ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಬಳಿಕ ಯಾರು?ಇಂತಹದ್ದೊಂದು ಪ್ರಶ್ನೆ “ಕೈ’ ಪಾಳಯದಲ್ಲಿ ಉದ್ಭವಿಸಿದೆ. ಇದಕ್ಕೆ ಉತ್ತರದ ಹುಡುಕಾಟ ನಡೆಸಿರುವ ಹೈಕಮಾಂಡ್ ಎರಡು ಪ್ರಬಲ ಸಮುದಾಯಗಳ ಇಬ್ಬರು ನಾಯಕ ರನ್ನು ಸಚಿವ ಸಂಪುಟದಿಂದ ಕೈಬಿಟ್ಟು, ಅವರಿಗೆ ಸಂಘಟನೆಯ ಹೊಣೆ ನೀಡಲು ಗಂಭೀರ ಚಿಂತನೆ ನಡೆಸಿದೆ.
ಈ ಪಕ್ಷ ಸಂಘಟನೆ ಕಾರ್ಯಕ್ಕಾಗಿ ಸಿಎಂ ಆಪ್ತ ವಲಯದ ಕೃಷ್ಣ ಬೈರೇಗೌಡ ಮತ್ತು ಬೈರತಿ ಸುರೇಶ್ ಅವರನ್ನು ಗುರುತಿಸಿದ್ದು, ಸಂಪುಟ ಪುನಾರಚನೆ ಸಂದರ್ಭದಲ್ಲಿ ಹೈಕಮಾಂಡ್ ಈ ಕೆಲಸಕ್ಕೆ ಕೈಹಾಕುವ ಆಲೋಚನೆ ನಡೆಸಿದೆ.
ಇಬ್ಬರೂ ನಾಯಕರಿಗೆ ನೆರೆ ರಾಜ್ಯಗಳ ಉಸ್ತುವಾರಿ ನೀಡುವ ಸಾಧ್ಯತೆ ಇದೆ. ಆಗ ಪಕ್ಷಕ್ಕೆ ಪರ್ಯಾಯ ನಾಯ ಕತ್ವ ಸಿಗುವುದರ ಜತೆಗೆ ಕಾರ್ಯ ಕರ್ತರಿಗೂ ಬಲ ಬರಲಿದೆ ಎಂಬ ಲೆಕ್ಕಾ ಚಾರ ಇದರ ಹಿಂದಿದೆ.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರನ್ನು ಎಐಸಿಸಿಗೆ ನೇಮಕ ಮಾಡಿ, ಪಕ್ಷ ಸಂಘಟನೆಗೆ ತೊಡಗಿಸುವ ಬಗ್ಗೆ ಚರ್ಚೆ ನಡೆದಿದೆ. ಈ ಪೈಕಿ ಒಕ್ಕಲಿಗ ಸಮುದಾಯವನ್ನು ಪ್ರತಿನಿಧಿಸುವ ಕೃಷ್ಣ ಬೈರೇಗೌಡ ಈಗಾಗಲೇ ಆಡಳಿತದಲ್ಲಿ ಹಿಡಿತ ಸಾಧಿಸಿದ್ದಾರೆ. ಅವರನ್ನು “ಸಮುದಾಯದ ನಾಯಕ’ ಆಗಿ ಬೆಳೆಸುವ ಆಲೋಚನೆ ಇದೆ. ವಿವಿಧ ಭಾಷೆಗಳ ಮೇಲೆ ಹಿಡಿತವಿದ್ದು, ಸಂವಹನ ಮತ್ತು ಸಮನ್ವಯ ಉತ್ತಮವಾಗಿದೆ. ಈ ಹಿನ್ನೆಲೆಯಲ್ಲಿ ನೆರೆ ರಾಜ್ಯಗಳ ಉಸ್ತುವಾರಿ ನೀಡುವ ಬಗ್ಗೆ ಮಾತುಕತೆಗಳು ನಡೆದಿವೆ.
ಇನ್ನು ಕುರುಬ ಸಮುದಾಯದ ಬೈರತಿ ಸುರೇಶ್ ಕೋಲಾರ ಉಸ್ತುವಾರಿ ಆಗಿದ್ದಾರೆ. ಚಿಕ್ಕಬಳ್ಳಾಪುರದ ಸಂಪರ್ಕವೂ ಅವರಿಗಿದೆ. ಅದಕ್ಕೆ ಹೊಂದಿಕೊಂಡಿರುವ ತಮಿಳುನಾಡಿನಲ್ಲಿ ಎಐಡಿಎಂಕೆ ಅಸ್ತಿತ್ವ ಈಗ ಕಡಿಮೆ ಆಗುತ್ತಿದೆ. ಈ ಹಂತದಲ್ಲಿ ಕಾಂಗ್ರೆಸ್‌ಗೆ ಅಲ್ಲಿ ವಿಪುಲ ಅವಕಾಶಗಳಿದ್ದು, ಸುರೇಶ್ ಅವರಿಗೆ ಅದರ ಹೊಣೆಗಾರಿಕೆ ನೀಡುವ ಬಗ್ಗೆ ಚರ್ಚೆ ನಡೆದಿದೆ. ಈ ಅಂಶಗಳಿಗಿಂತ ಮುಖ್ಯವಾಗಿ ಸಿಎಂ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸುರೇಶ್ ಎಲ್ಲ ಇಲಾಖೆಗಳಲ್ಲೂ ಮೂಗು ತೂರಿಸುತ್ತಿದ್ದಾರೆ ಎಂಬ ಅಪಸ್ವರ ಸ್ವತಃ ಕೆಲವು ಸಚಿವರಿಂದ ಕೇಳಿಬರುತ್ತಿದೆ.
ಹಳೇ ಯೋಜನೆಗೆ ಹೊಸ ರೂಪ
ಈ ಹಿಂದೆ ದಿನೇಶ್ ಗುಂಡೂರಾವ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿ, ಆ ಮೂಲಕ 2ನೇ ಹಂತದ ನಾಯಕರನ್ನು ಬೆಳೆಸಲು ಯತ್ನಿಸಲಾಗಿತ್ತು. ಸ್ವತಃ ಡಿ.ಕೆ. ಶಿವಕುಮಾರ್ ಕೂಡ ಹೀಗೆ ಉಸ್ತುವಾರಿಗಳನ್ನು ವಹಿಸಿಕೊಂಡೇ ಬೆಳೆದವರು. ಅದೇ ಪ್ರಯೋಗಕ್ಕೆ ಈಗ ಕೈಹಾಕಲಾಗುತ್ತಿದೆ.
ಸಮುದಾಯವಾರು ನಾಯಕರಿಗೆ ಮಣೆ
ರಾಜ್ಯ ರಾಜಕಾರಣದಲ್ಲಿ ಲಿಂಗಾಯತ, ಒಕ್ಕಲಿಗ, ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾಕ ಸಮುದಾಯಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಈ ಐದೂ ಸಮುದಾಯಗಳಿಂದ ನಾಯಕರನ್ನು ಗುರುತಿಸಿ, ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಹೈಕಮಾಂಡ್ ಚಿಂತನೆ ನಡೆಸಿದೆ. ಈಗ ಒಕ್ಕಲಿಗ ಮತ್ತು ಹಿಂದುಳಿದ ಸಮುದಾಯಗಳ ನಾಯಕರನ್ನು ಗುರುತಿಸಲಾಗಿದೆ. ಉಳಿದ ಸಮುದಾಯಗಳ ನಾಯಕರ ಶೋಧ ನಡೆದಿದೆ ಎನ್ನಲಾಗಿದೆ.