ಮಲ್ಪೆ: ಸೈಂಟ್ ಮೇರೀಸ್ ದ್ವೀಪದಲ್ಲಿ 4.25 ಕೋ.ರೂ. ವೆಚ್ಚದ ತೇಲು ಜೆಟ್ಟಿ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ. ಲೋಕೋಪಯೋಗಿ ಇಲಾಖೆಗೆ ಟೆಂಡರ್‌ಗೆ
ಕಳುಹಿಸಲಾಗಿದೆ. ಶೀಘ್ರ ಜೆಟ್ಟಿ ನಿರ್ಮಾಣ ಆರಂಭವಾಗಲಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದರು.
ಅವರು ಶನಿವಾರ ಎರಡು ದಿನಗಳ ಬೀಚ್ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಲ್ಪೆ ಪಡುಕರೆ ಭಾಗದಲ್ಲಿ 3 ಐಲ್ಯಾಂಡ್ ಇರುವುದರಿಂದ ಪ್ರವಾಸಿ ಬೋಟ್‌ಗಳು ತಂಗಲು ಇಲ್ಲಿ ಮರೀನ ನಿರ್ಮಾಣ ಮಾಡುವ ಯೋಜನೆ ಇದೆ. ಅದಾದರೆ ಪಡುಕರೆ ಬೀಚ್ ದೇಶದಲ್ಲೇ ಅತ್ಯಂತ ಪ್ರಸಿದ್ಧ ಮತ್ತು ಸುರಕ್ಷಿತ ಬೀಚ್ ಆಗಲಿದೆ. ಇದಕ್ಕೆ ಸ್ಥಳೀಯರ ಸಹಕಾರವೂ ಅಗತ್ಯ. ಮುಂದಿನ ದಿನಗಳಲ್ಲಿ ಬಡಾನಿಡಿಯೂರು ಸಮೀಪದ ಕದಿಕೆ ಮತ್ತು ಬೆಂಗ್ರೆ ಬೀಚ್‌ನ್ನು ಅಭಿವೃದ್ಧಿಪಡಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.
ಉಡುಪಿ ಡಿಸಿ ಜಗದೀಶ್ ಮಾತನಾಡಿ, ಪಡುಬಿದ್ರೆಯ ಬ್ಲೂಫ್ಲ್ಯಾಗ್ ಬೀಚ್ ಕೆಲಸ ಮಗಿದಿದ್ದು, ಮುಂದಿನ ವರ್ಷದೊಳಗೆ ಜಿಲ್ಲೆಯ ಇನ್ನೂ ಕೆಲವು ಬೀಚ್‌ಗಳನ್ನು ಬ್ಲೂ ಫ್ಲ್ಯಾಗ್ ಆಗಿಸುವ ಯೋಜನೆ ಇದೆ. ಸೋಮೇಶ್ವರ ಬೀಚ್ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಎಡಿಸಿ ಸದಾಶಿವ ಪ್ರಭು, ಜಿ.ಪಂ. ಸಿಇಒ ಪ್ರೀತಿ ಗೆಹೊÉàತ್, ಮಲ್ಪೆ ಕರಾವಳಿ ಪೋಲಿಸ್ ಅಧೀಕ್ಷಕ ಚೇತನ್ ಆರ್., ತಾ.ಪಂ. ಅಧ್ಯಕ್ಷ ನೀತಾ ಗುರುರಾಜ್, ಉಡುಪಿ ಕರಾವಳಿ ಪ್ರವಾಸೋದ್ಯಮ ಸಂಘಟನೆಯ ಅಧ್ಯಕ್ಷ ಮನೋಹರ್ ಶೆಟ್ಟಿ, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಮಲ್ಪೆ ಬೀಚ್ ಉತ್ಸವ ಸಂಯೋಜಕ ಪಾಂಡುರಂಗ ಮಲ್ಪೆ, ನಗರಸಭಾ ಪೌರಾಯುಕ್ತ ಆನಂದ ಕಲ್ಲೋಳಿಕರ್, ಅಧಿಕಾರಿಗಳಾದ ಕುಮಾರ ಬೆಕ್ಕೇರಿ, ಅರುಣ್ ಕುಮಾರ್, ಮಲ್ಪೆ ಅಭಿವೃದ್ಧಿ ಸಮಿತಿಯ ಸುದೇಶ್ ಶೆಟ್ಟಿ, ನಗರಸಭಾ ಸದಸ್ಯ ಎಡ್ಲಿನ್ ಕರ್ಕಡ ಉಪಸ್ಥಿತರಿದ್ದರು.ಚಂದ್ರಶೇಖರ್ ನಾಯಕ್ ಸ್ವಾಗತಿಸಿದರು. ಡಾ| ರೋಶನ್ ಶೆಟ್ಟಿ ನಿರೂಪಿಸಿ, ವಂದಿಸಿದರು.
ಫೆ. 2ರ ಬೆಳಗ್ಗೆ 9ರಿಂದ ಪುರುಷರಿಗಾಗಿ ವಾಲಿಬಾಲ್, ಮಹಿಳೆಯರಿಗೆ ತ್ರೋಬಾಲ್ ಪಂದ್ಯಾಟಗಳು ನಡೆಯಲಿವೆ. 10 ಗಂಟೆಗೆ ಮರಳುಶಿಲ್ಪ ಸ್ಪರ್ಧೆ, ಜಲಸಾಹಸ ಕ್ರೀಡೆಗಳು ನಡೆಯಲಿವೆ. ಚಿತ್ರಕಲೆ ಸ್ಪರ್ಧೆಯು 3 ವಿಭಾಗಗಳಲ್ಲಿ ನಡೆಯಲಿದೆ. ಮಧ್ಯಾಹ್ನ 3ರಿಂದ ಗಾಳಿಪಟ, ಶ್ವಾನ ಪ್ರದರ್ಶನ ಮತ್ತು ಸ್ಪರ್ಧೆ ನಡೆಯಲಿದೆ. ಕರಕುಶಲ ವಸ್ತುಗಳ ಮಳಿಗೆ, ಆಹಾರ ಮೇಳಗಳು, ದೇಶೀಯ ಮತ್ತು ಅಂತಾರಾಷ್ಟ್ರೀಯ 10 ಕಂಪೆನಿಗಳ 5 ವೈನ್ ಕೌಂಟರ್‌ಗಳು, ಪ್ರತಿಷ್ಠಿತ ಹೊಟೇಲ್‌ಗಳ ಖಾದ್ಯ ಮಳಿಗೆಗಳು ಉತ್ಸವದಲ್ಲಿವೆ.