ಮಡಿಕೇರಿ: ಇಲ್ಲಿನ ಭಾಗಮಂಡಲದ ಬ್ರಹ್ಮಗಿರಿ ಬೆಟ್ಟ ಕುಸಿತ ದುರಂತದ ತೆರವು ಕಾರ್ಯಾಚರಣೆ ಮುಂದುವರಿದಿದ್ದು, ಅರ್ಚಕರಿಗೆ ಸೇರಿದ ಎರಡು ಕಾರುಗಳು ಪತ್ತೆಯಾಗಿದೆ.
ಮಣ್ಣಿನ ಅಡಿಯಲ್ಲಿ ಸಿಲುಕಿರುವ ನಾರಾಯಣ ಆಚಾರ್ ಮತ್ತು ಮೂವರಿಗಾಗಿ ಶೋಧ ಕಾರ್ಯ ಚುರುಕುಗೊಂಡಿದೆ. ಮೂರು ಹಿಟಾಚಿ, ಎನ್ಡಿಆರ್ಎಫ್, ಎಸ್ಡಿಆರ್ಎಫ್ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಬುಧವಾರ ರಾತ್ರಿ ಬೆಟ್ಟ ಕುಸಿದು ತಲಕಾವೇರಿ ದೇವಸ್ಥಾನದ ಅರ್ಚಕ ನಾರಾಯಣ ಆಚಾರ್, ಸಹೋದರ ಆನಂದ ತೀರ್ಥ, ಪತ್ನಿ ಶಾಂತ, ಸಹಾಯಕ ಅರ್ಚಕರಾದ ರವಿಕಿರಣ್ ಹಾಗೂ ಶ್ರೀನಿವಾಸ್ ಅವರು ನಾಪತ್ತೆಯಾಗಿದ್ದರು. ಈ ಪೈಕಿ ಆನಂದ ತೀರ್ಥ ಅವರ ಮೃತದೇಹ ಶನಿವಾರ ಪತ್ತೆಯಾಗಿತ್ತು. ಉಳಿದ ನಾಲ್ವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.
ಇಂದು ಕಾರ್ಯಾಚರಣೆ ವೇಳೆ ಒಂದು ಡಸ್ಟರ್ ಕಾರು ಮತ್ತು ಒಂದು ಅಂಬಾಸಡರ್ ಕಾರು ಪತ್ತೆಯಾಗಿದೆ. ಎರಡೂ ಕಾರುಗಳು ಜಖಂ ಗೊಂಡಿದ್ದು, ಜೆಸಿಬಿ ಯಂತ್ರದ ಸಹಾಯದಿಂದ ತೆಗೆಯಲಾಯಿತು.
ಸೋಮವಾರದ ಕಾರ್ಯಾಚರಣೆಯ ವೇಳೆ ನಾರಾಯಣಾಚಾರ್ ಅವರ ಮನೆಯ ಕೆಲವು ಪಾತ್ರೆಗಳು, ಪೂಜಾ ಸಾಮಾಗ್ರಿಗಳು ಮತ್ತು ಬಟ್ಟೆಗಳು ಲಭ್ಯವಾಗಿತ್ತು. ನಾರಾಯಣಾಚಾರ್ ಅವರ ವಿದೇಶದಲ್ಲಿ ನೆಲೆಸಿದ್ದ ಪುತ್ರಿಯರು ಸೋಮವಾರ ಸ್ಥಳಕ್ಕೆ ಆಗಮಿಸಿದ್ದಾರೆ.