Advertisement

ಇಬ್ಬರು ಸುಲಿಗೆಕೋರರ ಕಾಲಿಗೆ ಗುಂಡು

11:59 AM Mar 28, 2019 | Team Udayavani |
ಬೆಂಗಳೂರು: ಹೆಸರಘಟ್ಟ ಮುಖ್ಯರಸ್ತೆ ಸೇರಿದಂತೆ ಇನ್ನಿತರೆ ಭಾಗಗಳಲ್ಲಿ ರಾತ್ರಿ ವೇಳೆ ಚಾಕು ತೋರಿಸಿ ಸುಲಿಗೆ ಮಾಡುತ್ತಿದ್ದ ಇಬ್ಬರು ಸುಲಿಗೆಕೋರರ ಕಾಲಿಗೆ ಗುಂಡು ಹಾರಿಸಿ, ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದೇವರಾಜು (25), ಚಂದ್ರಶೇಖರ್‌ (23) ಕಾಲಿಗೆ ಗುಂಡೇಟು ತಿಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದೇ ಪ್ರಕರಣದಲ್ಲಿ ಮಂಜೇಗೌಡ ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಗಳ ಬಂಧನದಿಂದ 8 ಸುಲಿಗೆ ಪ್ರಕರಣಗಳು ಪತ್ತೆಯಾಗಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತರಬನಹಳ್ಳಿ ಸಮೀಪ ಮಂಗಳವಾರ ರಾತ್ರಿ ಮೂವರು ಆರೋಪಿಗಳು ಸುಲಿಗೆ ಮಾಡಲು ಹೊಂಚುಹಾಕುತ್ತಿದ್ದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿತ್ತು. ನಂತರ ಶುಕ್ರವಾರ ಬೆಳಗ್ಗೆ 7.15ರ ಸುಮಾರಿಗೆ ಆರೋಪಿಗಳು ಸುಲಿಗೆಗೆ ಬಳಸುತ್ತಿದ್ದ ಚಾಕು, ಡ್ರ್ಯಾಗರ್‌ ಜಪ್ತಿ ಮಾಡಲು ಆಚಾರ್ಯ ಕಾಲೇಜು ಹಿಂಭಾಗದ ಅರಣ್ಯಪ್ರದೇಶಕ್ಕೆ ಮೂವರನ್ನೂ ಪೊಲೀಸರು ಕರೆದೊಯ್ದಿದ್ದರು.
ಮಾರಕಾಸ್ತ್ರಗಳನ್ನು ತೆಗೆದುಕೊಡುವಾಗಲೇ ಆರೋಪಿ ದೇವರಾಜು, ಪ್ರೊಬೆಷನರಿ ಪಿಎಸ್‌ಐ ವಸಂತಕುಮಾರ್‌ ಮೇಲೆ ಹಲ್ಲೆಗೆ ಯತ್ನಿಸಿದ, ಮತ್ತೂಬ್ಬ ಆರೋಪಿ ಮುಖ್ಯ ಪೇದೆ ಶಿವಾಜಿರಾವ್‌ ಅವರ ಮೇಲೆ ಕಲ್ಲುಗಳಿಂದ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಹೀಗಾಗಿ ಸೋಲದೇವನಹಳ್ಳಿ ಇನ್ಸ್‌ಪೆಕ್ಟರ್‌ ವೆಂಕಟೇಗೌಡ, ತಮ್ಮ ಸರ್ವೀಸ್‌ ರಿವಾಲ್ವರ್‌ನಿಂದ ಒಂದು ಸುತ್ತು ಗಾಳಿಯಲ್ಲಿ ಗುಂಡುಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ.
ಬಗ್ಗದ ಆರೋಪಿಗಳು, ಹಲ್ಲೆ ಮುಂದುವರಿಸಿದ್ದರು. ಈ ವೇಳೆ ಇನ್ಸ್‌ಪೆಕ್ಟರ್‌ ವೆಂಕಟೇಗೌಡ ಆತ್ಮ ರಕ್ಷಣೆ ಉದ್ದೇಶದಿಂದ ದೇವರಾಜನ ಬಲಗಾಲು ಹಾಗೂ ಚಂದ್ರಶೇಖರನ ಎಡಕಾಲಿಗೆ ಒಂದೊಂದು ಗುಂಡು ಹೊಡೆದಿದ್ದಾರೆ. ಗುಂಡೇಟಿನಿಂದ ಕುಸಿದುಬಿದ್ದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ವಿವರಿಸಿದರು.
ಆರೋಪಿಗಳಿಬ್ಬರಿಗೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಹಲ್ಲೆಗೊಳಗಾಗಿದ್ದ ಪಿಎಸ್‌ಐ ವಸಂತ್‌ಕುಮಾರ್‌ ಹಾಗೂ ಮುಖ್ಯಪೇದೆ ಶಿವಾಜಿರಾವ್‌ ಚಿಕಿತ್ಸೆ ಪಡೆದು, ವಿಶ್ರಾಂತಿಯಲ್ಲಿದ್ದಾರೆ ಎಂದು ಅಧಿಕಾರಿ ಹೇಳಿದರು.
ವಿದ್ಯಾರ್ಥಿಗಳೇ ಟಾರ್ಗೆಟ್‌!
ರಾತ್ರಿಯಾಗುತ್ತಿದ್ದಂತೆ ಕಂಠಪೂರ್ತಿ ಮದ್ಯ ಸೇವಿಸುತ್ತಿದ್ದ ಆರೋಪಿಗಳು, ಆಚಾರ್ಯ ಕಾಲೇಜಿನ ಮುಖ್ಯರಸ್ತೆಗೆ ಬಂದು, ಮೊಬೈಲ್‌ನಲ್ಲಿ ಮಾತನಾಡುತ್ತಾ ನಡೆದು ಹೋಗುವ ವಿದ್ಯಾರ್ಥಿಗಳನ್ನು ಹಿಂಬಾಲಿಸುತ್ತಿದ್ದರು. ಬಳಿಕ ಚಾಕು ತೋರಿಸಿ ಮೊಬೈಲ್‌ ಸೇರಿದಂತೆ ಇನ್ನಿತರೆ ವಸ್ತುಗಳನ್ನು ಸುಲಿಗೆ ಮಾಡುತ್ತಿದ್ದರು. ಬಹುತೇಕರು ಆರೋಪಿಗಳಿಗೆ ಹೆದರಿ ದೂರು ನೀಡುತ್ತಿರಲಿಲ್ಲ. 10 ದಿನಗಳ ಹಿಂದೆ ಸೋಲದೇವನಹಳ್ಳಿ ರಸ್ತೆಯಲ್ಲಿ ಮಗುವಿನ ಜತೆ ಬೈಕ್‌ನಲ್ಲಿ ತೆರಳುತ್ತಿದ್ದ ಮಗುವಿನ ಜತೆ ದಂಪತಿಯನ್ನು ಅಡ್ಡಗಟ್ಟಿದ್ದ ಆರೋಪಿಗಳು, ಅವರ ಬಳಿ ಇದ್ದ ಚಿನ್ನದ ಸರ ಹಾಗೂ ಮೊಬೈಲ್‌ ಕಿತ್ತುಕೊಂಡಿದ್ದರು. ಅದೇ ರೀತಿ ಗ್ರಾನೈಟ್‌ ಕೆಲಸ ಮಾಡುವ ಉತ್ತರ ಭಾರತ ಮೂಲದ ವ್ಯಕ್ತಿ ವಾಸವಿದ್ದ ನಿರ್ಮಾಣ ಹಂತದ ಕಟ್ಟಡದ ಶೆಡ್‌ಗೆ ನಡುರಾತ್ರಿ ನುಗ್ಗಿದ್ದ ಆರೋಪಿಗಳು, ಆತನಿಗೆ ಚಾಕುವಿನಿಂದ ಇರಿದು ಮೊಬೈಲ್‌, ಹಣ ಕಿತ್ತುಕೊಂಡಿದ್ದರು. ಆರೋಪಿಗಳು ಇನ್ನೂ ಹೆಚ್ಚಿನ
ಕೃತ್ಯಗಳನ್ನು ಎಸಗಿರುವ ಸಾಧ್ಯತೆಯಿದೆ ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.
Advertisement

Udayavani is now on Telegram. Click here to join our channel and stay updated with the latest news.

Next