ಮಲ್ಪೆ: ಮಲ್ಪೆ ಬಂದರಿನಲ್ಲಿ ಲಂಗರು ಹಾಕಿದ್ದ ಎರಡು ಮೀನುಗಾರಿಕೆ ಬೋಟ್‌ಗಳು ನೀರಿನ ಸೆಳೆತಕ್ಕೆ ಕೊಚ್ಚಿ ಹೋಗುತ್ತಿರುವುದನ್ನು ಗಮನಿಸಿದ ಮೇಘರಾಜ್ ಅವರು ಸಕಾಲದಲ್ಲಿ ಸಣ್ಣ ದೋಣಿಯ ಸಹಾಯದಿಂದ ರಕ್ಷಿಸಿ ಎರಡೂ ಬೋಟುಗಳನ್ನು ಜೆಟ್ಟಿ ಬಳಿ ತರುವ ಮೂಲಕ ಭಾರಿ ಅನಾಹುತವನ್ನು ತಪ್ಪಿಸಿದ್ದಾರೆ.
ಘಟನೆ ಶುಕ್ರವಾರ ಮಂಜಾನೆ ನಡೆದಿದ್ದು, ಶ್ರೀಲಕ್ಷ್ಮೀ ಮತ್ತು ಹನುಮ ಪುಷ್ಪ ಹೆಸರಿನ ಎರಡು ಆಳಸಮುದ್ರ ಬೋಟನ್ನು ರಕ್ಷಿಸಲಾಗಿದೆ. ಮಳೆಗಾಲದ ಮೀನುಗಾರಿಕೆ ನಿಷೇಧದ ಹಿನ್ನೆಲೆಯಲ್ಲಿ ಬಂದರಿನ ಪಶ್ಚಿಮ ಭಾಗದಲ್ಲಿರುವ ಮೀನುಗಾರಿಕೆ ಜೆಟ್ಟಿ ಬಳಿ ಈ ಎರಡು ಬೋಟ್‌ಗಳನ್ನು ಲಂಗರು ಹಾಕಲಾಗಿತ್ತು.
ಮುಂಜಾನೆ ಸುಮಾರು 5-30ರ ವೇಳೆಗೆ ಸೇತುವೆಯ ಬಳಿ ಹೊಳೆಯಲ್ಲಿ ಬೋಟು ತೇಲುತ್ತಿರುವುದನ್ನು ನೋಡಿದವರು ಹನುಮ ಪುಷ್ಪ ಬೋಟಿನ ಮೀನು ಇಳಿಸುವ ಮೇಘರಾಜ್ ಅವರಿಗೆ ತಿಳಿಸಿದರು. ಬಂದರಿನಲ್ಲಿಯೇ ಇದ್ದ ಮೇಘರಾಜ್ ಅವರು ತತ್‌ಕ್ಷಣ ಧಾವಿಸಿ ಬಂದು ಸಂದೇಶ್ ಮತ್ತು ನವೀನ್ ಅವರ ನೆರವಿನಲ್ಲಿ ಸಣ್ಣ ದೋಣಿಯಿಂದ ತೆರಳಿ ಎರಡೂ ಬೋಟ್‌ಗಳನ್ನು ರಕ್ಷಿಸಿ ಜೆಟ್ಟಿ ಬಳಿ ತಂದಿದ್ದಾರೆ.
ತೆರವುಗೊಳಿಸುವ ಭರದಲ್ಲಿಬೋಟು ಲಂಗರು ಹಾಕಿದ ಸಮೀಪದಲ್ಲಿದ್ದ ಅನ್ಯ ಬೋಟಿನವರು ಮೀನುಗಾರಿಕೆಗೆ ತೆರಳುವ ಭರದಲ್ಲಿ ಈ ಎರಡು ಬೋಟಿನ ಹಗ್ಗವನ್ನು ಕಡಿದು ತಮ್ಮ ಬೋಟನ್ನು ತೆರವುಗೊಳಿಸಿದ್ದಾರೆನ್ನಲಾಗಿದ್ದು, ಕಡಿದ ಹಗ್ಗವನ್ನು ಹಾಗೆ ಬಿಟ್ಟು ಹೋಗಿ ಬೇಜವಾಬ್ದಾರಿ ಪ್ರದರ್ಶಿಸಿದರಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಸಮುದ್ರಪಾಲಾಗಲಿತ್ತು
ಬೋಟು ಕಟ್ಟಿದ ಸ್ಥಳದಿಂದ 500 ಮೀ ದೂರ ಬೋಟ್ ತೇಲುತ್ತ ಹೋಗಿತ್ತು. ಆ ವೇಳೆ ಸಮುದ್ರದ ಉಬ್ಬರದಿಂದಾಗಿ ನೀರು ಒಳ ಸೇರುತ್ತಿದ್ದದರಿಂದ ಬೋಟು ಪೂರ್ವ ದಿಕ್ಕಿನಲ್ಲಿ ಹೊಳೆಯಲ್ಲಿ ಸಾಗುತ್ತಿತ್ತು. ಒಂದು ವೇಳೆ ಸಮುದ್ರದ ನೀರು ಇಳಿತವಾಗಿದ್ದರೆ ಎರಡೂ ಬೋಟುಗಳು ಸಮುದ್ರಪಾಲಾಗಿ ಅಪಾರ ನಷ್ಟವಾಗುವ ಸಾಧ್ಯತೆ ಇತ್ತೆನ್ನಲಾಗಿದೆ.
ಶಾಶ್ವತ ಪರಿಹಾರ ಕಲ್ಪಿಸಿ
ಮಲ್ಪೆ ಬಂದರಿನಲ್ಲಿ ಎರಡೂವರೆ ಸಾವಿರಕ್ಕೂ ಅಧಿಕ ದೋಣಿಗಳಿದ್ದು ಅವೆಲ್ಲವನ್ನು ಮಳೆಗಾಲದಲ್ಲಿ ಲಂಗರು ಹಾಕಲು ಬಂದರಿನಲ್ಲಿ ಸ್ಥಳಾವಕಾಶ ಸಾಲದು, ಹಾಗಾಗಿ ಬಹುತೇಕ ದೋಣಿಗಳನ್ನು ಧಕ್ಕೆಯ ಹೊರಭಾಗದಲ್ಲಿ ಒಂದಕ್ಕೊಂದು ತಾಗಿಕೊಂಡು ಸುಮಾರು 10-12 ಸಾಲುಗಳಂತೆ ನಿಲ್ಲಿಸಬೇಕಾಗುತ್ತದೆ. ಇದರಿಂದ ಸೂಕ್ತ ರಕ್ಷಣೆ ಇಲ್ಲದ ಕಾರಣ ಹಾನಿಗೊಳಗಾಗುವ ಸಾಧ್ಯತೆ ಹೆಚ್ಚು. ಇನ್ನು ಕೆಲವರು ಕಡಿದ ದೋಣಿಯ ಹಗ್ಗವನ್ನು ಮತ್ತೆ ಕಟ್ಟದೇ ಬೇಜವಾಬ್ದಾರಿಯಿಂದ ಹಾಗೆಯೇ ಬಿಟ್ಟು ಹೋಗುತ್ತಾರೆ. ಇದರಿಂದಾಗಿ ಬೋಟುಗಳು ಸಮುದ್ರಪಾಲಾಗುವ ಸಾಧ್ಯತೆ ಹೆಚ್ಚು. ಇಲ್ಲಿನ ಈ ಸಮಸ್ಯೆಯ ಬಗ್ಗೆ ಶಾಶ್ವತ ಪರಿಹಾರ ಕಲ್ಪಿಸಲು ಮೀನುಗಾರರು ಆಗ್ರಹಿಸಿವನ್ನು ಇದುವರೆಗೂ ಯಾವ ಸರಕಾರವೂ ಒದಗಿಸಿಲ್ಲ ಎಂದು ಬೋಟು ಮಾಲಕ ರಮೇಶ್ ತಿಂಗಳಾಯ ತಮ್ಮ ಆಳಲನ್ನು ತೋಡಿಕೊಂಡಿದ್ದಾರೆ.