ವಿಜಯಪುರ: ಜಿಲ್ಲೆಯಲ್ಲಿ ಮತ್ತೆ ಭೂಕಂಪದ ಆತಂಕ ಮುಂದುವರೆದಿದೆ. ಶುಕ್ರವಾರ ರಾತ್ರಿ 9-47 ರ ಸುಮಾರಿಗೆ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಪರಿಸರದಲ್ಲಿ ಲಘು ಭೂಕಂಪನ ಸಂಭವಿಸಿದೆ.
2.8 ತೀವ್ರತೆ ಹೊಂದಿದ್ದ ಭೂಕಂಪನ ಭೂಮಿಯ 10 ಕಿ.ಮೀ. ಆಳದಲ್ಲಿ ಕಂಪನ ಸೃಷ್ಡಿಸಿದ್ದು, ನಂದಿಹಾಳ ಪಿ.ಯು., ಹತ್ತರಕಿಹಾಳ ಭಾಗದ ಭೂಮಿ ಕಂಪಿಸುತ್ತಲೇ ಚಳಿಯನ್ನೂ ಲೆಕ್ಕಿಸದೇ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.
ಮನಗೂಳಿ ಜನರು ಶುಕ್ರವಾರ ರಾತ್ರಿ ನಿದ್ದೆಗೆಡುವಂತೆ ಮಾಡಿದ ಬೆನ್ನಲ್ಲೇ ಶನಿವಾರ ನಸುಕಿನಲ್ಲಿ ವಿಜಯಪುರ ಹೊರ ವಲಯದಲ್ಲಿ ಭೂಕಂಪನ ಆತಂಕ ಸೃಷ್ಟಿಸಿದೆ.
ಶನಿವಾರ ಬೆಳಿಗ್ಗೆ 4-40 ಕ್ಕೆ ಲಘು ಭೂಕಂಪನ ಸಂಭವಿಸಿದ್ದು, 2.8 ತೀವ್ರತೆ ಹೊಂದಿತ್ತು. ವಿಜಯಪುರ ನಗರದ ಹೊರ ವಲಯದ ಹಂಚನಾಳ ಗ್ರಾಮದ ಪರಿಸರದಲ್ಲಿ ಭೂಮಿಯ 5 ಕಿ.ಮೀ. ಆಳದಲ್ಲಿ ವಿಜಯಪುರ ನಗರ, ಭರಟಗಿ, ಭೂತನಾಳ, ಹಂಚನಾಳ ಭಾಗದಲ್ಲಿ ಭೂಮಿ ಕಂಪಿಸಿದೆ. ಹೀಗಾಗಿ ನಿದ್ದೆಯ ಮಂಪರಿನಲ್ಲಿದ್ದ ಜನರು ಭಯಭೀತರಾಗಿ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.
ಇದನ್ನೂ ಓದಿ:ಟೇಕ್-ಆಫ್ ಆಗುವ ಮುನ್ನ ಇಂಡಿಗೋ ವಿಮಾನದ ಇಂಜಿನ್ ಗೆ ಬೆಂಕಿ: VIDEO
ಈ ಎರಡೂ ಭೂಕಂಪನಗಳನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಘಟಕ ಖಚಿತ ಪಡಿಸಿದೆ. ಅಲ್ಲದೇ ಭೂಕಂಪನದ ಅಪಾಯ ರಹಿತ ಮೂರನೇ ವಲಯದಲ್ಲಿ ಬರುತ್ತಿರುವ ಕಾರಣ ಗಂಭೀರ ಅಪಾಯವೇನು ಇಲ್ಲ. ಹೀಗಾಗಿ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಘಟಕದ ನಿರ್ದೇಶಕ ಡಾ.ಮನೋಜ ರಾಜನ್ ಸ್ಪಷ್ಟಪಡಿಸಿದ್ದಾರೆ.