ಟೋಕಿಯೋ: ಮೊಡೆರ್ನಾ ಕೋವಿಡ್ 19 ಲಸಿಕೆ ಪಡೆದ ನಂತರ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದ್ದು, ಮೊಡೆರ್ನಾ ಲಸಿಕೆಯಲ್ಲಿ ಕೆಲವೊಂದು ಅಡ್ಡಪರಿಣಾಮ ಬೀರುವ ಅಂಶ ಕಂಡು ಬಂದ ಹಿನ್ನೆಲೆಯಲ್ಲಿ ಲಸಿಕೆ ನೀಡುವಿಕೆ ಸ್ಥಗಿತಗೊಳಿಸಲಾಗಿದೆ ಎಂದು ಜಪಾನ್ ಆರೋಗ್ಯ ಸಚಿವಾಲಯ ಶನಿವಾರ (ಆಗಸ್ಟ್ 28) ತಿಳಿಸಿದೆ.
ಇದನ್ನೂ ಓದಿ:ಮೈಸೂರಿನಲ್ಲೇ ತನಿಖೆ ಮಾಡ್ತಿದ್ದ ಪೊಲೀಸರಿಗೆ ತ.ನಾಡು ದಾರಿ ತೋರಿಸಿದ್ದು ಆ ಒಂದು ಬಸ್ ಟಿಕೆಟ್!
ಮೊಡೆರ್ನಾ ಎರಡನೇ ಡೋಸ್ ಪಡೆದ ಹತ್ತು ದಿನಗಳೊಳಗೆ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿರುವುದಾಗಿ ಸಚಿವಾಲಯ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ವಿವರಿಸಿದೆ. ಘಟನೆ ನಂತರ ಗುರುವಾರದಿಂದ ಮೊಡೆರ್ನಾ ಲಸಿಕೆ ನೀಡುವಿಕೆ ಸ್ಥಗಿತಗೊಳಿಸಲಾಗಿದೆ. ಅಷ್ಟೇ ಅಲ್ಲ ಯಾವ ಕಾರಣದಿಂದ ಸಾವು ಸಂಭವಿಸಿದೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ವರದಿ ಹೇಳಿದೆ.
ದೇಶಾದ್ಯಂತ 863 ಕೇಂದ್ರಗಳಿಗೆ ರವಾನೆಯಾದ 1.63 ಮಿಲಿಯನ್ ಮೊಡೆರ್ನಾ ಡೋಸ್ ಗಳ ಬಳಕೆಯನ್ನು ಸ್ಥಗಿತಗೊಳಿಸಲಾಗಿದೆ. ಕೆಲವೊಂದು ಲಸಿಕೆ ಬಾಟಲಿಯಲ್ಲಿ ಅಡ್ಡಪರಿಣಾಮ ಬೀರುವ ಅಂಶ ಕಂಡು ಬಂದಿರುವ ಬಗ್ಗೆ ದೇಶೀಯ ವಿತರಕ ಸಂಸ್ಥೆ ಟಾಕೆಡಾ ಫಾರ್ಮಾಸ್ಯೂಟಿಕಲ್ ವರದಿ ಪಡೆದ ಒಂದು ವಾರದ ನಂತರ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.
ಮೊಡೆರ್ನಾ 19 ಲಸಿಕೆಯಿಂದಲೇ ಈ ಸಾವು ಸಂಭವಿಸಿದೆ ಎನ್ನುವುದಕ್ಕೆ ನಮ್ಮಲ್ಲಿ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಮೊಡೆರ್ನಾ ಮತ್ತು ಟಾಕೆಡಾ ಪ್ರಕಟಣೆಯಲ್ಲಿ ಹೇಳಿದೆ. ಆದರೂ ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸುವುದು ತುಂಬಾ ಮುಖ್ಯವಾದ ವಿಷಯವಾಗಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.