡಿಯಿತು.
ಮೊದಲನೇ ತಲೆ ಅದಕ್ಕೆ ಬುದ್ಧಿವಾದ ಹೇಳಿ, “ನೋಡು… ನಮಗೆ ಎರಡು ತಲೆ ಇದ್ದರೂ ಇರೋದು ಒಂದೇ ಹೊಟ್ಟೆ. ಯಾರು ಮೊದಲು ತಿಂದರೇನು? ನಂತರ ತಿಂದರೇನು? ಬೇಕೆನಿಸಿದ್ದನ್ನು ತಿನ್ನೋಣ. ನಮ್ಮ ಆಸೆಗಳನ್ನು ನಿಗ್ರಹಿಸಿಕೊಳ್ಳುವುದು ಬೇಡ’ ಎಂದಿತು. ಎರಡನೇ ತಲೆಗೆ ಈ ಮಾತನ್ನು ಕೇಳುವಷ್ಟು ಸಂಯಮವಿರಲಿಲ್ಲ. ಸಿಡುಕು ಮೋರೆಯಿಂದ, ಪ್ರತಿಭಟಿಸತೊಡಗಿತು. ಅಷ್ಟರಲ್ಲಾಗಲೇ ಒಂದನೇ ತಲೆ ಸೇಬು ಹಣ್ಣನ್ನು ತಿಂದು, ತೇಗಿಯಾಗಿತ್ತು.
ಮರುದಿನ ಪಕ್ಷಿ ಮತ್ತೆ ಹೊರಗೆ ಹೊರಟಿತು. ಹಾರುತ್ತಾ ಹಾರುತ್ತಾ, ರೆಕ್ಕೆ ಬಳಲಿದ ಕಾರಣ, ಒಂದು ಮರದ ಮೇಲೆ ಹೋಗಿ ಕುಳಿತಿತು. ಅದು ವಿಷದ ಮರ. ಅಲ್ಲಿ ವಿಷಪೂರಿತ ಹಣ್ಣುಗಳು ತೂಗಿಬಿದ್ದಿದ್ದವು. ಹೇಗಾದರೂ ಮಾಡಿ ಸೇಡು ತೀರಿಸಿಕೊಳ್ಳಲೇಬೇಕೆಂದು ಪಣತೊಟ್ಟಿದ್ದ ಎರಡನೇ ತಲೆ, ಆ ಹಣ್ಣುಗಳನ್ನು ತಿನ್ನಲು ಮುಂದಾಯಿತು. ಒಂದನೇ ತಲೆ ಇದಕ್ಕೆ ಪ್ರತಿರೋಧಿಸುತ್ತಾ, “ನೋಡು ಇಂಥ ಹಣ್ಣುಗಳನ್ನು ತಿನ್ನಬಾರದು. ನಮಗಿರುವುದು ಒಂದೇ ಹೊಟ್ಟೆ.
ವಿಷದ ಹಣ್ಣನ್ನು ತಿಂದರೆ, ನಮ್ಮ ಜೀವವೇ ಹೊರಟು ಹೋಗುತ್ತೆ’ ಎಂದು ಎಚ್ಚರಿಸಿತು. ಸೊಕ್ಕಿನಿಂದ ವರ್ತಿಸುತ್ತಿದ್ದ ಎರಡನೇ ತಲೆ, ಈ ಬುದ್ಧಿಮಾತುಗಳನ್ನು ಕೇಳಿಸಿಕೊಳ್ಳಲೇ ಇಲ್ಲ. “ಆಸೆಯ ನಿಗ್ರಹ ತಪ್ಪು. ಬೇಕೆನಿಸಿದ್ದನ್ನು ತಿಂದುಬಿಡಬೇಕು ಎಂದು ನೀನೇ ಹೇಳಿದ್ದೆ…’ ಎಂದು ಚುಚ್ಚಿ ಮಾತಾಡುತ್ತಾ, ವಿಷದ ಹಣ್ಣನ್ನು ಕೊಕ್ಕಿನಿಂದ ಕುಟುಕಿ ತಿನ್ನತೊಡಗಿತು. ಕೆಲವೇ ನಿಮಿಷಗಳಲ್ಲಿ ಪಕ್ಷಿಯ ಪ್ರಾಣ ಹಾರಿಹೋಯಿತು.
* ಮೇರಿ