ಬೆಂಗಳೂರು: ಶಿಕ್ಷಣ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ಸರಕಾರಿ ಶಾಲಾ ಮಕ್ಕಳಿಗೆ ಎರಡನೇ ಜತೆ ಸಮವಸ್ತ್ರ ವಿತರಿಸಲು ಸಚಿವ ಸಂಪುಟ ಸಭೆ ಮಂಗಳವಾರ ಒಪ್ಪಿಗೆ ನೀಡಿದೆ.
ಸಂಪುಟ ಸಭೆ ಬಳಿಕ ಮಾಹಿತಿ ನೀಡಿದ ಸಚಿವ ಜೆ.ಸಿ. ಮಾಧುಸ್ವಾಮಿ, ಸರಕಾರಿ ಶಾಲಾ ಮಕ್ಕಳಿಗೆ ಎರಡನೇ ಜತೆ ಸಮವಸ್ತ್ರ ವಿತರಣೆ ವಿಚಾರ ನ್ಯಾಯಾಲಯದ ಮೆಟ್ಟಿಲೇರಿತ್ತು. ಹೈಕೋರ್ಟ್ ಆದೇಶದಂತೆ ಎರಡನೇ ಜತೆ ಸಮವಸ್ತ್ರ ವಿತರಿಸಲು ಒಪ್ಪಿಗೆ ನೀಡಲಾಗಿದೆ. ಸಂಪುಟ ಸಭೆಯಲ್ಲಿ ಶಿಕ್ಷಣ ಸಚಿವರು ಈ ವಿಷಯವನ್ನು ದಿಢೀರ್ ಪ್ರಸ್ತಾವಿಸಿದ ಹಿನ್ನೆಲೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ. ಹಾಗಾಗಿ ವೆಚ್ಚ ಸಹಿತ ಹೆಚ್ಚಿನ ಮಾಹಿತಿ ಇಲ್ಲ ಎಂದು ತಿಳಿಸಿದರು.
ಮಸೂದೆಗಳನ್ನು ವಿಧಾನ ಮಂಡಲದಲ್ಲಿ ಅನುಮೋದಿಸಿದಾಗ ಅದನ್ನು ಇಂಗ್ಲಿಷ್ ಭಾಷೆಯಲ್ಲಿ ರಾಜ್ಯಪಾಲರಿಗೆ ರವಾನಿಸಿದರೆ ಅನುಮೋದನೆ ಪಡೆಯಲಾಗುತ್ತಿತ್ತು. ಒಂದೊಮ್ಮೆ ಮಸೂದೆ ಕನ್ನಡ ಭಾಷೆಯಲ್ಲಿದ್ದರೆ ರಾಜ್ಯಪಾಲರು ಅಂಕಿತ ಹಾಕಿದ ಬಳಿಕ ವಿಧಾನಮಂಡಲದಲ್ಲಿ ಒಪ್ಪಿಗೆ ಪಡೆಯಬೇಕಿತ್ತು. ಇನ್ನು ಮುಂದೆ ಅದನ್ನು ಇಲಾಖಾ ಮಟ್ಟದಲ್ಲೇ ಅನುಮೋದನೆ ಪಡೆಯುವ ಸಂಬಂಧ ಕರ್ನಾಟಕ ಅಧಿಕೃತ ಭಾಷೆ ತಿದ್ದುಪಡಿ ಮಸೂದೆಗೆ ಒಪ್ಪಿಗೆ ಪಡೆಯಲಾಗಿದೆ ಎಂದು ಹೇಳಿದರು.
ನೆರೆ ಪ್ರದೇಶದ ಜನ ಸಂಕಷ್ಟದಲ್ಲಿದ್ದರೂ ಸರಕಾರ ಆಯ್ದ ವಿಧಾನ ಸಭಾ ಕ್ಷೇತ್ರಗಳಿಗೆ ನೂರಾರು ಕೋ.ರೂ. ಅನುದಾನ ನೀಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಯೋಜನೆಗಳೆಲ್ಲ ಜಾರಿಯಾಗಲು ಒಂದೆರಡು ವರ್ಷಗಳಾಗಲಿದ್ದು, ಬಜೆಟ್‌ನಲ್ಲಿ ಹಣ ಕಾಯ್ದಿರಿಸಲಾಗುವುದು. ಸದ್ಯಕ್ಕೆ ಆಡಳಿತಾತ್ಮಕ ಒಪ್ಪಿಗೆ ನೀಡಲಾಗುತ್ತಿದ್ದು, ನಾಳೆಯೇ ಹಣ ಬಿಡುಗಡೆ ಮಾಡುವುದಿಲ್ಲ. ಹಂತ ಹಂತವಾಗಿ ಹಣ ಬಿಡುಗಡೆಯಾಗಲಿದೆ. ಯೋಜನ ಪ್ರಕ್ರಿಯೆಯನ್ನು ಮುಂದುವರಿಸಲು ಆಡಳಿತಾತ್ಮಕ ಅನುಮೋದನೆ ಸಿಗಲಿದೆ ಎಂದು ಹೇಳಿದರು.
ನೀತಿ ಸಂಹಿತೆ
ರಾಜ್ಯದ 15 ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ವೇಳಾಪಟ್ಟಿ ಮಾರ್ಪಾಡಾಗಿದ್ದು, ನ. 11 ರಿಂದ ನೀತಿ ಸಂಹಿತೆ ಜಾರಿಯಾಗಲಿದೆ. ನಗರ ಪ್ರದೇಶಗಳಲ್ಲಿ ಉಪ ಚುನಾವಣೆ ಘೋಷಣೆಯಾಗಿರುವ ಕ್ಷೇತ್ರಗಳ ವ್ಯಾಪ್ತಿಗಷ್ಟೇ ನೀತಿ ಸಂಹಿತೆ ಅನ್ವಯವಾಗಲಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಉಪ ಚುನಾವಣೆ ಘೋಷಣೆಯಾಗಿರುವ ವಿಧಾನಸಭಾ ಕ್ಷೇತ್ರವಿರುವ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿಯಾಗಲಿರುವ ಬಗ್ಗೆ ಸಭೆಯಲ್ಲಿ ಚರ್ಚಿಸಿ ನಡಾವಳಿಯಲ್ಲಿ ದಾಖಲಿಸಲಾಯಿತು ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.