Advertisement

ಇಬ್ಬರು ಮಕ್ಕಳ ಬಲಿ; ಇನ್ನೂ ಐದು ಮಕ್ಕಳು ಅಸ್ವಸ್ಥ

06:00 AM Feb 11, 2018 | |

ಮಂಡ್ಯ: ಒಂದೂವರೆ ತಿಂಗಳ ಹಸುಗೂಸುಗಳಿಗೆ ರೋಗ ನಿರೋಧಕ ಚುಚ್ಚುಮದ್ದು ನೀಡಿದ 24 ಗಂಟೆಯಲ್ಲಿ ಎರಡು ಮಕ್ಕಳು ಅಸುನೀಗಿ ಐದು ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ತಾಲೂಕಿನ ಚಿಂದಗಿರಿದೊಡ್ಡಿ ಗ್ರಾಮದಲ್ಲಿ ನಡೆದಿದೆ.

Advertisement

ಘಟನೆ ಹಿನ್ನೆಲೆಯಲ್ಲಿ ಮೃತರ ಸಂಬಂಧಿಕರು ಹಾಗೂ ಸಾರ್ವಜನಿಕರು ಜಿಲ್ಲಾಸ್ಪತ್ರೆಗೆ ಮುತ್ತಿಗೆ ಹಾಕಿ ವೈದ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು. ಚಿಂದಿಗಿರಿದೊಡ್ಡಿ ನಿವಾಸಿ ಪ್ರಿಯಾಂಕ-ರವಿ ದಂಪತಿಯ ಮಗು ಪ್ರೀತಂ ಹಾಗೂ ಹೇಮಾವತಿ-ರವಿ ದಂಪತಿಯ ಮಗು ಭುವನ್‌ ಮೃತಪಟ್ಟಿವೆ. ಎರಡೂ ಮಕ್ಕಳು ಒಂದೂವರೆ ತಿಂಗಳ ಹಸುಗೂಸುಗಳು. ಅಸ್ವಸ್ಥಗೊಂಡಿರುವ ಇನ್ನೂ ಐದು ಹಸುಗೂಸುಗಳನ್ನು ಜಿಲ್ಲಾಸ್ಪ$ತ್ರೆಯ ಮಕ್ಕಳ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ಒಂದು ಮಗುವಿನ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಘಟನೆಯು ಪೋಷಕರಲ್ಲಿ ಆತಂಕ ಮೂಡಿಸಿದೆ.

ಏನಾಯ್ತು?: ಗುರುವಾರ ಮಧ್ಯಾಹ್ನ ಎಎನ್‌ಎಂ ಗೀತಾ, ಆಶಾ ಕಾರ್ಯಕರ್ತೆ ಪದ್ಮಾವತಿ ಅವರು ಚಿಂದಗಿರಿದೊಡ್ಡಿ ಗ್ರಾಮದಲ್ಲಿ ಬಾಣಂತಿಯರ ಮನೆಮನೆಗೆ ತೆರಳಿ ಒಂದೂವರೆ ತಿಂಗಳ ಮಕ್ಕಳಿಗೆ “ಪೆಂಟವಲೆಂಟ್‌’ ಹೆಸರಿನ ರೋಗನಿರೋಧಕ ಚುಚ್ಚುಮದ್ದು ನೀಡಿದ್ದಾರೆ.

ಚುಚ್ಚುಮದ್ದು ಕೊಟ್ಟ ಎರಡು ಗಂಟೆ ಬಳಿಕ ಸಂಜೆ 4ರ ವೇಳೆಗೆ ರವಿ-ಹೇಮಾವತಿ ಅವರ ಗಂಡು ಮಗು ಭುವನ್‌ ಜೋರಾಗಿ ಅಳಲು ಆರಂಭಿಸಿದೆ. ತಾಯಿ ಎಷ್ಟೇ ಮಗುವನ್ನು ಸಮಾಧಾನಪಡಿಸಿದರೂ ಅಳು ನಿಲ್ಲಿಸದ ಮಗು ಚಂಡಿ ಹಿಡಿದಿದೆ. ಹಾಲನ್ನೂ ಕುಡಿಯದೆ ಕಣ್ಣುಗಳನ್ನು ತೇಲಿಸಿದೆ. ಉಸಿರಾಡಲೂ ಕಷ್ಟ ಪಡುತ್ತಿದ್ದ ಮಗುವಿನ ಸ್ಥಿತಿಯನ್ನು ನೋಡಿದೆ ತಾಯಿ ಹೇಮಾವತಿ ಅವರು ಸಂಬಂಧಿಕರೊಂದಿಗೆ 4.30ರ ವೇಳೆ ಜಿಲ್ಲಾಸ್ಪ$ತ್ರೆಗೆ ಕರೆತಂದು ತೀವ್ರ ನಿಗಾ ಘಟಕಕ್ಕೆ ದಾಖಲಿಸಿದ್ದಾರೆ.

ತಾಯಿಯನ್ನೇ ದೂಷಿಸಿದ ವೈದ್ಯರು:
ಈ ವೇಳೆ ಮಗುವನ್ನು ಪರೀಕ್ಷಿಸಿದ ವೈದ್ಯರು, ಮಗುವಿಗೆ ಫಿಟ್ಸ್‌ ರೀತಿ ಆಗಿದೆ. ನೀವು ಹಾಲನ್ನು ಸರಿಯಾಗಿ ಕುಡಿಸಿಲ್ಲ. ಹೀಗಾಗಿ ಗಂಟಲು-ಅನ್ನನಾಳದಲ್ಲಿ ಹಾಲು ಸಿಲುಕಿರುವ ಸಾಧ್ಯತೆಯಿದೆ. ಮಗುವಿನ ಹೃದಯ ಕೂಡ ದುರ್ಬಲವಾಗಿದೆ. ನೀವು ಮೊದಲೇ ವೈದ್ಯರಿಗೆ ತೋರಿಲ್ಲವೇಕೆ ಎಂದು ಮಗುವಿನ ತಾಯಿಯನ್ನೇ ದೂಷಿಸಿದ್ದಾರೆ. ಇದನ್ನು ನಂಬಿದ ಪೋಷಕರು ಸುಮ್ಮನಾಗಿದ್ದಾರೆ. ಆದರೆ, ಚಿಕಿತ್ಸೆ ಫ‌ಲಕಾರಿಯಾಗದ ಮಗು ಶುಕ್ರವಾರ ಮೃತಪಟ್ಟಿದೆ.

Advertisement

ಮಗುವಿನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೋಷಕರು ವೈದ್ಯರನ್ನು ವಿಚಾರಿಸಿದಾಗ, ಬೇಕಿದ್ದರೆ ಶವಪರೀಕ್ಷೆ ಮಾಡಿಸಿ ಎಂದಿದ್ದಾರೆ. ಪುಟ್ಟ ಮಗುವಿನ ಶವ ಪರೀಕ್ಷೆ ಮಾಡಿಸಲು ಒಪ್ಪದ ಪೋಷಕರು, ಮಗುವಿನ ಕಳೆಬರವನ್ನು ಊರಿಗೆ ತಂದು ಸಂಜೆ ವೇಳೆ ಅಂತ್ಯಸಂಸ್ಕಾರ ನೆರವೇರಿಸಿದರು.

ಮತ್ತೂಂದು ಮಗು ಸಾವು: ಈ ಮಗು ಸಾವನ್ನಪ್ಪಿದ ಬೆನ್ನಲ್ಲೇ ರವಿ-ಪ್ರಿಯಾಂಕ ಎಂಬುವರ ಮಗು ಕೂಡ ಶುಕ್ರವಾರ ಸಂಜೆ ಮೊದಲ ಮಗುವಿನ ರೀತಿಯಲ್ಲೇ ಅಸ್ವಸ್ಥಗೊಂಡಿದೆ. ಇದೇ ವೇಳೆ ಚುಚ್ಚುಮದ್ದು ಕೊಡಿಸಿದ್ದ ಉಳಿದ ಮಕ್ಕಳಲ್ಲೂ ಇದೇ ಲಕ್ಷಣಗಳು ಕಾಣಿಸಿಕೊಂಡಿವೆ. ಹೀಗಾಗಿ ಎಲ್ಲ ಮಕ್ಕಳನ್ನು ಶುಕ್ರವಾರ ರಾತ್ರಿಯೇ ಜಿಲ್ಲಾಸ್ಪತ್ರೆಗೆ ಕರೆತಂದು ದಾಖಲಿಸಿದ್ದಾರೆ. ಆದರೆ, ರವಿ-ಪ್ರಿಯಾಂಕ ದಂಪತಿಯ ಮಗು ಪ್ರೀತಂ ಮಧ್ಯರಾತ್ರಿ 12.30ರ ಸಮಯದಲ್ಲಿ ಅಸುನೀಗಿದೆ. ಹೀಗಾಗಿ ಮಕ್ಕಳಿಗೆ ನೀಡಿದ ಚುಚ್ಚುಮದ್ದಿನ ಪರಿಣಾಮದಿಂದಲೇ ಅಸ್ವಸ್ಥಗೊಂಡಿರುವುದು ಪೋಷಕರನ್ನು ಆತಂಕಕ್ಕೀಡು ಮಾಡಿತು.

ಆಕ್ಸಿಜನ್‌ ಸೌಲಭ್ಯವಿಲ್ಲವೆಂದ ವೈದ್ಯರು:
ತೀವ್ರ ಅಸ್ವಸ್ಥಗೊಂಡ ಪ್ರೀತಂನನ್ನು ತಪಾಸಣೆ ನಡೆಸಿದ ವೈದ್ಯರು, ಮಗು ತುಂಬಾ ವೀಕ್‌ ಆಗಿದೆ. ತಕ್ಷಣವೇ ಆಕ್ಸಿಜನ್‌ ನೀಡಬೇಕು. ನಮ್ಮಲ್ಲಿ ಆ ಸೌಲಭ್ಯವಿಲ್ಲದ ಕಾರಣ ಮೈಸೂರಿನ ಚಲುವಾಂಬ ಆಸ್ಪತ್ರೆಗೆ ಕರೆದೊಯ್ಯಿರಿ ಎಂದು ಪೋಷಕರಿಗೆ ಸಲಹೆ ನೀಡಿದರು.

ಇದಾದ ಕೆಲ ಸಮಯದಲ್ಲೇ ವೈದ್ಯರು ಮೈಸೂರಿಗೆ ಹೋಗುವುದು ಬೇಡ, ಮಗುವಿಗೆ ಇಲ್ಲೇ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ಐಸಿಯುಗೆ ಕರೆದೊಯ್ದರು. ಪೋಷಕರಿಗೂ ಮಗುವನ್ನು ತೋರಿಸಲಿಲ್ಲ. ಇದರಿಂದ ಅನುಮಾನಗೊಂಡು ಜಗಳವಾಡಿದಾಗ ಮಗು ಮೃತಪಟ್ಟಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next