ಗ್ರೇಟರ್ ನೋಯ್ಡಾ: ನಗರದ ಶಾಬೇರಿ ಎಂಬಲ್ಲಿ ನಿರ್ಮಾಣ ಹಂತದ 2 ಬಹುಮಹಡಿ ಕಟ್ಟಡಗಳು ಮಂಗಳವಾರ ತಡರಾತ್ರಿ ಕುಸಿದು ಬಿದ್ದಿದ್ದು,ಮೂವರು ಸಾವನ್ನಪ್ಪಿದ್ದಾರೆ. 50 ಕ್ಕೂ ಹೆಚ್ಚು ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
6 ಮಹಡಿಯ ನಿರ್ಮಾಣ ಹಂತದ ಕಟ್ಟಡ ಕುಸಿದು ಇನ್ನೊಂದು ಕಟ್ಟಡದ ಮೇಲೆ ಬಿದ್ದಿರುವುದಾಗಿ ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಸ್ಥಳಕ್ಕೆ ಎನ್‌ಡಿಆರ್‌ಎಫ್, ಅಗ್ನಿ ಶಾಮಕದಳದ ಸಿಬಂದಿಗಳು ಆಗಮಿಸಿದ್ದು ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ.
ಫ್ಲ್ಯಾಟ್‌ಗಳನ್ನು ಜನರಿಂದ ಹಣ ಪಡೆದು ನಿರ್ಮಾಣ ಮಾಡಲಾಗುತ್ತಿತ್ತು ಎನ್ನಲಾಗಿದ್ದು ಕಳಪೆ ಕಾಮಗಾರಿಯಿಂದ ಕುಸಿದು ಬಿದ್ದಿದ್ದು ಹಣ ನೀಡಿದವರು ಮರಳಿಸುವಂತೆ ಆಗ್ರಹಿಸಿದ್ದಾರೆ.
ಭೂಮಿಯ ಮಾಲಿಕ ಗಂಗಾ ಶರಣ್ ದ್ವಿವೇದಿ ಯನ್ನು ಪೊಲೀಸರು ಬಂಧಿಸಿದ್ದು ಎಫ್ಐಆರ್ ದಾಖಲಿಸಿದ್ದಾರೆ. ಅವಘಡದ ಕುರಿತು ಡಿಸಿ ತನಿಖೆಗೆ ಆದೇಶಿಸಿದ್ದಾರೆ.
ಸಾವಿನ ಸಂಖ್ಯೆ ಹೆಚ್ಚುವ ಎಲ್ಲಾ ಸಾಧ್ಯತೆ
ಅವಶೇಷಗಳಡಿ 50 ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿದ್ದಾರೆ ಎನ್ನಲಾಗಿದ್ದು ಸಾವಿನ ಸಂಖ್ಯೆ ಹೆಚ್ಚುವ ಎಲ್ಲಾ ಸಾಧ್ಯತೆಗಳಿವೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.