ಬೆಂಗಳೂರು: ಗಾಂಧಿನಗರದಲ್ಲಿ ಕಪಾಲಿ ಚಿತ್ರಮಂದಿರ ಇದ್ದ ಪ್ರದೇಶದಲ್ಲಿ ನೂತನ ಬಹುಮಹಡಿ ಕಟ್ಟಡ ನಿರ್ಮಾಣ ಮಾಡುವ ಸಂದರ್ಭದಲ್ಲಿ ಪಕ್ಕದ ಎರಡು ಕಟ್ಟಡಗಳ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಯು ಭಾರತೀಯ ವಿಜ್ಞಾನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕರಾದ ಡಾ.ಶ್ರೀನಿವಾಸ್ ಮೂರ್ತಿ ನೇತೃತ್ವದಲ್ಲಿ ತಾಂತ್ರಿಕ ಸಮಿತಿ ರಚನೆ ಮಾಡಿದೆ.
ಕಟ್ಟಡ ನಿರ್ಮಾಣ ಮಾಡುತ್ತಿದ್ದ ಮಾಲೀಕರ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ಹಂತದ ತನಿಖೆಯಲ್ಲೇ ಪತ್ತೆಯಾಗಿತ್ತಾದರೂ, ಕಟ್ಟಡ ಕುಸಿತಕ್ಕೆ ತಾಂತ್ರಿಕ ಕಾರಣ ಏನು ಎನ್ನುವುದು ಪತ್ತೆಯಾಗಿರಲಿಲ್ಲ. ಹೀಗಾಗಿ, ಪಾಲಿಕೆ ತಾಂತ್ರಿಕ ಸಮಿತಿ ರಚನೆ ಮಾಡಿ ಆದೇಶ ಮಾಡಿದೆ.
ಜು.28ರ ರಾತ್ರಿ ಗಾಂಧಿನಗರದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡುವ ಉದ್ದೇಶಕ್ಕಾಗಿ 60 ಅಡಿ ಆಳದ ಗುಂಡಿ ಅಗೆಯಲಾಗಿತ್ತು. ಆದರೆ, ಮುಂಜಾಗ್ರತಾ ಕ್ರಮ ಅನುಸರಿಸದ ಹಿನ್ನೆಲೆಯಲ್ಲಿ ಉದ್ದೇಶಿತ ಕಟ್ಟಡದ ಪಕ್ಕದಲ್ಲಿದ್ದ ಎರಡು ಬಹುಮಹಡಿ ಕಟ್ಟಡಗಳು ಕುಸಿದಿದ್ದವು. ಕಟ್ಟಡಗಳ ಕುಸಿತಕ್ಕೆ ತಾಂತ್ರಿಕ ಕಾರಣ ತಿಳಿದುಕೊಳ್ಳಲು ಪಾಲಿಕೆ ಮುಂದಾಗಿದ್ದು, ಸಮಿತಿಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಡಾ.ಶ್ರೀನಿವಾಸ್ ಮೂರ್ತಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಎಂಜಿನಿಯರ್ ಸದಸ್ಯ ಡಾ.ಶಾಂತರಾಜನ್ ಹಾಗೂ ಬಿಬಿಎಂಪಿ ನಗರ ಯೋಜನಾ ವಿಭಾಗದ ಹೆಚ್ಚುವರಿ ನಿರ್ದೇಶಕ ಪ್ರಸಾದ್ ಇದ್ದಾರೆ. ಇನ್ನು ಬಿಬಿಎಂಪಿ ನಗರ ಯೋಜನೆ ವಿಭಾಗದ ಹೆಚ್ಚುವರಿ ನಿರ್ದೇಶಕ ಪ್ರಸಾದ್ ಅವರು ಸಮಿತಿಯ ಸಂಯೋಜಕರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಸಮಿತಿಯಿಂದ ಮಾಹಿತಿ ಕಲೆ: ಕಟ್ಟಡ ಕುಸಿತಕ್ಕೆ ಸಂಬಂಧಿಸಿದಂತೆ ತನಿಖೆ ಪ್ರಾರಂಭಿಸಿರುವ ಸಮಿತಿ ಸದಸ್ಯರು ಈ ಭಾಗದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಪಾಲಿಕೆಯಿಂದ ನೀಡಲಾಗಿದ್ದ ನಕ್ಷೆ ಮಂಜೂರಾತಿ, ಕಟ್ಟಡ ವಿನ್ಯಾಸ ಹಾಗೂ ಯಾವಾಗ ಅನುಮತಿ ನೀಡಲಾಗಿತ್ತು ಎಂಬ ವಿವರ ನೀಡುವಂತೆ ನಿವೇಶನ ಮಾಲಿಕರಿಗೆ ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಕಾಮಗಾರಿ ಸ್ಥಳದ ಸಮೀಪದಲ್ಲಿನ ಉಳಿದ ಕಟ್ಟಡಗಳಿಗೆ ಅಪಾಯವಾಗುವ ಸಾಧ್ಯತೆ ಇದೆಯೇ ಎಂದು ಪರಿಶೀಲನೆ ನಡೆಸಲಿದ್ದಾರೆ ಎಂದು ಬಿಬಿಎಂಪಿಯ ಅಧಿಕಾರಿಗಳು ತಿಳಿಸಿದ್ದಾರೆ.