Advertisement

ಮಾಲಿನಿಯ ದೂತನ ಮುಖದಲ್ಲಿ “ಎರಡು ಮುಖ’ 

12:30 AM Jan 18, 2019 | Team Udayavani |

ಯಕ್ಷಗಾನದಲ್ಲಿ ಉತ್ತಮ ಬಣ್ಣಗಾರ ಅಥವಾ ಕಲೆಗಾರನಿಗೆ ತನ್ನ ಕುಂಚ ನೈಪುಣ್ಯವನ್ನು ಸಾದರಪಡಿಸಲು ಇರುವ ಅವಕಾಶವೆಂದರೆ ಕಾಟು ರಕ್ಕಸನ ಬಣ್ಣದ ವೇಷ ಹಾಗೂ ಹಾಸ್ಯಗಾರನ ವೇಷ. ಈ ಪಾತ್ರಗಳಲ್ಲಿ ಕಲಾವಿದ ಚಿತ್ರಕಲೆಯ ಕಲ್ಪನೆಯನ್ನು ಉತ್ತಮವಾಗಿ ಬಿಂಬಿಸಲು ಸಾಧ್ಯವಿದೆ . ಸಮರ್ಥ ಬಣ್ಣದ ವೇಷಧಾರಿಗಳು ಕಾಟುರಕ್ಕಸನ ಪಾತ್ರದಲ್ಲಿ ಈ ಮೊದಲೇ ತಮ್ಮ ಅದ್ಭುತ ಕಲ್ಪನೆಯ ಮೂಲಕ ಬಣ್ಣಗಾರಿಕೆ ಮಾಡುತ್ತಿರುವುದು ಉಲ್ಲೇಖನೀಯ. ಕಟೀಲು ಆರನೇ ಮೇಳದ ಪ್ರಧಾನ ಹಾಸ್ಯಗಾರರಾದ ಪೂರ್ಣೇಶ ಆಚಾರ್ಯರು ಇತ್ತೀಚೆಗೆ ಪುತ್ತೂರಿನಲ್ಲಿ ಜರಗಿದ ಶ್ರೀದೇವಿ ಮಹಾತ್ಮೆಪ್ರಸಂಗದಲ್ಲಿ ಮಾಲಿನಿ ದೂತನಾಗಿ ಅದ್ಭುತ ಬಣ್ಣಗಾರಿಕೆಯ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ . 

Advertisement

 ಮಾಲಿನಿ ದೂತನು ಸಾಮಾನ್ಯವಾಗಿ ನಿರ್ವಹಿಸುವ ವಿಧಾನವನ್ನೇ ಬದಲಾಯಿಸಿರುವ ಪೂರ್ಣೇಶರ ಬಣ್ಣಗಾರಿಕೆ , ಸಂಭಾಷಣೆ , ನಾಟ್ಯ – ಎಲ್ಲದರಲ್ಲೂ ಪರಂಪರೆ ಮೀರದ ಹೊಸತನವಿದೆ .ಮುಖದಲ್ಲಿ ಫ‌ುಟ್‌ಬಾಲ್‌ನ ಚಿತ್ರ , ಬೋಳು ತಲೆಯ ಮೇಲೆ ಕೊಂಬು , ತಾನೇ ಸ್ವತಃ ಪೀಲಿಯಿಂದ ರಚಿಸಿದ ಕಿರೀಟ , ಕಿವಿ , ಮೂಗುಗಳ ಬಳಕೆ – ಇವೆಲ್ಲಾ ಪೂರ್ಣೇಶರ ಅನ್ವೇಷಣೆಗಳು . 

ಮಾಲಿನಿ ದೂತನಾಗಿ ಪೂರ್ಣೇಶರ ಬಣ್ಣಗಾರಿಕೆ ಗಮನಿಸಿ. ಈ ಫೋಟೋ ಮೇಲಿನಿಂದ ಕೆಳಗೆ ತಿರುಗಿಸಿ ನೋಡಿ . ಬೇರೆಯೇ ವ್ಯಕ್ತಿ ಕಾಣಿಸಿಕೊಳ್ಳುತ್ತಾನೆ . ಮುಖದಲ್ಲಿ ಉಲ್ಟಾ ಬಣ್ಣಗಾರಿಕೆ ಮಾಡಿ ಮೇಲಿನಿಂದ ನೋಡಿದರೂ , ಕೆಳಗಿನಿಂದ ನೋಡಿದರೂ ಬೇರೆ ಬೇರೆ ಮುಖವೇ ಕಾಣುವಂತೆ ಮುಖವರ್ಣಿಕೆ ಮಾಡಿದ್ದಾರೆ . ನಾವು ಇಂಥಹ ಚಿತ್ರಗಳನ್ನು ನೋಡಿದ್ದೇವೆ . ಆದರೆ  ಇಂಥದ್ದನ್ನು ಮಾಡಲೂ ಸಾಧ್ಯ ಎಂದು ಪೂರ್ಣೇಶರು ತಮ್ಮದೇ ಕಲ್ಪನೆಯ ಮೂಲಕ ತೋರಿಸಿದ್ದಾರೆ . ಹಾಸ್ಯ ಪಾತ್ರಗಳ ಬಣ್ಣಗಾರಿಕೆಯಲ್ಲಿ ಈ ತರದ ಸೃಜನಶೀಲತೆ ಪ್ರಥಮ ಎನ್ನಬಹುದು . ಹಿಂದೆ ದಿ.ವಿಟ್ಲ ಗೋಪಾಲಕೃಷ್ಣ ಜೋಷಿಯವರು ಹಾಸ್ಯ ಪಾತ್ರಗಳಲ್ಲಿಯ ವೇಷಭೂಷಣಗಳಲ್ಲಿ ಆಮೂಲಾಗ್ರ ಬದಲಾವಣೆ ತಂದವರು . ತಮ್ಮ ಮುಖವನ್ನು ಅಗಲವಾಗಿ ಕಾಣುವಂತೆ ವಿಶಿಷ್ಠವಾದ ಬಣ್ಣಗಾರಿಕೆ ಮಾಡುತ್ತಿದ್ದರು. ಆದರೆ ಇದು ಅದಕ್ಕಿಂತಲೂ ಭಿನ್ನವಾಗಿದೆ. ಪೂರ್ಣೇಶರ ಈ ಪಾತ್ರ ಯಕ್ಷಗಾನದಲ್ಲಿಯ ಸೃಜನಶೀಲತೆಯ ಬಣ್ಣಗಾರಿಕೆಗೆ ಇನ್ನೊಂದು ಉದಾಹರಣೆ.ಹೊಸತನದ ಈ ಬಣ್ಣಗಾರಿಕೆಗೆ ಅವರು ಸುಮಾರು 30 ನಿಮಿಷ ವ್ಯಯಿಸಿ¨ªಾರೆ. ಮುಖದಲ್ಲಿರುವ ನಿಜವಾದ ಕಣ್ಣನ್ನು ಬಣ್ಣದ ಮೂಲಕ ಮರೆಮಾಚಿ , ನೈಜ ಕಣ್ಣಿನ ಕೆಳಗೆ ಬಣ್ಣದಲ್ಲೇ ಕಣ್ಣನ್ನು ಚಿತ್ರಿಸಿದ್ದಾರೆ. ರಂಗಸ್ಥಳದಲ್ಲಿ ಕಣ್ಣನ್ನು ಮುಚ್ಚಿಯೇ ಸುಮಾರು 15 ನಿಮಿಷಗಳ ಕಾಲ ನಾಟ್ಯಾಭಿನಯ ನೀಡಿದ್ದಾರೆ .  

 ಎಂ .ಶಾಂತರಾಮ ಕುಡ್ವ

Advertisement

Udayavani is now on Telegram. Click here to join our channel and stay updated with the latest news.

Next