Advertisement

ಬಿಹಾರದಲ್ಲಿ ಇಬ್ಬರು ಚೀನೀ ಪ್ರಜೆಗಳ ಬಂಧನ; ತೀವ್ರ ವಿಚಾರಣೆ

04:46 PM Jul 23, 2023 | Team Udayavani |

ಪಾಟ್ನಾ: ಒಂದು ತಿಂಗಳೊಳಗೆ ಎರಡನೇ ಬಾರಿಗೆ ನೇಪಾಳದ ಮೂಲಕ ಭಾರತದ ಭೂಪ್ರದೇಶಕ್ಕೆ ನುಸುಳಿರುವುದನ್ನು ಗಮನಿಸಿದ ವಲಸೆ ಅಧಿಕಾರಿಗಳು ಬಿಹಾರದಲ್ಲಿ ಇಬ್ಬರು ಚೀನೀ ಪ್ರಜೆಗಳನ್ನು ಬಂಧಿಸಿದ್ದಾರೆ.

Advertisement

ಪೂರ್ವ ಚಂಪಾರಣ್ ಜಿಲ್ಲೆಯ ರಕ್ಸಾಲ್ ಗಡಿ ಹೊರಠಾಣೆಯಲ್ಲಿ ಶನಿವಾರ ರಾತ್ರಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಸಹಾಯಕ ವಿದೇಶಿ ಪ್ರಾದೇಶಿಕ ನೋಂದಣಿ ಅಧಿಕಾರಿ ಎಸ್‌ಕೆ ಸಿಂಗ್ ತಿಳಿಸಿದ್ದಾರೆ.

ವಿಚಾರಣೆ ವೇಳೆ ತಮ್ಮ ಹೆಸರು ಝಾವೋ ಜಿಂಗ್ ಮತ್ತು ಫೂ ಕಾಂಗ್ ಎಂದು ಹೇಳಿದ್ದಾರೆ ಮತ್ತು ಅವರಿಬ್ಬರೂ ಚೀನಾದ ಜಾಕ್ಸಿಂಗ್ ಪ್ರಾಂತ್ಯದಿಂದ ಬಂದಿದ್ದು ಮಾನ್ಯವಾದ ಪ್ರಯಾಣ ದಾಖಲೆಗಳಿಲ್ಲ. ಹಿಂದಿನ ರಾತ್ರಿ ಅವರು ತಂಗಿದ್ದ ಗಡಿಯಲ್ಲಿ ಇರುವ ಬಿರ್‌ಗಂಜ್‌ನಲ್ಲಿರುವ ಹೋಟೆಲ್‌ನಲ್ಲಿ ಪಾಸ್‌ಪೋರ್ಟ್‌ಗಳನ್ನು ಬಿಟ್ಟು ಬಂದಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ಆಟೋರಿಕ್ಷಾದ ಮೂಲಕ ಗಡಿಯನ್ನು ತಲುಪಿ ಕಾಲ್ನಡಿಗೆಯಲ್ಲಿ ದಾಟಲು ಪ್ರಯತ್ನಿಸಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ. ದಾಖಲೆಗಳ ಪ್ರಕಾರ ಇಬ್ಬರು ಜುಲೈ 2 ರಂದು ಭಾರತೀಯ ಭೂಪ್ರದೇಶಕ್ಕೆ ನುಸುಳಲು ಈ ಹಿಂದೆ ಪ್ರಯತ್ನಿಸಿದ್ದರು. ಅವರ ಪಾಸ್‌ಪೋರ್ಟ್‌ಗಳನ್ನು ಪರಿಶೀಲಿಸಿ ”ಪ್ರವೇಶ ನಿರಾಕರಿಸಲಾಗಿದೆ” ಎಂಬ ಮುದ್ರೆಯೊಂದಿಗೆ ಹಿಂತಿರುಗಿಸಲಾಗಿತ್ತು. ಆದಾಗ್ಯೂ, ಅವರು ಈ ಪ್ರದೇಶವನ್ನು ಪ್ರವೇಶಿಸಲು ಪದೇ ಪದೇ ಪ್ರಯತ್ನಿಸುತ್ತಿರುವುದು ಅನುಮಾನಗಳನ್ನು ಹುಟ್ಟುಹಾಕಿದೆ. ಆದ್ದರಿಂದ ಮುಂದಿನ ತನಿಖೆ ಮತ್ತು ಕ್ರಮಕ್ಕಾಗಿ ಅವರನ್ನು ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next