ತಿ.ನರಸೀಪುರ: ಪ್ರಗತಿಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಮಾ.10 ರಿಂದ 11 ರವಗೆರೆ ಎರಡು ದಿನಗಳ ಕಾಲ ಬೆಂಗಳೂರಿನ ಪುರಭವನದಲ್ಲಿ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ವೇದಿಕೆ ವತಿಯಿಂದ ಅಂಬೇಡ್ಕರ್ ಚಿಂತನೆಯ ಬೆಳಕಲ್ಲಿ ವಿಶ್ಲೇಷಣೆ “ಎತ್ತ ಸಾಗುತ್ತಿದೆ ಭಾರತ ?’ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಹೇಳಿದರು.
ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.10ರ ಶನಿವಾರ ಬೆಳಗ್ಗೆ 11 ಘಂಟೆಗೆ ಸಂವಿಧಾನ ಆಶಯಗಳ ರಕ್ಷಣೆಯ ಪ್ರತಿಜಾn ಸ್ವೀಕಾರದ ಮೂಲಕ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಕರಾದಸಂಸ ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ ಪ್ರಾಸ್ತಾವಿಕ ಮಾತುಗಳನ್ನಾಡಿದರೆ ಆಂಧ್ರ ಪ್ರದೇಶದ ವಿಚಾರವಾದಿ ಪೊ›.ಕಾಂಚ ಐಲಯ್ಯ ದಿಕ್ಸೂಚಿ ಭಾಷಣ ಮಾಡುವರು. ಕದಸಂಸ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಅಧ್ಯಕ್ಷತೆ ವಹಿಸುವರು ಎಂದರು.
ಮುಖ್ಯ ಅತಿಥಿಗಳಾಗಿ ಭಾಷಣಕಾರರಾದ ಸಾಹಿತಿ ದೇವನೂರು ಮಹದೇವ, ಬಹುಭಾಷಾ ಚಿತ್ರನಟ ಪ್ರಕಾಶ್ ರೈ, ಚೆನ್ನೈನ ದ್ರಾವಿಡ ಕಳಗಂ ಅಧ್ಯಕ್ಷ ಡಾ.ಕೆ.ವೀರಮಣಿ, ಮಹಾರಾಷ್ಟ್ರ ಪತ್ರಕರ್ತ ತೀಸ್ತಾ ಸೆಟಲ್ವಾಡ್, ವಾರ್ತಾಭಾರತಿ ಪ್ರಧಾನ ಸಂಪಾದಕ ಅಬ್ದುಲ್ ಸಲೀಂ ಪುತ್ತಿಗೆ, ರೈತ ಸಂಘದ ರಾಜಾÂಧ್ಯಕ್ಷ ಕೆ.ಟಿ.ಗಂಗಾಧರ್, ಜಿಸಿಐಸಿ ಅಧ್ಯಕ್ಷ ಡಾ.ಸಾಜನ್ ಕೆ.ಜಾರ್ಜ್, ದಸಂಸ ಹಿರಿಯ ಮುಖಂಡ ಸಿ.ಎಂ.ಮುನಿಯಪ್ಪ, ಕರಾದಸಂಸ ರಾಜ್ಯ ಸಂಚಾಲಕ ಡಾ.ಡಿ.ಜಿ.ಸಾಗರ್ ಹಾಗೂ ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಭಾಗವಹಿಸುವರು ಎಂದು ವಿವರಿಸಿದರು.
ಮಾ.11ರ ಭಾನುವಾರ ಸಂಜೆ 4 ಘಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾರೋಪ ಭಾಷಣ ಮಾಡುವರು. ಮುಖ್ಯ ಅತಿಥಿಗಳಾಗಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ, ಹೆಚ್.ಆಂಜನೇಯ, ಖ್ಯಾತ ಕವಿ ಡಾ.ಸಿದ್ಧಲಿಂಗಯ್ಯ, ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಹಾಗೂ ದಸಂಸ ರಾಜ್ಯ ಸಂಚಾಲಕರುಗಳು ಭಾಗವಹಿಸುವರು.
ಮಾ.10ರ ಮಧ್ಯಾಹ್ನ 2 ರಿಂದ ಮಾ.11ರ ಸಂಜೆ 3.30 ರವರೆಗೆ ಹಲವು ವಿಚಾರ ಸಂಕಿರಣಗಳು ನಡೆಯಲಿದ್ದು ನುರಿತ ಗಣ್ಯರು ವಿಚಾರ ಮಂಡನೆಯನ್ನು ಮಾಡುವರು ಎಂದು ಆಲಗೂಡು ಶಿವಕುಮಾರ್ ಮಾಹಿತಿ ನೀಡಿದರು. ಸುದ್ಧಿಗೋಷ್ಠಿಯಲ್ಲಿ ದಸಂಸ ತಾಲೂಕು ಸಂಘಟನಾ ಸಂಚಾಲಕ ಕಿರಗಸೂರು ರಜನಿ, ಖಜಾಂಚಿ ಹಿರಿಯೂರು ಸೋಮಣ್ಣ, ಮುಖಂಡರಾದ ನಿಲಸೋಗೆ ಸಿದ್ದರಾಜು ಹಾಗೂ ಸುಜ್ಜಲೂರು ಶಿವಯ್ಯ ಉಪಸ್ಥಿತರಿದ್ದರು.