Advertisement

ನಗರದಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿ

12:45 AM Feb 09, 2020 | Sriram |

ಮಹಾನಗರ: ನಗರದ ಅನೇಕ ಕಡೆಗಳಲ್ಲಿ ಈಗಾಗಲೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದು, ಲೇಡಿಹಿಲ್‌-ಬಲ್ಲಾಳ್‌ಬಾಗ್‌ ಸುತ್ತಮುತ್ತಲಿನ ಪ್ರದೇಶದಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಪಾಲಿಕೆ ಮುಂದಾಗಿದೆ.

Advertisement

ಲೇಡಿಹಿಲ್‌ ವೃತ್ತದಿಂದ ಬಲ್ಲಾಳ್‌ಬಾಗ್‌ವರೆಗೆ ಸಮರ್ಪಕ ಒಳಚರಂಡಿ, ಫುಟ್‌ಪಾತ್‌ ವ್ಯವಸ್ಥೆ, ಒಂದು ಲೈನ್‌ ಕಾಂಕ್ರೀಟ್‌ ಕಾಮಗಾರಿ ಕೆಲಸಗಳು ಸುಮಾರು 1.70 ಕೋಟಿ ರೂ. ವೆಚ್ಚದಲ್ಲಿ ನಡೆಯಲಿದೆ.

ಲಾಲ್‌ಬಾಗ್‌ನಲ್ಲಿ ಈಗಿರುವ ವೃತ್ತದ ಬಗ್ಗೆ ಸಾರ್ವಜನಿಕರಲ್ಲಿ ಅಪಸ್ವರ ಕೇಳಿ ಬಂದಿತ್ತು. ಸಿಗ್ನಲ್‌ ವೇಳೆ ಲೇಡಿಹಿಲ್‌ ಕಡೆಯಿಂದ ಕೆಎಸ್ಸಾರ್ಟಿಸಿ ಮತ್ತು ಸ್ಟೇಟ್‌ಬ್ಯಾಂಕ್‌ ಬಸ್‌ ನಿಲ್ದಾಣ ಕಡೆಗೆ ತೆರಳುವ ವಾಹನಗಳು ಇಕ್ಕಟ್ಟಿನ ಪ್ರದೇಶದಲ್ಲಿ ನಿಲುಗಡೆ ಮಾಡುವ ಅನಿವಾರ್ಯವಿತ್ತು. ಇದರಿಂದಾಗಿ ವಾಹನ ಸವಾರರು ತೊಂದರೆ ಪಡುತ್ತಿದ್ದರು. ಇದೀಗ ವೃತ್ತ ನವೀಕರಣ ಕಾರ್ಯ ನಡೆದಿದ್ದು, ಲಾಲ್‌ಬಾಗ್‌ ಸರ್ವಿಸ್‌ ಬಸ್‌ ನಿಲ್ದಾಣ ಇದ್ದಂತಹ ನಿರುಪಯುಕ್ತ ಬಸ್‌ ನಿಲ್ದಾಣವನ್ನು ಕೆಡವಿ, ರಸ್ತೆ ಅಗಲಗೊಳಿಸಲಾಗಿದೆ. ಅಲ್ಲದೆ, ಸುತ್ತಲೂ ಫುಟ್‌ಪಾತ್‌ ವ್ಯವಸ್ಥೆ ಕಲ್ಪಿಸಲಾಗಿದೆ.

ಅದೇರೀತಿ ಲಾಲ್‌ಬಾಗ್‌ನಿಂದ ಬಿಜೈ ಕಡೆಗೆ ತೆರಳುವ ರಸ್ತೆ, ಲಾಲ್‌ಬಾಗ್‌ನಲ್ಲಿರುವ ಗಾಂಧೀಕಟ್ಟೆ ಕೂಡ ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಯಾಗುತ್ತಿದೆ. ಬಿಜೈ ಕೆಎಸ್ಸಾರ್ಟಿಸಿ ರಸ್ತೆ ವಿಸ್ತರಣೆ ಕಾರ್ಯ ಪ್ರಗತಿಯಲ್ಲಿದೆ. ಬಿಗ್‌ಬಜಾರ್‌ ಬಳಿ ಇರುವ ಬಸ್‌ ನಿಲ್ದಾಣವನ್ನು ಈಗಿರುವ ಜಾಗಕ್ಕಿಂತ ಹಿಂದುಗಡೆಗೆ ಸ್ಥಳಾಂತರಿಸಲಾಗುತ್ತಿದೆ. ನಗರದ ಲಾಲ್‌ಬಾಗ್‌ನಲ್ಲಿ ಇರುವಂತಹ ಗಾಂಧೀ ಕಟ್ಟೆಯ ನವೀಕರಣ ನಡೆಯುತ್ತಿದೆ. ಮಳೆಗಾಲದಲ್ಲಿ ಕಟ್ಟೆಗೆ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ಕೆಲಸ ನಡೆಸಲಾಗುತ್ತಿದೆ. ಈಗಿರುವ ಕಟ್ಟೆಗೆ ಕಾಂಕ್ರೀಟ್‌ ಹಾಕಿ ಅದರ ಮೇಲ್ಭಾಗಕ್ಕೆ ಹುಲ್ಲಿನ ಹಾಸು ಅಳವಡಿಸಲು ಚಿಂತಿಸಲಾ ಗಿದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.

ಲೇಡಿಹಿಲ್‌ ವೃತ್ತದಲ್ಲಿ ನಮ್ಮ ಕುಡ್ಲ
ಲೇಡಿಹಿಲ್‌ ವೃತ್ತ ನವೀಕರಣ ಕೆಲಸ ಸದ್ಯ ಅರ್ಧದಲ್ಲಿ ನಿಂತಿದೆ. ವೃತ್ತವನ್ನು ಎರಡರಿಂದ ಮೂರು ಅಡಿ ಮುಂದಕ್ಕೆ ನಿರ್ಮಿಸಲಾಗುತ್ತಿದೆ. ವೃತ್ತದ ಗಾತ್ರವನ್ನು ಈ ಹಿಂದಿಗಿಂತ ಶೇ.50ರಷ್ಟು ಕಡಿಮೆ ಮಾಡಲಾಗಿದೆ. ಈ ವೃತ್ತದ ವಿನ್ಯಾಸ ಸಿದ್ಧವಾಗಿದ್ದು, ಸುತ್ತಲೂ ಬಂಡೆಕಲ್ಲಿನ ಮಾದರಿ, ಅದರ ಒಳಗಡೆ ನೀರಿನ ಚಿಲುಮೆ, ಬಂಡೆಯ ಮೇಲೆ ನಮ್ಮ ಕುಡ್ಲ ಎಂಬ ಬರೆಹ ಇರಲಿದೆ. ಅಲ್ಲದೆ ತುಳು ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ವಿನ್ಯಾಸ ಅಳವಡಿಸಲಾಗುತ್ತಿದೆ.

Advertisement

ಒಂಬತ್ತು ವೃತ್ತಗಳ ಅಭಿವೃದ್ಧಿ
ಪಾಲಿಕೆಯು ಸದ್ಯ 9 ವೃತ್ತಗಳಿಗೆ ಹೊಸ ರೂಪ ನೀಡಲು ನಿರ್ಧರಿಸಿದೆ. ಅದರಂತೆಯೇ ಸ್ಟೇಟ್‌ಬ್ಯಾಂಕ್‌ ಬಳಿಯ ಹ್ಯಾಮಿಲ್ಟನ್‌ ವೃತ್ತ, ಕೊಡಿಯಾಲ ಬೈಲ್‌ನ ನವ ಭಾರತ್‌ ವೃತ್ತ, ಬಲ್ಲಾಳ್‌ಬಾಗ್‌ ವೃತ್ತ, ಮಾರ್ನಮಿಕಟ್ಟೆ ವೃತ್ತ, ನಂದಿಗುಡ್ಡೆ ಸಮೀಪದ ವೃತ್ತ, ಸಕೀìಟ್‌ ಹೌಸ್‌ ಮುಂಭಾಗದ ವೃತ್ತ, ಕಾವೂರು ವೃತ್ತ, ಉರ್ವಾ ಮಾರುಕಟ್ಟೆ ವೃತ್ತ, ಪಡೀಲ್‌ ಉಳ್ಳಾಲ ಶ್ರೀನಿವಾಸ ಮಲ್ಯ ವೃತ್ತಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ.

ಅನೇಕ ಕಡೆಗಳಲ್ಲಿ ಅಭಿವೃದ್ಧಿ ಕಾರ್ಯ
ಪಾಲಿಕೆಯಿಂದ ನಗರದ ಅನೇಕ ಕಡೆಗಳಲ್ಲಿ ಅಭಿವೃದ್ಧಿ ಕೆಲಸ ನಡೆಯುತ್ತಿದೆ. ನಗರದ ಲೇಡಿಹಿಲ್‌-ಬಲ್ಲಾಳ್‌ಬಾಗ್‌ ವರೆಗಿನ ಅಭಿವೃದ್ಧಿಗೆ 1.70 ಕೋಟಿ ಮತ್ತು ಲಾಲ್‌ಬಾಗ್‌-ಬಿಜೈ ರಸ್ತೆ ಅಭಿವೃದ್ಧಿ, ಗಾಂಧೀಕಟ್ಟೆ ನವೀಕರಣ ಕೆಲಸ 65 ಲಕ್ಷ ರೂ.ನಲ್ಲಿ ನಡೆಯುತ್ತಿದೆ.
 -ಗುರುರಾಜ್‌ ಮರಲಿಹಳ್ಳಿ,ಪಾಲಿಕೆ ಕಾರ್ಯಪಾಲಕ ಅಭಿಯಂತರ

Advertisement

Udayavani is now on Telegram. Click here to join our channel and stay updated with the latest news.

Next