ನ್ಯೂಯಾರ್ಕ್: ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ ಎರಡು ಬೃಹತ್ ಕಟ್ಟಡಗಳ ಮೇಲೆ ಆಲ್ ಕೈದಾ ಉಗ್ರರು ದಾಳಿ ನಡೆಸಿ ಇಂದಿಗೆ ಭರ್ತಿ ಎರಡು ದಶಕವಾಗಿದೆ. 2001ರ ಸೆಪ್ಟೆಂಬರ್ 11ರಂದು ಆಲ್ ಕೈದಾ ಉಗ್ರರು ಟ್ವಿನ್ ಟವರ್ ನ ಮೇಲೆ ವಿಮಾನದಿಂದ ದಾಳಿ ನಡೆಸಿದ್ದರು.
ನ್ಯೂಯಾರ್ಕ್‌ನಲ್ಲಿನ ವಿಶ್ವ ವ್ಯಾಪಾರ ಕೇಂದ್ರದ ಅವಳಿ ಕಟ್ಟಡಗಳ ಮೇಲಿನ ದಾಳಿಯಲ್ಲಿ ಸುಮಾರು 3 ಸಾವಿರ ಜನರು ಮೃತಪಟ್ಟು, 6 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಒಟ್ಟು 4 ವಿಮಾನ ಅಪಹರಿಸಿದ್ದ 19 ಅಲ್ ಕೈದಾ ಉಗ್ರರ ಪಡೆ 110 ಮಹಡಿಗಳ ಅವಳಿ ಗೋಪುರಗಳಿಗೆ ನುಗ್ಗಿಸಿತ್ತು.
ಟ್ವಿನ್ ಟವರ್ ಮೇಲೆ ನಡೆದ ದಾಳಿಗೆ ಸೇಡು ತೀರಿಸಿಕೊಳ್ಳಲು ಅಂದಿನ ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್ ನಿರ್ಧಾರ ಕೈಗೊಂಡರು. 2001ರ ಅಕ್ಟೋಬರ್ 7ರಂದು ಬ್ರಿಟನ್ ಸಹಾಯದೊಂದಿಗೆ ಅಮೆರಿಕ ಸೇನೆಯು ಆಲ್ ಕೈದಾ ಮತ್ತು ತಾಲಿಬಾನ್ ಪಡೆಗಳ ವಿರುದ್ಧ ಅಫ್ಗಾನಿಸ್ತಾನದಲ್ಲಿ ದಾಳಿ ಆರಂಭಿಸಿತು. ಅಮೆರಿಕ ಈ ಕಾರ್ಯಾಚರಣೆಯನ್ನು ‘ಆಪರೇಷನ್ ಎಂಡ್ಯೂರಿಂಗ್ ಫ್ರೀಡಮ್’ ಎಂದು ಕರೆದಿತ್ತು. ಕೆನಡಾ, ಆಸ್ಟ್ರೇಲಿಯಾ, ಜರ್ಮನಿ ಹಾಗೂ ಫ್ರಾನ್ಸ್ ಸಹ ಇದಕ್ಕೆ ಬೆಂಬಲ ನೀಡಿದ್ದವು.
ಇದನ್ನೂ ಓದಿ:ಮೆಗಾ ಅಭಿಮಾನಿಗಳಿಗೆ ಶಾಕಿಂಗ್ : ನಟ ಸಾಯಿ ಧರ್ಮತೇಜ್ ಬೈಕ್ ಅಪಘಾತ, ಆಸ್ಪತ್ರೆಗೆ ದಾಖಲು
2001ರ ನ. 9ರಂದು ತಾಲಿಬಾನ್ ಮಜರ್-ಇ-ಷರೀಫ್‌ನಲ್ಲಿ ಅಮೆರಿಕ ಪಡೆಗಳಿಗೆ ಶರಣಾಯಿತು. 2001ರ ನ. 11ರಂದು ಬಾಮಿಯಾನ್ ನಗರ, ನ. 12ರಂದು ಹೆರಾತ್, ನ. 13ರಂದು ಕಾಬೂಲ್ ನಗರಗಳಲ್ಲಿ ತಾಲಿಬಾನ್ ಹಿಡಿತ ಕೊನೆಯಾಯಿತು. ಇನ್ನು ಅಂತಿಮವಾಗಿ 2001ರ ನ. 14ರಂದು ಜಲಾಲಾಬಾದ್ ನಗರ ಕೂಡ ತಾಲಿಬಾನ್ ಕೈಬಿಟ್ಟು ಹೋಯಿತು. 2 ವಾರ ನಡೆದ ಈ ಭೀಕರ ಯುದ್ದದಲ್ಲಿ ಸಾವಿರಾರು ಜನ ಅಸುನೀಗಿದ್ದರು. ನಂತರ ಅಮೆರಿಕ ಸಹಾಯದಿಂದ ಅಫ್ಘಾನ್ ನಲ್ಲಿ ನೂತನ ಸರ್ಕಾರ ರಚನೆಯಾಯಿತು.
ಟ್ವಿನ್ ಟವರ್ ದಾಳಿಯ ಪ್ರಮುಖ ರೂವಾರಿ ಅಲ್ ಕೈದಾ ಉಗ್ರ ಒಸಾಮಾ ಬಿನ್ ಲಾಡೆನ್ ಗಾಗಿ ಹುಡುಕಾಟ ನಡೆದೇ ಇತ್ತು. ಸುಮಾರು ಒಂದು ದಶಕದ ಬಳಿಕ 2011ರ ಮೇ 1ರಂದು ಪಾಕಿಸ್ಥಾನದಲ್ಲಿ ಅಡಗಿದ್ದ ಉಗ್ರ ಲಾಡೆನ್ ನನ್ನು ಅಮೆರಿಕ ಪಡೆ ಕೊಂದು ಹಾಕಿತ್ತು.
ಸದ್ಯ ಎರಡು ದಶಕದ ಬಳಿಕ ಅಮೆರಿಕವು ಅಫ್ಘಾನ್ ನಲ್ಲಿದ್ದ ತನ್ನ ಪಡೆಯನ್ನು ವಾಪಾಸ್ ಕರೆಸಿಕೊಂಡಿದೆ. ಯುಎಸ್ ಪಡೆ ಮರಳಿ ಹೋಗುತ್ತಿದ್ದಂತೆ ತಾಲಿಬಾನ್ ಗಳ ಅಟ್ಟಹಾಸ ಆರಂಭವಾಗಿದೆ. ಸದ್ಯ ಸಂಪೂರ್ಣ ಅಫ್ಘಾನಿಸ್ಥಾನವನ್ನು ವಶಕ್ಕೆ ಪಡೆದಿರುವ ತಾಲಿಬಾನ್ ಅಲ್ಲಿ ತನ್ನದೇ ಸರ್ಕಾರವನ್ನು ರಚಿಸಿದೆ.