ಲಕ್ನೋ: ಪಾಯಸದಲ್ಲಿ ಅಮಲು ಪದಾರ್ಥವನ್ನು ಬೆರೆಸಿ ಅತ್ತೆ – ಮಾವ ಹಾಗೂ ಪತಿಯಂದಿರಿಗೆ ಕೊಟ್ಟು ನವವಧುಗಳು ಚಿನ್ನಾಭರಣದೊಂದಿಗೆ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಹರ್ದೋಯಿಯಲ್ಲಿ ನಡೆದಿದೆ.
ಘಟನೆ ಹಿನ್ನೆಲೆ: ಇತ್ತೀಚೆಗೆ (ನ.22 ರಂದು) ಸಹೋದರರಾದ ಕುಲ್ ದೀಪ್(30) ಹಾಗೂ ಪ್ರದೀಪ್ (29) ಸೀತಾಪುರ ಮೂಲದ ಸಹೋದರಿಯರಾದ ಆರತಿ, (23) ಪೂಜಾ (22) ಅವರನ್ನು ವಿವಾಹವಾಗಿದ್ದರು. ಕಾಳಿ ಮಾತಾ ದೇವಸ್ಥಾನದಲ್ಲಿ ಹಲವಾರು ಗ್ರಾಮಸ್ಥರ ಸಮ್ಮುಖದಲ್ಲಿ ವಿವಾಹ ನೆರವೇರಿತ್ತು. ವಿವಾಹದ ಬಳಿಕ ಗಂಡನ ಮನೆಗೆ ಬಂದ ನವವಧುಗಳು ಮೊದಲ ರಾತ್ರಿಯಂದು ಮನೆಯವರಿಗೆ ಪಾಯಸವನ್ನು ಮಾಡಿಕೊಟ್ಟಿದ್ದಾರೆ.
ಪಾಯಸದಲ್ಲಿ ನಿದ್ರೆ ಬರುವ ಪದಾರ್ಥ ಬೆರಸಿ ಕೊಟ್ಟಿದ್ದು, ಕೆಲ ನಿಮಿಷದ ಬಳಿಕ ಪಾಯಸ ಸೇವಿಸಿದ ಗಂಡಂದಿರು ಹಾಗೂ ಅತ್ತೆ – ಮಾವ ನಿದ್ರೆಗೆ ಜಾರಿದ್ದಾರೆ. ಇತ್ತ ಸಹೋದರಿಯರು ಅತ್ತೆಯ ಬಳಿಯಿದ್ದ ನಗದು, ಆಭರಣಗಳು ಮತ್ತು ಮೊಬೈಲ್‌ಗಳೊಂದಿಗೆ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತ ನಿದ್ರೆಗೆ ಜಾರಿದ್ದ ಮನೆಯವರು ಗುರುವಾರ(ನ.23 ರಂದು) ಮಧ್ಯಾಹ್ನ ಎದ್ದಾಗ ಮನೆಯಿಂದ ನವವಧುಗಳ ದರೋಡೆ ಕೃತ್ಯ ಬೆಳಕಿಗೆ ಬಂದಿದೆ. ಇದಾದ ಬಳಿಕ ಕುಲ್ ದೀಪ್ ಹಾಗೂ ಪ್ರದೀಪ್ ಪೊಲೀಸರಿಗೆ ಪತ್ನಿಯರು ಹಾಗೂ ದಲ್ಲಾಳಿ ವಿರುದ್ಧ ದೂರು ನೀಡಿದ್ದಾರೆ.
ದೂರಿನಲ್ಲಿ ಏನಿದೆ: ರಾಜ್ ಕುಮಾರ್ ಎಂಬ ದಲ್ಲಾಳಿಯಲ್ಲಿ ಪ್ರದೀಪ್ – ಕುಲ್ ದೀಪ್ ಅವರ ತಾಯಿ ಸೂಕ್ತ ವಧುವಿನ ಸಂಬಂಧ ಹುಡುಕಲು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ ಕುಮಾರ್ ಕೆಲ ದಿನಗಳ ನಂತರ ಆರತಿ ಹಾಗೂ ಪೂಜಾ ಎನ್ನುವವರ ಸಂಬಂಧದ ಬಗ್ಗೆ ಹೇಳಿದ್ದಾರೆ. ನಮ್ಮ ಮದುವೆಯನ್ನು ನಿಗದಿಪಡಿಸಿದ ಬಳಿಕ ಬುಧವಾರ ಬೆಳಗ್ಗೆ ಇಬ್ಬರು ಸಹೋದರಿಯರನ್ನು ನಮ್ಮ ಗ್ರಾಮಕ್ಕೆ ಕರೆತಂದರು ಮತ್ತು ಅವರ ಸೇವೆಗಾಗಿ( ಸಂಬಂಧ ಹುಡುಕಿದ್ದಕ್ಕಾಗಿ) ನಮ್ಮ ತಾಯಿಯಿಂದ 80,000 ತೆಗೆದುಕೊಂಡು ಹಿಂತಿರುಗಿದರು ಎಂದು ದೂರಿನಲ್ಲಿ ಹೇಳಿದ್ದಾರೆ.
ಸದ್ಯ ಈ ಬಗ್ಗೆ ತಾಂಡಿಯಾವ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆರತಿ ಹಾಗೂ ಪೂಜಾ ಅವರ ಪತ್ತೆಗೆ ಬಲೆ ಬೀಸಲಾಗಿದೆ.