ದಾವಣಗೆರೆ: ಕೋವಿಡ್ ಸೋಂಕು ಪತ್ತೆಯಾಗಿ ದಾವಣಗೆರೆ ಜೆ.ಎಚ್. ಪಟೇಲ್ ಬಡಾವಣೆಯ ಕೋವಿಡ್ ಕೇರ್ ಸೆಂಟರ್‌ನಲ್ಲಿ ಇದ್ದ ಯುವತಿಯರಿಬ್ಬರು ಪರಾರಿಯಾಗಿದ್ದಾರೆ.
ರಾಜ್ಯ ಮಹಿಳಾ ನಿಲಯ ನಿವಾಸಿಗಳಾಗಿದ್ದ 21 ಮತ್ತು 19 ವರ್ಷದ ಯುವತಿಯರು ಪರಾರಿಯಾದವರು. ನಾಲ್ಕು ವರ್ಷಗಳ ಹಿಂದೆ ಪ್ರೀತಿಸಿ ಅಂತರ್‌ಧರ್ಮೀಯ ಯುವಕನನ್ನು ಒಬ್ಬರು ಮದುವೆಯಾಗಿದ್ದರು. ಆದರೆ, ಆಗ 18 ವರ್ಷ ತುಂಬದೇ ಇದ್ದ ಕಾರಣ ಪ್ರಕರಣ ದಾಖಲಿಸಿ ಯುವಕನನ್ನು ಜೈಲಿಗೆ ಕಳುಹಿಸಲಾಗಿತ್ತು. ಯುವತಿ ಹೆತ್ತವರ ಮನೆಗೆ ಹೋಗಲು ಒಪ್ಪಿರಲಿಲ್ಲ.
ಇದನ್ನೂ ಓದಿ: ಪಡಿತರ ನೀಡಲು ಸದ್ಯಕ್ಕೆ ಬಯೋಮೆಟ್ರಿಕ್ ಪದ್ಧತಿ ಕೈಬಿಡಿ : ಎಚ್ಡಿಕೆ
ಅದೇ ರೀತಿ ಮತ್ತೊಬ್ಬರು 2020ರಲ್ಲಿ ತನ್ನ ಸಂಬಂಧಿ ಯುವಕನನ್ನು ಪ್ರೀತಿಸಿ ಮದುವೆಯಾಗಲು ಹೊರಟಿದ್ದರು. ಅವರಿಗೂ ಆಗ 18 ತುಂಬಿರಲಿಲ್ಲ. ಮದುವೆಯನ್ನು ತಡೆಯಲಾಗಿತ್ತು. ಆಕೆಯೂ ತಾಯಿ ಜತೆ ಹೋಗಲು ಒಪ್ಪಿರಲಿಲ್ಲ. ಹಾಗಾಗಿ ಇಬ್ಬರೂ ಸ್ಟೇಹೋಂನಲ್ಲಿದ್ದರು.
ಕೋವಿಡ್ ಬಂದರೂ ಲಕ್ಷಣಗಳು ಇಲ್ಲದ ಕಾರಣ ಅವರನ್ನು ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಲಾಗಿತ್ತು. ಸೋಮವಾರ ರಾತ್ರಿ ವಾಚ್‌ಮನ್ ಊಟಕ್ಕೆ ಹೋಗಿದ್ದ ಸಮಯದಲ್ಲಿ ಪರಾರಿಯಾಗಿದ್ದಾರೆ. ಆ ಯುವಕರ ಜತೆಗೆ ಪರಾರಿಯಾಗಿರಬೇಕು ಎಂದು ಶಂಕಿಸಲಾಗಿದೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.