ಹೊಸದಿಲ್ಲಿ : ನಿಷ್ಠುರ ಮಾತಿನ ಹಿರಿಯ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಪಕ್ಷದ ಚುನಾವಣಾ ಪ್ರಣಾಳಿಕೆ ‘ಸಂಕಲ್ಪ ಪತ್ರ’ ದಲ್ಲಿ ಎರಡು ಪ್ರಮಾದಗಳಿವೆ ಎಂದು ಬಹಿರಂಗವಾಗಿ ಹೇಳುವ ಮೂಲಕ ತನ್ನದೇ ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡಿದ್ದಾರೆ.
ಮೊನ್ನೆ ಸೋಮವಾರ ಬಿಜೆಪಿ ತನ್ನ ಸಂಕಲ್ಪ ಪತ್ರವನ್ನು ಅನಾವರಣಗೊಳಿಸಿತ್ತು. ಅದರಲ್ಲಿ ಪಕ್ಷವು 2022ರೊಳಗೆ ದೇಶದ ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವ ಭರವಸೆಯನ್ನು ನೀಡಲಾಗಿತ್ತು.
2022 ರೊಳಗೆ ರೈತರ ಆದಾಯ ದುಪ್ಪಟ್ಟು ಆಗಬೇಕಿದ್ದರೆ ದೇಶ ವರ್ಷಂಪ್ರತಿ ಶೇ.24ರ ಆರ್ಥಿಕ ಪ್ರಗತಿಯನ್ನು ಸಾಧಿಸಬೇಕಾಗುತ್ತದೆ. ಭಾರತ ಮುಂಬರುವ ವರ್ಷಗಳಲ್ಲಿ ಅಬ್ಬಬ್ಟಾ ಎಂದರೆ ಶೇ.10ರ ಆರ್ಥಿಕ ಪ್ರಗತಿಯನ್ನು ಸಾಧಿಸಬಹುದು. ಅಂತಿರುವಾಗ ಶೇ.24 ರ ಆರ್ಥಿಕ ಪ್ರಗತಿ ಅಸಾಧ್ಯ ಮತ್ತು ಕೇವಲ ಮರೀಚಿಕೆ; ಆ ಕಾರಣಕ್ಕೆ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಕಂಡುಬರುತ್ತಿರುವ ಪ್ರಮಾದ ಇದಾಗಿದೆ ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ.
ಭಾರತದ ನಿವ್ವಳ ಆಂತರಿಕ ಉತ್ಪನ್ನ ವಿಶ್ವದ ಮೂರನೇ ಬೃಹತ್ ಹೊರತು ಆರನೇ ಬೃಹತ್ ಅಲ್ಲ; ಅಂತೆಯೇ ಇದು ಸಂಕಲ್ಪ ಪತ್ರದಲ್ಲಿ ಆಗಿರುವ ಎರಡನೇ ಪ್ರಮಾದವಾಗಿದೆ ಎಂದು ಸ್ವಾಮಿ ಹೇಳಿದ್ದಾರೆ.
‘ಈ ಎರಡು ಪ್ರಮಾದಗಳನ್ನು ಸರಿಪಡಿಸುವಂತೆ ನಾನು ರಾಜನಾಥ್ ಸಿಂಗ್ ಅವರಿಗೆ ಹೇಳಿದ್ದೇನೆ’ ಎಂದು 79ರ ಹರೆಯದ ಅರ್ಥ ಶಾಸ್ತ್ರಜ್ಞ ಮತ್ತು ಹಾರ್ವರ್ಡ್ ವಿವಿ ಹಳೆ ವಿದ್ಯಾರ್ಥಿಯಾಗಿರುವ ಸುಬ್ರಮಣಿಯನ್ ಸ್ವಾಮಿ ತಮ್ಮ ಟ್ವೀಟ್ ನಲ್ಲಿ ಹೇಳಿದ್ದಾರೆ.
ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ಬಿಜೆಪಿ ಚುನಾವಣಾ ಪ್ರಣಾಳಿಕೆ ಸಂಕಲ್ಪ ಪತ್ರವನ್ನು ಸಿದ್ಧಪಡಿಸಿರುವ 20 ಸದಸ್ಯರ ಸಮಿತಿಯ ಮುಖ್ಯಸ್ಥರಾಗಿದ್ದಾರೆ.