ಹುಬ್ಬಳ್ಳಿ: ಆಟೋ ರಿಕ್ಷಾ ಚಾಲನೆ ಮಾಡುವ ನೆಪದಲ್ಲಿ ಅವಳಿ ನಗರದಲ್ಲಿ ಕಳೆದ ಐದು ವರ್ಷಗಳಿಂದ ಮಹಿಳೆಯರ ಚಿನ್ನದ ಸರ ದೋಚುತ್ತಿದ್ದ ಇಬ್ಬರನ್ನು ಹಳೇಹುಬ್ಬಳ್ಳಿ ಪೊಲೀಸರು ಬಂಧಿಸಿ, ಅವರಿಂದ ಅಂದಾಜು 8.91 ಲಕ್ಷ ರೂ. ಮೌಲ್ಯದ 237 ಗ್ರಾಂ ಚಿನ್ನಾಭರಣ ಹಾಗೂ ಒಂದು ಆಟೋ ರಿಕ್ಷಾ ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಆಟೋ ರಿಕ್ಷಾ ಚಾಲಕರಾದ ವಿಜಯನಗರ ಹತ್ತಿರದ ಮಾಧವ ನಗರದ ಸುಭಾನ ಎಚ್. ಗಾಡಿ ಹಾಗೂ ಗೋಪನಕೊಪ್ಪ ಸ್ವಾಗತ ಕಾಲೋನಿಯ ಹಜರೇಸಾಬ್ ಊರ್ಫ್ ಬಾಯಿಜಾನ್ ಜಿ. ಜೇಂದಿ ಬಂಧಿತರಾಗಿದ್ದಾರೆ ಎಂದರು.
ಬಂಧಿತರಲ್ಲಿ ಸುಭಾನಿ ಫೆ.2ರಂದು ಗೋಕುಲ ರಸ್ತೆ ಶಂಭಾಗಿ ಲೇಔಟ್ ರಸ್ತೆ ಮುಖಾಂತರ ವಾಸವಿ ಕಲ್ಯಾಣ ಮಂಟಪಕ್ಕೆ ಕುಟುಂಬ ಸಮೇತರಾಗಿ ಮದುವೆ ಕಾರ್ಯಕ್ರಮಕ್ಕೆ ಹೊರಟಿದ್ದ ಲೀಲಾ ಸೋಳಂಕಿ ಎಂಬುವವರ ಮಂಗಲಸೂತ್ರವನ್ನು ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ್ದ. ಆಗ ಸಾರ್ವಜನಿಕರು ಹಿಡಿದು ಹಳೇಹುಬ್ಬಳ್ಳಿ ಪೊಲೀಸರಿಗೆ ಒಪ್ಪಿಸಿದ್ದರು.
ಅವನನ್ನು ನ್ಯಾಯಾಲಯದ ಅನುಮತಿ ಮೇರೆಗೆ ವಿಚಾರಣೆಗೊಳಪಡಿಸಿದಾಗ ಈತನೊಂದಿಗಿದ್ದ ಹಜರೇಸಾಬ್‌ನನ್ನು ಬಂಧಿಸಲಾಯಿತು. ಇವರೊಂದಿಗೆ ಇದ್ದ ಇನ್ನೊಬ್ಬ ಪರಾರಿಯಾಗಿದ್ದು, ಅವಳಿ ನಗರದ ವಿವಿಧೆಡೆ 2012ರಿಂದ ಇಲ್ಲಿಯ ತನಕ ಒಟ್ಟು 9 ಕಡೆ ಸರಗಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಇನ್ಸ್‌ಪೆಕ್ಟರ್ ಶ್ರೀಪಾದ ಜಲೆª ನೇತೃತ್ವದ ತಂಡ ಉತ್ತಮ ಕಾರ್ಯ ಮಾಡಿದೆ ಎಂದರು.
ಆಟೋ ರಿಕ್ಷಾಗಳ ಮೇಲೆ ತೀವ್ರ ನಿಗಾ: ಆಟೋ ರಿಕ್ಷಾ ಚಾಲಕರು ಕೆಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವುದು ಕಂಡುಬಂದಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೊಸದಾಗಿ ಬಿಡುಗಡೆ ಮಾಡಲಾಗುವ ಮೊಬೈಲ್ ಆ್ಯಪ್ ಗಳನ್ನು ಆಟೋ ರಿಕ್ಷಾಗಳ ಮೇಲೆ ತೀವ್ರ ನಿಗಾ ಇರಿಸಲು ಬಳಸಲಾಗುವುದು. ಆ ಮೂಲಕ ಸಂಚಾರ ನಿಯಮ ಉಲ್ಲಂಘನೆ, ಅಪರಾಧ ಕೃತ್ಯಗಳಿಗೆ ಬಳಕೆ ಮಾಡಿದ ರಿಕ್ಷಾಗಳನ್ನು ಪತ್ತೆ ಮಾಡಲಾಗುವುದು ಎಂದರು.
50 ಸಂಚಾರ ಆ್ಯಪ್ ಬಿಡುಗಡೆ: ಸಂಚಾರ ಮೊಬೈಲ್ ಆ್ಯಪ್‌ನಿಂದ ಅವಳಿ ನಗರದಲ್ಲಿ ಸಂಚಾರದಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ. ಕಳೆದ 15 ದಿನಗಳಲ್ಲಿ 37,14,500 ರೂ. ಸ್ಥಳದಲ್ಲೆ ದಂಡ ವಿಧಿಸಲಾಗಿದೆ. 9500 ಜನರಿಗೆ ನೊಟೀಸ್ ಜಾರಿ ಮಾಡಲಾಗಿದೆ. ವಾರದೊಳಗೆ ಇನ್ನು 50 ಆ್ಯಪ್‌ಗ್ಳನ್ನು ಬಿಡುಗಡೆ ಮಾಡಲಾಗುವುದು ಎಂದರು.